More

    ಜಾನುವಾರುಗಳನ್ನು ರಕ್ಷಿಸಿ ರೈತರ ಹಿತ ಕಾಪಾಡಿ:ನಾರಾಯಣಗೌಡ ಮನವಿ

    ಹಾಸನ: ಪಶುಸಂಗೋಪನೆ ಇಲಾಖೆಯವರು ಬರಗಾಲದ ತೀವ್ರತೆಯನ್ನು ಅರಿತು ಜಾನುವಾರುಗಳನ್ನು ರಕ್ಷಣೆ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಬಿ.ಎಚ್. ನಾರಾಯಣಗೌಡ ಮನವಿ ಮಾಡಿದರು.
    ಕರ್ನಾಟಕ ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ರಾಜ್ಯದ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರವು ಘೋಷಿಸಿದೆ. ರಾಜ್ಯದಲ್ಲಿ ಅಂದಾಜು 3 ಕೋಟಿ ಜಾನುವಾರುಗಳಿವೆ. ಈ ಬರಗಾಲದಲ್ಲಿ ಇವುಗಳಿಗೆ ಮೇವಿನ ಕೊರತೆ, ಹಸಿರು ಮೇವು, ಕುಡಿಯಲು ನೀರು ಬಹಳ ಅವಶ್ಯಕತೆ ಬೇಕಾಗುತ್ತದೆ. ಸರ್ಕಾರವು ಹಸಿರು ಮೇವು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ ಈ ಕಾರ್ಯಕ್ರಮವು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಹಸಿರು ಮೇವು ಬೆಳೆಯಲು ಆಯಾ ಗ್ರಾಮಗಳಲ್ಲಿರುವ ಗೋಮಾಳ, ಕೆರೆ ಮತ್ತು ನದಿ ಪಾತ್ರದಲ್ಲಿರುವ ಜಾಗವನ್ನು ಗುರುತಿಸಿ ಹಸಿರು ಮೇವನ್ನು ಬೆಳೆಯಲು ಇರುವ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ. ಮತ್ತು ಮಿನಿಕಿಟ್‌ನಲ್ಲಿ ಮೇವಿನ ಬೀಜಗಳನ್ನು ವಿತರಿಸಬೇಕೆಂಬ ಮಾರ್ಗಸೂಚಿಯನ್ನು ರಾಜ್ಯ ವಿಪತ್ತು ಪ್ರತಿಕ್ರಿಯಾನಿಧಿ ಮತ್ತು ವಿವಿಧ ಇಲಾಖೆಗಳ ಸೂಚನೆಯನ್ನು ಪಾಲಿಸಲು ಸರ್ಕಾರ ವಿಫಲವಾಗಿದೆ. ಜಾನುವಾರುಗಳಿಗೆ ಮೇವು, ಆಹಾರ, ನೀರು, ವಸತಿಗಳ ಶಿಬಿರಗಳನ್ನು ಆರಂಭಿಸಬೇಕಿತ್ತು. ಸರ್ಕಾರ ಅದನ್ನು ಸಹ ಜಾರಿಗೊಳಿಸಿಲ್ಲ. ರಾಜ್ಯದ 713 ಹೋಬಳಿಗಳಲ್ಲಿ ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಬೇಕಿತ್ತು. ಇದು ಸಹ ಕಾರ್ಯಗತವಾಗಿಲ್ಲ ಎಂದು ಹೇಳಿದರು.
    ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಚುಚ್ಚುಮದ್ದುಗಳನ್ನು ಸಹ ನೀಡುತ್ತಿಲ್ಲ. ಇದರಿಂದ ಹಾಲು ಉತ್ಪಾದನೆ ಹಾಗೂ ಜಾನುವಾರುಗಳ ಸಂತತಿ ಕಡಿಮೆಯಾಗುವ ಸಂಭವವಿದೆ. ಇದರಿಂದ ರೈತರಿಗೆ ಸಮಸ್ಯೆಯಾಗಲಿದೆ. ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತರಿಗೆ ಜಾಗೃತಿ ಮತ್ತು ಮಾಹಿತಿಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಪಶುಸಂಗೋಪನೆ ಇಲಾಖೆಯವರು ಬರದ ತೀವ್ರತೆಯನ್ನು ಮನಗಂಡು ಜಾನುವಾರುಗಳಿಗೆ ಸಮರ್ಪಕ ಮೇವು ನೀಡಿ ರೈತರಿಗೆ ರಕ್ಷಣೆ ನೀಡಬೇಕಾಗಿ ಎಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾದ ಮಹೇಶ್, ಪಾಪಣ್ಣ, ನಟರಾಜು ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts