More

    ಯುಜಿಡಿ, ನೀರಿನ ಯೋಜನೆ ಆರಂಭ ಯಾವಾಗ…? ಜಿಲ್ಲಾಧಿಕಾರಿಗೆ ಹಿರಿಯ ನಾಗರಿಕರ ಬಳಗದ ಪ್ರಶ್ನೆ

    ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಒಳಚರಂಡಿ ಮತ್ತು 24*7 ಕುಡಿಯುವ ನೀರಿನ ಕಾಮಗಾರಿ ಪ್ರಾರಂಭವಾಗಿ ಹಲವು ವರ್ಷಗಳೇ ಗತಿಸಿದರೂ ಇದುವರೆಗೆ ಪೂರ್ಣಗೊಂಡಿಲ್ಲ. ಇದರಿಂದ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಎರಡು ಯೋಜನೆಗಳು ಯಾವಾಗ ಮುಗಿಯುತ್ತವೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ನಗರದ ಹಿರಿಯ ನಾಗರಿಕರ ಬಳಗದವರು ಆಗ್ರಹಿಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಗರದಲ್ಲಿ ಈ ಎರಡು ಯೋಜನೆಗಳ ಕಾಮಗಾರಿಯಿಂದ ಆಗುತ್ತಿರುವ ತೊಂದರೆ, ನಗರದಲ್ಲಿನ ನೈರ್ಮಲೀಕರಣ ಸೇರಿ ಹಲವು ಸಮಸ್ಯೆಗಳ ಕುರಿತು ತಿಳಿಸಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹಿರಿಯ ನಾಗರಿಕರು ಒಕ್ಕೊರಲಿನಿಂದ ಒತ್ತಾಯಿಸಿದರು.

    ಹಿರಿಯ ನಾಗರಿಕರ ಬಳಗದ ಮುಖಂಡರಾದ ನಿವೃತ್ತ ಉಪನ್ಯಾಸಕ ಎಸ್.ಎನ್. ತಿಪ್ಪನಗೌಡ್ರ, ಸಿ.ಸಿ. ಪ್ರಭುಗೌಡರ, ಡಾ. ಬಿ.ಸಿ. ಬನ್ನೂರ, ಬಿ.ಎಸ್. ಹಂದ್ರಾಳ, ಎಸ್.ಜಿ. ಕೋರಿಶೆಟ್ಟರ, ಡಿ.ವಿ. ಹಿರೇಮಠ, ನಾಗರಾಜ ವಿಭೂತಿ, ಕೆ.ಎನ್. ಪಾಟೀಲ, ಎಸ್.ಸಿ. ಚಿಕ್ಕಳ್ಳಿ, ಸಿ.ಎಸ್. ಹೆಬ್ಬಾರ, ಎನ್.ಎನ್. ಸೋಮನಕಟ್ಟಿ ಇತರರು ಮಾತನಾಡಿ, ನಗರದಲ್ಲಿ ಯುಜಿಡಿ ಮತ್ತು ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಚಾಲನೆ ದೊರೆತು ದಶಕವೇ ಕಳೆದರೂ ಪೂರ್ಣಗೊಂಡಿಲ್ಲ. ಎಲ್ಲೆಂದರಲ್ಲಿ ರಸ್ತೆ ಮಧ್ಯೆ ಗುಂಡಿ ತೋಡುವುದು, ಮುಚ್ಚುವುದು ನಡೆಯುತ್ತಲೇ ಇದೆ. ನಗರಕ್ಕೆ ದಿನದ 24 ತಾಸಲ್ಲ, ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶಾಸಕ ನೆಹರು ಓಲೇಕಾರ ಮತ್ತು ನಗರಸಭೆ ಅಧ್ಯಕ್ಷರಿಗೆ ಮನವಿ ಕೊಟ್ಟರೂ ಪ್ರಯೋಜನ ಮಾತ್ರ ಆಗಿಲ್ಲ ಎಂದರು.

    ಕೆಲ ದಿನಗಳ ಹಿಂದೆ ನಗರಸಭೆ ಅಧ್ಯಕ್ಷರೊಂದಿಗೆ ಸಭೆ ನಡೆಸಿ ರ್ಚಚಿಸಲಾಗಿದೆ. 24*7 ನೀರು ಪೂರೈಕೆ ಯೋಜನೆ ಶೀಘ್ರದಲ್ಲಿ ಮುಗಿಯಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ, ಅವರ ಆಶ್ವಾಸನೆ ಮೇಲೆ ನಂಬಿಕೆ ಇಲ್ಲ. ಈ ಎರಡು ಯೋಜನೆಗಳಿಗೆ ಹತ್ತಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಯುಜಿಡಿ ಯೋಜನೆ ಪ್ರಾರಂಭವಾಗಿ ಅನೇಕ ಕಡೆ ಹಾಳಾಗಿದೆ. ನಗರಸಭೆಯವರನ್ನು ಕೇಳಿದರೆ, ಗುತ್ತಿಗೆದಾರರ ಮೇಲೆ ಹಾಕುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ. ನಗರದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅಷ್ಟರೊಳಗಾಗಿ ಎರಡೂ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts