More

    ಸಭೆಯಲ್ಲಿ ರಂಪಾಟ, ಎಳೆದಾಟ; ಕೆ.ಟಿ.ಶ್ರೀಕಂಠೇಗೌಡಗೆ ಗಾಯ, ಚುನಾವಣೆಯಿಂದ ಹೊರಕ್ಕೆ

    ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಟಿಕೆಟ್ ವಂಚಿತರಾದ ಕೆ.ಟಿ.ಶ್ರೀಕಂಠೇಗೌಡ ಅವರು ಗುರುವಾರ ನಗರದಲ್ಲಿ ಕರೆದಿದ್ದ ಬೆಂಬಲಿಗರ ಸಭೆಯು ರಂಪಾಟ, ಕೂಗಾಟಕ್ಕೆ ಸಾಕ್ಷಿಯಾಯಿತು. ತಳ್ಳಾಟ ನೂಕಾಟದಲ್ಲಿ ಅವರ ಗೈಗೆ ಗಾಯ ಸಹ ಆಯಿತು. ಇದರಿಂದಾಗಿ ಅವರಿಗೆ ನಾಮಪತ್ರ ಸಲ್ಲಿಸಲು ಆಗಲಿಲ್ಲ.


    ಪ್ರಬಲ ಆಕಾಂಕ್ಷಿಯಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಜೆಡಿಎಸ್ ಟಿಕೆಟ್ ಕೈತಪ್ಪಿದ್ದು, ಮಂಡ್ಯದ ಕೆ.ವಿವೇಕಾನಂದ ಅವರಿಗೆ ಪಕ್ಷದಿಂದ ಬಿ ಫಾರ್ಮ್ ಸಹ ದೊರೆತಿದೆ.


    ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಗುರುವಾರ ನಗರದ ಗೋವಿಂದರಾವ್ ಮೆಮೋರಿಯಲ್ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಇದಕ್ಕೆ ಪ್ರತಿಯಾಗಿ ಟಿಕೆಟ್ ವಂಚಿತ ಕೆ.ಟಿ.ಶ್ರೀಕಂಠೇಗೌಡರು ಸಹ ನಗರದ ಶಿವರಾಂಪೇಟೆಯ ಆಲಮ್ಮನ ಛತ್ರದಲ್ಲಿ ಬೆಂಬಲಿಗರ ಸಭೆ ಕರೆದಿದ್ದರು.


    ಇಲ್ಲಿಗೆ ಆಗಮಿಸಿದ ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಜಿ.ಟಿ.ದೇವೇಗೌಡ, ಎಂಎಲ್‌ಸಿ ಸಿ.ಎನ್. ಮಂಜೇಗೌಡ ಅವರು, ಜೆಡಿಎಸ್‌ನ ಅಧಿಕೃತ ಸಭೆಗೆ ಬರುವಂತೆ ಅವರನ್ನು ಮನವೊಲಿಸಲು ಯತ್ನಿಸಿದರು. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆಯೂ ಕೋರಿಕೊಂಡರು. ಈ ವೇಳೆ ಕೆಟಿಎಸ್ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಉಂಟಾದ ನೂಕಾಟ, ತಳ್ಳಾಟದಿಂದ ಗೊಂದಲ ಸೃಷ್ಟಿಯಾಯಿತು.


    ಈ ಸಂದರ್ಭದಲ್ಲಿ ಜೆಡಿಎಸ್‌ನ ಕೆಲವು ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ನಾಮಪತ್ರ ಸಲ್ಲಿಸದಂತೆ ಒತ್ತಾಯಿಸಿ ಶ್ರೀಕಂಠೇಗೌಡ ಅವರನ್ನು ಎಳೆದಾಡಿದರು. ಇದರಿಂದ ಅವರು ಗಾಯಗೊಂಡರು. ಬಳಿಕ ಜೆಡಿಎಸ್ ನಾಯಕರು ಬರಿಗೈಯಲ್ಲಿ ವಾಪಸ್ ತೆರಳಿದರು.
    ಮತ್ತೊಂದೆಡೆ ಕೆಟಿಎಸ್ ಬೆಂಬಲಿಗರು ತೀವ್ರ ಆಕ್ರೋಶವ್ಯಕ್ತಪಡಿಸಿದರು. ‘ಬೆನ್ನಿಗೆ ಚೂರಿ ಹಾಕಿದವರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದ ನಿಮಗೆ ಟಿಕೆಟ್ ತಪ್ಪಿಸಿದ್ದಾರೆ’ ಎಂದು ಕಿಡಿಕಾರಿದರು.


    ‘ನಿಮಗೆ ಹೊಡೆಯಲು ಬಂದಿದ್ದಾರೆ. ನಿಮ್ಮ ಮಗನಿಗೂ ಹೊಡೆದಿದ್ದಾರೆ. ಸುಮ್ಮನಿರುವುದು ಬೇಡ. ಜೆಡಿಎಸ್ ಪಕ್ಷದ ಸಭೆಗೆ ಹೋಗಬೇಡಿ. ಬದಲಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ’ ಎಂದು ಬೆಂಬಲಿಗರು ಶ್ರೀಕಂಠೇಗೌಡರ ಮೇಲೆ ತೀವ್ರ ಒತ್ತಡ ಹಾಕಿದರು.


    ಇದಕ್ಕೆ ಕಿವಿಗೊಡದ ಶ್ರೀಕಂಠೇಗೌಡ ಅವರು, ಬಲಗೈಗೆ ನೋವಾದ ಕಾರಣಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಖಾಸಗಿ ಆಸ್ಪತ್ರೆಗೆ ದಾಖಲಾದರು. ಆದರೆ ಕೊನೇ ದಿನವಾದ ಇಂದು ನಾಮಪತ್ರವನ್ನು ಸಲ್ಲಿಸಲಿಲ್ಲ. ಹೀಗಾಗಿ, ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts