More

    ಯುಬಿಡಿಟಿ ಆಡಳಿತಕ್ಕೆ ಸಿಡಿದೆದ್ದ ವಿದ್ಯಾರ್ಥಿಗಳು

    ದಾವಣಗೆರೆ: ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು ಸರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದ ಯುಬಿಡಿಟಿ ಕಾಲೇಜು ವಿದ್ಯಾರ್ಥಿಗಳು ಗುರುವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

    ಕಾಲೇಜು ಆವರಣದಿಂದ ಗುಂಡಿ ಮಹದೇವಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿ ಮರಳಿದ ವಿದ್ಯಾರ್ಥಿಗಳು ಕಾಲೇಜಿನ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
    ಪಕ್ಕದ ಹಾವೇರಿ, ಹೂವಿನಹಡಗಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ 17,800 ರೂ. ಪಡೆಯಲಾಗುತ್ತಿದೆ. ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ಅವೈಜ್ಞಾನಿಕವಾಗಿ 25 ಸಾವಿರ ರೂ. ಶುಲ್ಕ ವಿಧಿಸಲಾಗಿದೆ. ಅದಕ್ಕೆ ಪೂರಕವಾದ ಮೂಲ ಸೌಕರ್ಯಗಳೇ ಇಲ್ಲ. ಶೌಚಗೃಹ ಸ್ವಚ್ಛತೆಯಿಂದ ಮರೀಚಿಕೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.
    ಕಾಲೇಜಿನಲ್ಲಿ ಅಂತರ್ಜಾಲ ವ್ಯವಸ್ಥೆಯೇ ಇಲ್ಲದೆ ಶುಲ್ಕ ಪಡೆಯಲಾಗುತ್ತಿದೆ. ಆಂತರಿಕ ಚಟುವಟಿಕೆಗಳ ಹೆಸರಲ್ಲಿ ಬುಕ್‌ಲೆಟ್ ಶುಲ್ಕವಾಗಿ 500 ರೂ. ನಿಗದಿಯಾಗಿದ್ದರೆ ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಗೂ ಬುಕ್‌ಲೆಟ್ ಖರೀದಿಸಬೇಕಾಗಿದೆ. ಗುರುತಿನ ಚೀಟಿಗಾಗಿ ವರ್ಷಕ್ಕೆ 125 ರೂ. ಸಂಗ್ರಹಿಸಲಾಗುತ್ತಿದೆ. ಪ್ರಧಾನ ಮಂತ್ರಿ ಸುರಕ್ಷ ಭಿಮಾ ಯೋಜನೆಯಡಿ ವಿಮೆ ಇರುವಾಗ ಕಾಲೇಜಿನಲ್ಲಿ ಸಮೂಹ ವಿಮಾ ಶುಲ್ಕ ಹೆಸರಲ್ಲಿ 400 ರೂ ಪಡೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸ್ಥಳಕ್ಕೆ ಬಂದ ಪ್ರಭಾರ ಪ್ರಾಚಾರ್ಯ ಶ್ರೀಧರ್ ಮನವಿ ಸ್ವೀಕರಿಸಿದರು. ವಾರದೊಳಗೆ ಎಲ್ಲ ಸಮಸ್ಯೆಗಳು ಈಡೇರದಿದ್ದಲ್ಲಿ ಯುಬಿಡಿಟಿ ಕಾಲೇಜನ್ನು ಒಳಗಿನಿಂದಲೇ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ನಂತರ ಕೆಲ ಮುಖಂಡರು ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಿದರು.
    ಪ್ರತಿಭಟನೆಯಲ್ಲಿ ಎಬಿವಿಪಿ ನಗರಾಧ್ಯಕ್ಷ ಪವನ್ ರೇವಣಕರ್, ವಿಭಾಗ ಸಂಘಟನಾ ಕಾರ್ಯದರ್ಶಿ ಕೊಟ್ರೇಶ್, ಕಾಲೇಜಿನ ತಾಂತ್ರಿಕ ಕಾರ್ಯದರ್ಶಿಗಳಾದ ಯು.ಆರ್.ಪವನ್, ಸೋಹನ್, ರಿಷಬ್, ಶಶಾಂಕ್, ಅಲೋಕ್, ನೇಹಾ, ಅಷ್ಟಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts