More

    ಯೋಗಕ್ಕೆ ಆದ್ಯತೆ ನೀಡುತ್ತಿದೆ ಜಗತ್ತು

    ಕಡೂರು: ಇತ್ತೀಚೆಗೆ ಬಹುತೇಕ ದೇಶಗಳು ಯೋಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿವೆ. ಲಯನ್ಸ್ ಸಂಸ್ಥೆಯಿಂದ ಯೋಗ ಶಿಬಿರಗಳಿಗೆ ಆದ್ಯತೆ ನೀಡುತ್ತಿದೆ. ಮಾನಸಿಕ ಶಾಂತಿ, ನೆಮ್ಮದಿ ದೊರಕಲು ಯೋಗ ಮುಖ್ಯ ಎಂದು ಪಿಎಂಜೆಎಫ್ ಲಯನ್ಸ್ ಜಿಲ್ಲಾ ಗೌರ್ನರ್ ಲಯನ್ ಸಂಜೀತ್ ಶೆಟ್ಟಿ ಅಭಿಪ್ರಾಯಪಟ್ಟರು. ಮಚ್ಚೇರಿ ಸಮೀಪದ ಸಮುದಾಯ ಭವನದಲ್ಲಿ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್, ಜಿಲ್ಲಾ ಯೋಗಾ ಅಸೋಸಿಯೇಷನ್, ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಇಂಟರ್​ನ್ಯಾಷನಲ್ ಡಿಸ್ಟ್ರಿಕ್ಟ್, ಚಕ್ರವರ್ತಿ ಪಿಯು ಕಾಲೇಜು ಸಹಯೋಗದಲ್ಲಿ ಎರಡು ದಿನ ಆಯೋಜಿಸಿರುವ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಲೀಗ್ ಹಾಗೂ ಪ್ರತ್ಯೇಕ ಹಿರಿಯರ ವಿಭಾಗದ ಚಾಂಪಿಯನ್ ಶಿಪ್ ಯೋಗಾಸನ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

    ವೈಜ್ಞಾನಿಕವಾಗಿ ಯೋಗದ ಮಹತ್ವವನ್ನು ಜಗತ್ತಿಗೆ ತಿಳಿಯಪಡಿಸಿ, ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೇರಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದರು.  ರಾಜ್ಯ ಅಮೆಚೂರ್ ಯೋಗ ಸ್ಪೋಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ ಮಾತನಾಡಿ, ಸಂಸ್ಥೆಯಿಂದ ಪ್ರತಿ ವರ್ಷ ರಾಜ್ಯಮಟ್ಟದ ಯೋಗ ಸ್ಪರ್ಧೆ ನಡೆಸಿಕೊಂಡು ಬರಲಾಗಿದೆ. ಯೋಗವನ್ನು ಸೇವೆ ರೂಪದಲ್ಲಿ ಮಾಡಲಾಗುತ್ತಿದೆ. ಎಲ್ಲ ಸ್ಪರ್ಧೆಗಳನ್ನು ದಾನಿಗಳ ನೆರವಿನಿಂದ ಮಾಡಲಾಗುತ್ತಿದೆ. ಸರ್ಕಾರದ ನೆರವು ಬರುವ ನಿರೀಕ್ಷೆ ಹೊಂದಿದ್ದೇವೆ ಎಂದರು.

    ಕರೊನಾ ಸಂದರ್ಭದಲ್ಲಿ ಆನ್​ಲೈನ್ ಮೂಲಕ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗಿದೆ. 31 ಜಿಲ್ಲೆಗಳಲ್ಲಿ ಜಿಲ್ಲಾ ಯೋಗಾಸನ ಕ್ರೀಡಾ ಅಸೋಸಿಯೇಷನ್ ಕಾರ್ಯನಿರ್ವಹಿಸುತ್ತಿದೆ. ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.

    ದೇಹ ಸದೃಢಗೊಳ್ಳಲು ಯೋಗ ಮುಖ್ಯ. ನಿತ್ಯ ಯೋಗ ಮಾಡುವುದರಿಂದ ಆರೋಗ್ಯಯುತ ಜೀವನ ನಡೆಸಲು ಸಾಧ್ಯ. ಕಡೂರಿನ ಯೋಗಪಟುಗಳು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಗ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದು ಮುಖ್ಯವಲ್ಲ, ಭಾಗವಹಿಸುವುದು ಅಗತ್ಯ. ಪುರಸಭೆ ಸದಸ್ಯರ ಸಹಕಾರ ಪಡೆದು ಪಟ್ಟಣದಲ್ಲಿ ಯೋಗ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts