More

    ಯುವಜನರಲ್ಲಿರಲಿ ಇತಿಹಾಸದ ಎಚ್ಚರ  -ಜಿಲ್ಲಾಧಿಕಾರಿ ವೆಂಕಟೇಶ ಆಶಯ – ‘ಕ್ವಿಟ್ ಇಂಡಿಯಾ ಚಳವಳಿ’ ನೆನಪು ಕಾರ್ಯಕ್ರಮ 

    ದಾವಣಗೆರೆ: ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತರಾಗಿದ್ದು, ಭಾರತದ ಇತಿಹಾಸ-ಪರಂಪರೆಯಲ್ಲದೆ ಮಹಾಪುರುಷರನ್ನು ಮರೆ ಮಾಚುವ ಪ್ರಯತ್ನ ನಡೆದಿದೆ. ಇದು ಆಗದಂತೆ ಎಚ್ಚರ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಆಶಿಸಿದರು.
    ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕ್ವಿಟ್ ಇಂಡಿಯಾ ಚಳವಳಿ’ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜೀವನದುದ್ದಕ್ಕೂ ಸತ್ಯಮಾರ್ಗದಲ್ಲಿ ನಡೆದ ಸತ್ಯ ಹರಿಶ್ಚಂದ್ರ ಹಾಗೂ ಅಂಧ ಪಾಲಕರನ್ನು ಗೌರವದಿಂದಲೇ ಕಂಡ ಶ್ರವಣಕುಮಾರ ಇಬ್ಬರನ್ನೂ ಮಹಾತ್ಮ ಗಾಂಧೀಜಿಯವರು ಆದರ್ಶಪುರುಷರನ್ನಾಗಿ ಸ್ವೀಕರಿಸಿದ್ದರು. ಅಂತೆಯೇ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗೈದ ಮಹಾಪುರುಷರ ಆದರ್ಶವನ್ನು ಯುವಜನರು ರೂಢಿಸಿಕೊಳ್ಳಬೇಕು ಎಂದರು.
    ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿಗಳು, ರೈತರು, ಸರ್ಕಾರಿ ನೌಕರರು ಎಲ್ಲರೂ ಭಾಗಿಯಾಗಿದ್ದರು. ಗುಲಾಮಗಿರಿಯಿಂದ ದೇಶಕ್ಕೆ ಮುಕ್ತಿ ಕೊಡಿಸುವುದು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸ್ಥಾಪಿಸುವ ಉದ್ದೇಶ ಎಲ್ಲರದಾಗಿತ್ತು. ದೇಶವನ್ನು ಮತ್ತಷ್ಟು ಬಲಿಷ್ಠವಾಗಿಸಲು ಯುವಸಮುದಾಯ ಕಂಕಣಬದ್ಧರಾಗಬೇಕು ಎಂದು ಹೇಳಿದರು.
    ಭಾರತ ಆರ್ಥಿಕಾಭಿವೃದ್ಧಿಯಲ್ಲಿ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ. ದೇಶದ ಚರಿತ್ರೆಯೂ ಅಗಾಧವಾಗಿದೆ. ಭಾರತದಲ್ಲಿಂದು ಶಾಂತಿ-ನೆಮ್ಮದಿ ನೆಲೆಸಿದ್ದರೆ ಅದಕ್ಕೆ ಮಹಾತ್ಮಗಾಂಧೀಜಿ ಹಾಕಿಕೊಟ್ಟ ಭದ್ರಬುನಾದಿ ಕಾರಣ. ಇದರಿಂದಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಣುವಂತಾಗಿದೆ ಎಂದರು.
    ಉಪನ್ಯಾಸ ನೀಡಿದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮಂಜಣ್ಣ, ಭಾರತದ ಸ್ವಾತಂತ್ರ್ಯ ಹೋರಾಟದ ಹಿಂದಿನ ಧೀಶಕ್ತಿಯೇ ಮಹಾತ್ಮ ಗಾಂಧೀಜಿ. ಅವರು ಚಳವಳಿಗೆ ಬಂದರೆ ಸಂಚಲನವೇ ಆಗುತ್ತಿತ್ತು. ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯಂತಹ ಮತ್ತೊಂದು ದೊಡ್ಡ ಹೋರಾಟ ನಡೆಯಲಿಲ್ಲ ಎಂದರು.
    1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದ ಗಾಂಧೀಜಿ ಮಾಡು ಇಲ್ಲವೇ ಮಡಿ ಎಂಬ ಘೋಷವಾಕ್ಯದೊಂದಿಗೆ ಹೋರಾಟಕ್ಕಿಳಿದಾಗ ಬಂಧನಕ್ಕೆ ಒಳಗಾದರು. ಆಗ ಇಡೀ ದೇಶವೇ ಒಂದಾಗಿ ಗಾಂಧೀಜಿ ಪರ ಚಳವಳಿಗಿಳಿಯಿತು. ಮಂದಗಾಮಿ- ತೀವ್ರಗಾಮಿಗಳ ಭೇದದ ನಡುವೆಯೂ ಒಬ್ಬರನ್ನೂ ಒಂದುಗೂಡಿಸಿ ಸ್ವಾತಂತ್ರ್ಯ ಹೋರಾಟ ನಡೆಸಿದ ಗಾಂಧೀಜಿ ನಡೆ ಗಮನಾರ್ಹವಾಗಿತ್ತು ಎಂದು ಸ್ಮರಿಸಿದರು.
    ಬ್ರಿಟೀಷರಲ್ಲಿದ್ದ ವರ್ಣಭೇದ ಹಾಗೂ ಒಡೆದಾಳುವ ನೀತಿ ವಿರುದ್ಧ ಭಾರತೀಯರು ಒಂದಾದರು. ಬಹುತ್ವ ಭಾರತದಲ್ಲಿ ಏಕರೂಪದ ಹೋರಾಟಕ್ಕೆ ಕಾರಣರಾದ ಗಾಂಧೀಜಿ ಅಹಿಂಸೆ, ಸತ್ಯಾಗ್ರಹ ಮಾರ್ಗ ಮಾದರಿಯಾಗಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯದೇ ಹೋಗಿದ್ದರೆ, ಗಾಂಧೀಜಿ ಕಾಲಿಡದಿದ್ದರೆ ದೇಶದ ಪರಿಸ್ಥಿತಿ ಊಹಿಸುವುದೂ ಕಷ್ಟವಾಗಿರುತ್ತಿತ್ತು ಎಂದು ಹೇಳಿದರು.
    ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಮರುಳಸಿದ್ದಪ್ಪ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ-ಮತ ಬೇಧವಿರಲಿಲ್ಲ. ದೇಶದಲ್ಲಿ ಐಕ್ಯ ಮನೋಭಾವ ಮೂಡಿಸುವುದೇ ಆಗಿತ್ತು. ಅಂದಿನ ಒಗ್ಗಟ್ಟು ಇಂದಿಗೂ ಅಗತ್ಯವಿದೆ ಎಂದರು.
    ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಧನಂಜಯ ಪ್ರಾಸ್ತಾವಿಕ ಮಾತನಾಡಿ ಗಾಂಧಿ ಭವನದಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಸಲು ಒತ್ತು ನೀಡಲಾಗಿದೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಜಿಲ್ಲಾಡಳಿತ, ನಗರಪಾಲಿಕೆ ನೆರವು ನೀಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಾಂಧಿ ಭವನಕ್ಕೆ ವಾರಕ್ಕೊಮ್ಮೆ ಭೇಟಿ ನೀಡಿ ವೀಕ್ಷಣೆ ಮಾಡುವಂತಾಗಬೇಕು ಎಂದು ಆಶಿಸಿದರು.
    ಜಿಪಂ ಸಿಇಒ ಸುರೇಶ್ ಇಟ್ನಾಳ್, ಪಾಲಿಕೆ ಆಯುಕ್ತೆ ರೇಣುಕಾ, ಡಿಡಿಪಿಐ ಕೊಟ್ರೇಶ್, ಎನ್ನೆಸ್ಸೆಸ್ ವಿಭಾಗೀಯ ಅಧಿಕಾರಿ ಪ್ರದೀಪ್, ಎನ್‌ಸಿಸಿ ಅಧಿಕಾರಿ ಸುಬೇದಾರ್ ಮಾಲುಂಜಾಕರ್, ಹವಾಲ್ದಾರ್ ಧರ್ಮವೀರ್, ಗ್ರಾಮ ಸ್ವರಾಜ್ ಅಭಿಯಾನದ ಆವರಗೆರೆ ರುದ್ರಮುನಿ, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಚಿತ್ರಿಕಿ ಶಿವಕುಮಾರ್, ಉಷಾರಾಣಿ ಇದ್ದರು.
    ಇಪ್ಟಾ ಕಲಾವಿದ ಐರಣಿ ಚಂದ್ರು ಸಂಗಡಿಗರು ಜಾಗೃತಿ ಗೀತೆಗಳನ್ನು ಹಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಎನ್‌ಸಿಸಿ, ಎನ್ನೆಸ್ಸೆಸ್, ಗ್ರಾಮ ಸ್ವರಾಜ್ ಅಭಿಯಾನದ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts