More

    ಯಕ್ಷಗಾನವನ್ನೇ ಉಸಿರಾಡಿದ ಮಂಜುನಾಥ ಭಾಗವತರು

    ನಾಗರಾಜ ಜೋಶಿ ಸೋಂದಾ

    ಮಂಜುನಾಥ ಭಾಗವತ ಎಂದಾಕ್ಷಣ ಸಾಮಾನ್ಯವಾಗಿ ಅವರು ರಚಿಸಿದ ಕೃತಿಗಳ ಸಂಖ್ಯೆ ಪ್ರಸ್ತಾಪ ಬರುತ್ತದೆ. ಆದರೆ, ಹಲವರು ಅರಿಯದ ಅವರ ಜೀವನ ಪದ್ಧತಿಯ ಅನೇಕ ಸಂಗತಿಗಳ ಕುರಿತಾಗಿ ಬೆಳಕು ಚೆಲ್ಲುವ ಚಿಕ್ಕ ಪ್ರಯತ್ನ ನನ್ನದು.

    ನನಗಾಗ ಎಂಟು ವರ್ಷ. ಸೋಂದಾದ ಕೆಲವು ಹಿರಿಯರು ಸೇರಿ ಆಸಕ್ತ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಅವರ ಪ್ರತಿಭೆಗೆ ಅವಕಾಶ ಒದಗಿಸುವ ಹಿರಿದಾಸೆಯಿಂದ ಶ್ರೀ ಲಕ್ಷ್ಮೀನರಸಿಂಹ ಪ್ರಾಸಾದಿತ ಮಕ್ಕಳ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ ಮಕ್ಕಳಿಗೆ ಯಕ್ಷಾಗಾನ ಕಲಿಸುವ ನಿರ್ಧಾರ ಮಾಡಿದ್ದರು. ನಾನೂ ಯಕ್ಷಗಾನ ಕಲಿಯುವ ಆಸೆಯಿಂದ ಆ ತರಗತಿಯನ್ನು ಸೇರಿದೆ.ಯಕ್ಷಗಾನದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಬಾಳೇಹದ್ದ ಕೃಷ್ಣ ಭಾಗವತರನ್ನು ಸಂರ್ಪಸಿದಾಗ ನಮಗೆ ಸಿಕ್ಕ ಮಹಾ ಗುರುವೇ ಹೊಸ್ತೋಟ ಮಂಜುನಾಥ ಭಾಗವತರು. ನನಗೆ ಇನ್ನೂ ನೆನೆಪಿದೆ. ಮಾಸಿದ ಲುಂಗಿ ಮತ್ತು ಜುಬ್ಬಾ ಧರಿಸಿ, ಹೆಗಲಿಗೆ ಜೋಳಿಗೆಯನ್ನು ಹಾಕಿಕೊಂಡು ಬಂದ ಭಾಗವತರ ಆಸ್ತಿ ಎಂದರೆ ಇಷ್ಟೇ ಎಂದು ನಮಗೆಲ್ಲ ಆಮೇಲೆ ತಿಳಿದಿದ್ದು.

    ಭಾಗವತರು, ಬಾಳೇಹದ್ದ ಭಾಗವತರೊಂದಿಗೆ ಸೇರಿ ಯಕ್ಷಗಾನದಲ್ಲಿ ಹೊಸ ಕಲಿಕಾ ಪದ್ಧತಿಯನ್ನು ಹುಟ್ಟು ಹಾಕಿದ್ದರು. ಸಂಖ್ಯಾ ಪದ್ಧತಿಯಲ್ಲಿ ಎಂಥವರಿಗೂ ಸುಲಭವಾಗಿ ತಿಳಿಯುವ ಹಾಗೆ ಮತ್ತು ಮಾತ್ರೆಗಳ ನಿಖರತೆಯ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಬರುವ ರೀತಿಯ ಆಕರ್ಷಕ ಪದ್ಧತಿ ಅದು. ಆ ಪದ್ಧತಿಯ ಬಳಕೆಯ ಪ್ರಯೋಗಾರ್ಥಿಗಳು ನಾವಾಗಿದ್ದು ನಮಗೆ ಹೆಮ್ಮೆಯ ವಿಷಯ.

    ಹೊಸ್ತೋಟರು ಬಾಹ್ಯ ಶಿಸ್ತಿಗೆ ಬೆಲೆ ಕೊಡದಿದ್ದರೂ ಕಲೆಯ ಕುರಿತಾದ ಶಿಸ್ತಿಗೆ ಹೆಸರಾದವರು. ಆ ಕಾರಣಕ್ಕಾಗಿಯೇ ಅವರಿಗೆ ಸಿಟ್ಟು ಜಾಸ್ತಿ. ಸಾಕ್ಷಾತ್ ದೂರ್ವಾಸರಿದ್ದ ಹಾಗೆ ಎನ್ನಿಸಿಕೊಂಡರು. ಹವ್ಯಾಸಿ ಮೇಳಗಳ ವ್ಯವಸ್ಥೆ ಅಷ್ಟಾಗಿ ಸರಿ ಇಲ್ಲದ ಆ ಕಾಲದಲ್ಲಿ ಭಾಗವತರು ಸೋಂದಾ ಮಕ್ಕಳ ಮೇಳದ ಮೂಲಕ ಮಾದರಿ ಹವ್ಯಾಸಿ ಮೇಳವೊಂದನ್ನು ಮಾಡಿ ತೋರಿಸಿದವರು. ಸಮಯ ಪಾಲನೆ, ಸಂಘಟಕರಿಗೆ ಸ್ವಲ್ಪವೂ ಕಿರಿಕಿರಿಯಾಗದ ವ್ಯವಸ್ಥೆಗಳು. ಚೌಕಿಮನೆಯ ಮತ್ತು ರಂಗಸ್ಥಳದಲ್ಲಿ ಶಿಸ್ತಿನ ಸಿಪಾಯಿಗಳಂತಿರುವ ಕಲಾವಿದರು… ಹೀಗೆ ಹಲವಾರು ಮಜಲುಗಳಲ್ಲಿ ಬದಲಾವಣೆಗೆ ಪ್ರೇರಕರಾದರು.

    ಭಾಗವತರು ಯಕ್ಷಗಾನದ ಹಲವಾರು ಧನಾತ್ಮಕ ಬದಲಾವಣೆಗಳಿಗೆ ಅಡಿಪಾಯ ಹಾಕಿದವರು. ಉದಾಹರಣೆಗೆ ಹಿಂದಿನ ಕಾಲದಲ್ಲಿ ಪಗಡೆಗೆ ಹುಲ್ಲಿನಿಂದ ಮಾಡಿದ ಅಟ್ಟೆಯ ಬಳಕೆಯಿತ್ತು. ಅದು ಭಾರವೂ, ಹೆಚ್ಚಿನ ಶ್ರಮ ಮತ್ತು ಸಮಯವನ್ನು ಬೇಡುವ ಕೆಲಸವಾಗಿತ್ತು. ಅದನ್ನು ಸರಳಗೊಳಿಸಲು ಬೆಂಡಿನಿಂದ ಮಾಡಿದ ಪಗಡೆಯನ್ನು ಮಾಡುವ ಪ್ರಯೋಗವನ್ನು ಮೊದಲು ಯೋಚಿಸಿ ಪ್ರಯೋಗ ಮಾಡಿದರು. ಭಟ್ಟರ ಜೀವನ ಪದ್ಧತಿಯನ್ನು ಹತ್ತಿರದಿಂದ ಬಲ್ಲವನು ನಾನು. ಅವರು ಸಮಾಜದ ಮಧ್ಯೆ ಬದುಕಿದರೂ ಸಮಾಜದಿಂದ ಮತ್ತು ಕೌಟುಂಬಿಕ ವ್ಯವಸ್ಥೆಯಿಂದ ಅಂತರ ಇಟ್ಟುಕೊಂಡವರು. ಯಾವುದೋ ಕಾರಣಕ್ಕಾಗಿ ಒಂದು ಸಾರಿ ಒಂದು ನಿರ್ಧಾರ ತೆಗೆದುಕೊಂಡರೆ ಅದರಿಂದ ಯಾವುದೇ ಕಾರಣದಿಂದ ಹಿಂದೆ ಸರಿಯುವವವರೇ ಅಲ್ಲ. ಒಂದು ರೀತಿಯಲ್ಲಿ ಅವರು ಹಠ ಯೋಗಿಗಳು. ಅವರ ದೈಹಿಕ ವಿಷಯದಲ್ಲೂ ಇದು ಕಾಣುತ್ತದೆ. ಒಂದೇ ಹೊತ್ತಿನ ಊಟ, ಪ್ರತಿ ಸೋಮವಾರ ಕೇವಲ ದೃವರೂಪದ ಆಹಾರ. ನಿರಂತರ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರ, ಆಯಿಲ್ ಪುಲ್ಲಿಂಗ್, ಎರಡು ಮೂರು ದಿವಸಗಳ ಕಾಲ ನಿದ್ರಿಸದೇ ಇರುವುದು. ಇದೆಲ್ಲ ಒಂದು ರೀತಿಯ ಸೋಜಿಗವಾದರೆ, ಉಳಿದ ದಿನಗಳಲ್ಲಿ ಅವರಿಗೆ ಮಾತಾಡಲು ಅದೇ ವಿಷಯವಾಗಬೇಕು ಎಂದಿರಲಿಲ್ಲ. ಇನ್ನೂ ಮಾತು ಬಾರದ ಶಿಶುವಿನಿಂದ ಪ್ರಾರಂಭಿಸಿ ಮಾತಾಡಲಾಗದ ಮುದುಕರವರೆಗೂ ಆತ್ಮೀಯತೆ ಯಿಂದ ಮಾತಾಡುವ ಮುಗ್ಧರು. ಆದರೆ, ಶ್ರಾವಣ ಮಾಸದಲ್ಲಿ ಸಂಕಲ್ಪ ಮಾಡಿ ಕೂತರೆ ಒಂದು ತಿಂಗಳು ಒಂದೂ ಮಾತಾಡದೆ, ಆಧ್ಯಾತ್ಮ ಮತ್ತು ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದ ಸಾಧಕರು.

    ಇಲ್ಲಿ ಉಲ್ಲೇಖಿಸಲೇ ಬೇಕಾಗಿದ್ದು ಅವರ ಬರವಣಿಗೆಯ ವಿಧಾನ. ಪದ್ಯಗಳ ರಚನೆಯ ವಿಷಯದಲ್ಲಿ ಅಪರೂಪದ ವ್ಯಕ್ತಿ. ಒಬ್ಬ ಪರೀಕ್ಷಾರ್ಥಿ ಸುದೀರ್ಘ ಅಧ್ಯಯನದ ನಂತರ ಯಾವ ವೇಗದಲ್ಲಿ ಬರೆಯುತ್ತಾನೋ ಅದನ್ನೂ ಮೀರಿ ಇವರು ಅಷ್ಟು ಸುಲಭವಾಗಿ ಮತ್ತು ವೇಗವಾಗಿ ಕೃತಿ ರಚಿಸುವ ಸಿದ್ಧಿ ಪಡೆದವರು. ಯಕ್ಷಗಾನ ಕಲಿಯಲು ಬಂದ ಮಕ್ಕಳು ಇವರ ಬರವಣೆಗೆಗೆ ತೊಂದರೆ ಕೊಡುತ್ತಿದ್ದರೂ ಅವರನ್ನು ಸಂಬಾಳಿಸಿಕೊಂಡು ಅದೇ ವೇಗದಲ್ಲಿ ಕೃತಿ ರಚಿಸುವ ಒಂದೇ ಉದಾಹರಣೆ ಸಾಕು ಎಂದುಕೊಂಡಿದ್ದೇನೆ.

    ದಾಖಲೆ ಪ್ರಮಾಣದ ಕೃತಿಗಳನ್ನು ರಚಿಸಿದ ಭಾಗವತರು ಕೃತಿಗಳ ರಕ್ಷಣೆ, ಬಳಕೆ, ಮುದ್ರಣಗಳ ಬಗ್ಗೆ ಯೋಚಿಸಿದವರೇ ಅಲ್ಲ. ಕೇವಲ ರಚನೆಯೊಂದೆ ನನ್ನ ಕೆಲಸ ಅದರ ಉಪಯೋಗ ಪಡೆದುಕೊಳ್ಳುವುದು ಸಮಾಜಕ್ಕೆ ಬಿಟ್ಟಿದ್ದು ಎಂದು ತಟಸ್ಥ ವಾಗಿಯೇ ಉಳಿದವರು. ಸುಮಾರು ಐನೂರಕ್ಕೂ ಕೃತಿಗಳನ್ನು ರಚಿಸಿದ ಮಹಾಕವಿಗಳಿವರು.

    (ಲೇಖಕರು- ಭಾಗವತರ ಶಿಷ್ಯರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts