More

    ಯೋಜನೆ ಸಾಧಕ ಬಾಧಕ ಚರ್ಚಿಸದ ಸಿಎಂ

    ರಟ್ಟಿಹಳ್ಳಿ: ಮುಖ್ಯಮಂತ್ರಿ ಯಡಿಯೂರಪ್ಪ ತುಂಗಭದ್ರಾ ನದಿಯಿಂದ ಅವರ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಹೊರಟಿದ್ದಾರೆ. ಯೋಜನೆ ಮಾಡಬಹುದಾ ಎಂಬುದರ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ದರ್ಪದಿಂದ ಈ ಯೋಜನೆ ಮಾಡುತ್ತಿದ್ದಾರೆ. ಒಂದು ವೇಳೆ ಈ ಯೋಜನೆ ಜಾರಿಯಾದ್ರೆ ಹಿರೇಕೆರೂರು ತಾಲೂಕಿನಲ್ಲಿರುವ ಕುಡಿಯುವ ನೀರಿನ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

    ಪಟ್ಟಣದಲ್ಲಿ ಶಿಕಾರಿಪುರ ಏತ ನೀರಾವರಿ ಯೋಜನೆಗೆ ರಟ್ಟಿಹಳ್ಳಿ-ಹಿರೇಕೆರೂರ ತಾಲೂಕಿನ ರೈತರ ಭೂಮಿ ಸ್ವಾಧೀನ ವಿರೋಧಿಸಿ ರೈತರು ಹಮ್ಮಿಕೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.

    ರಾಜ್ಯದಲ್ಲಿರುವ ಸರ್ಕಾರ ದಪ್ಪ ಚರ್ಮದ್ದಾಗಿದೆ. ಅದು ಎಮ್ಮೆಯ ಚರ್ಮದ್ದಲ್ಲ. ಘೇಂಡಾ ಮೃಗದ ಸರ್ಕಾರ. ಸರ್ಕಾರದ ಎಲ್ಲ ಇಂದ್ರಿಯಗಳೂ ಹೋಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಕ್ಷೇತ್ರದವರೇ ಕೃಷಿ ಸಚಿವರಿದ್ದಾರೆ. ಅವರು ಬಂದು ಕೇಳಬಹುದಿತ್ತು. ಆದರೆ, ಈವರೆಗೂ ರೈತರನ್ನೇ ಭೇಟಿ ಆಗಿಲ್ಲ. ನನ್ನ ಪ್ರಕಾರ ಈ ಹೋರಾಟದ ಸ್ಥಳಕ್ಕೆ ಸಿಎಂ ಯಡಿಯೂರಪ್ಪ ಅವರೇ ಬರಬೇಕು. ಬ್ರಿಟಿಷರ ಕಾಲದಲ್ಲಿಯೇ ಆಮರಣಾಂತ ಉಪವಾಸ ಮಾಡೋರನ್ನ ಎಬ್ಬಿಸುತ್ತಿದ್ದರು. ಆದರೆ, ಈ ಸರ್ಕಾರ ಕಿವುಡಾಗಿದೆ. ಇಂತಹ ಕೆಟ್ಟ ಸರ್ಕಾರವನ್ನು ನಾನೆಂದೂ ನೋಡಿರಲಿಲ್ಲ. ರೈತರಿಗೆ ಮೋಸ ಮಾಡುವ ಇಂತಹ ಯೋಜನೆಯನ್ನು ಕೈಬಿಡುವ ಕುರಿತು ನಾನು ಸಿಎಂ ಜೊತೆಗೆ ರ್ಚಚಿಸುತ್ತೇನೆ. ಈ ಹೋರಾಟದಲ್ಲಿ ರೈತರು ಹೆಚ್ಚು ಹೆಚ್ಚು ಭಾಗವಹಿಸಬೇಕು. ಹೋರಾಟ ಇನ್ನೂ ತೀವ್ರಗೊಳ್ಳಬೇಕು ಎಂದು ಕರೆಕೊಟ್ಟರು.

    ಯಡಿಯೂರಪ್ಪ ರೈತನ ಮಗ ಅಂತಾ ಹಣೆ ಮೇಲೆ ಅಂಟಿಸಿಕೊಂಡಿದ್ದಾರೆಯೇ. ಕೃಷಿ ಕೆಲಸವನ್ನೇ ಮಾಡದ ಇವರು ಪದೇಪದೆ ರೈತನ ಮಗ, ಮಣ್ಣಿನ ಮಗ, ಅಂತಾರೆ. ಪ್ರಮಾಣವಚನ ಸಮಯದಲ್ಲಿ ಹಸಿರು ಶಾಲು ಹಾಕುತ್ತಾರೆ. ನಂತರ ತೆಗೆದು ಹಾಕ್ತಾರೆ. ಬಿ.ಸಿ. ಪಾಟೀಲ ಪೊಲೀಸ್ ಅಧಿಕಾರಿ ಆಗಿದ್ದವರು. ಈಗ ಹಸಿರು ಶಾಲು ಹಾಕ್ಕೊಂಡು ತಿರುಗಾಡುತ್ತಿದ್ದಾರೆ. ನಾನು ನಿಮ್ಮ ಕ್ಷೇತ್ರದಲ್ಲಿ ಐದು ನೀರಾವರಿ ಯೋಜನೆ ಜಾರಿ ಮಾಡಿದ್ದೆ. ನಾನು ಎಂದಾದ್ರೂ ಹಸಿರು ಶಾಲು ಹಾಕಿಕೊಂಡು ಬಂದಿದ್ದು ಇದೆಯಾ ಎಂದು ಪ್ರಶ್ನಿಸಿದರು.

    ಮಹಾತ್ಮ ಗಾಂಧೀಜಿ ನಂತರ ಉಪವಾಸ ಸತ್ಯಾಗ್ರಹ ಮಾಡೋರು ಬಿ.ಡಿ. ಹಿರೇಮಠರು ಅನಿಸುತ್ತೆ. ಸತ್ಯಾಗ್ರಹ ಪ್ರಜಾಪ್ರಭುತ್ವದಲ್ಲಿ ದೊಡ್ಡ ಮತ್ತು ಕೊನೆಯ ಅಸ್ತ್ರ. ಹಿರೇಮಠರು ಕೊನೆಯ ಅಸ್ತ್ರಕ್ಕೆ ಮಾರು ಹೋಗಿದ್ದಾರೆ. ಈಗಾಗಲೇ 9 ದಿನ ಉಪವಾಸ ಮಾಡಿದ್ದಾರೆ. ಮಾಡು ಇಲ್ಲವೇ ಮಡಿ ಹೋರಾಟ ನಡೆದಿದೆ. ಜನರ ಸಮಸ್ಯೆಗಳನ್ನ ಹೇಳಲು ಇರುವ ವಿಧಾಸಸಭೆ, ಲೋಕಸಭೆಯಲ್ಲಿ ಮಾತನಾಡಲು ಮುಂದಾದರೆ ಅಧಿವೇಶನವನ್ನೇ ಮೊಟಕು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅತಿವೃಷ್ಟಿ ಸಮಯದಲ್ಲಿಯೇ ಸುಮ್ಮನಿದ್ದ ಇವರಿಗೆ ಏನೂ ಹೇಳೋಕೆ ಆಗಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದರೆ ಅಧಿಕಾರದಲ್ಲಿ ಉಳಿಯೋಕೆ ಇವರು ನಾಲಾಯಕ್. ಅನ್ನಭಾಗ್ಯ ಅಕ್ಕಿಯನ್ನು ಕಡಿತ ಮಾಡಿದ್ದೀರಿ, ನೀವೇನು ನಿಮ್ಮಪ್ಪನ ಮನೆಯಿಂದ ದುಡ್ಡು ಕೊಡ್ತೀರಾ ಎಂದು ಹರಿಹಾಯ್ದರು.

    ಯುಟಿಪಿ ಪರಿಹಾರವನ್ನೂ ಕೊಟ್ಟಿಲ್ಲ

    ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸುತ್ತೇನೆ ಎಂದು ಸಚಿವ ಬಿ.ಸಿ. ಪಾಟೀಲ ಹೇಳಿದ್ದರು. ಆದರೆ, ಈಗ ಇತ್ತ ತಲೆನೂ ಹಾಕಿಲ್ಲ. ಈಗಾಗಲೇ ಯುಟಿಪಿ ಯೋಜನೆಗೆ ಇಲ್ಲಿನ ರೈತರು ಭೂಮಿ ಕಳೆದುಕೊಂಡಿದ್ದು, ಈ ಯೋಜನೆಯಿಂದ ಮತ್ತೆ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಯೋಜನೆ ಕೈಬಿಡುವುದೇ ವಾಸಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts