More

    ಮೋದಿ ಎದುರು ಬಿಜೆಪಿ ಸಂಸದರು ಕೋಲೆಬಸವರು

    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಗುರುವಾರ ನಾಮಪತ್ರ ಸಲ್ಲಿಸಿದರು.
    ಉಮೇದುವಾರಿಕೆ ಸಲ್ಲಿಕೆ ಬಳಿಕ ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಸಾಗಿ, ಹಳೇ ಮಾಧ್ಯಮಿಕ ಶಾಲಾವರಣದಲ್ಲಿ ಆಯೋಜಿಸಿದ್ದ ‘ಪ್ರಜಾಧ್ವನಿ-2’ ಸಮಾವೇಶ ತಲುಪಿದರು.
    ಹೆಲಿಪ್ಯಾಡ್‌ನಿಂದ ನೇರ ಸಮಾವೇಶದ ವೇದಿಕೆಗೆ ಆಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂದಿನಂತೆ ತಮ್ಮ ಹರಿತ ಹಾಗೂ ವ್ಯಂಗ್ಯೋಕ್ತಿಗಳಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು.
    ತೆರಿಗೆ, ನೀರಾವರಿಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಬಿಚ್ಚಿಟ್ಟು ಇವೆಲ್ಲವನ್ನು ಜನರಿಗೆ ತಿಳಿಸುವಂತೆ ಶಾಸಕರು, ಸಚಿವರಿಗೆ ಪಾಠ ಮಾಡಿದರು.
    ಚಿತ್ರದುರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳ ಪೈಕಿ 7ರಲ್ಲಿ 2ಲಕ್ಷಕ್ಕೂ ಅಧಿಕ ಲೀಡ್ ಕೊಡಿಸಿ ಚಂದ್ರಪ್ಪ ಅವರನ್ನು ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ ಎಂದು ಶಾಸಕರಿಗೆ ಅವರ ಜವಾಬ್ದಾರಿ ನೆನಪಿಸಿದರು.
    ಬಿಜೆಪಿ ಸಂಸದರು ಪ್ರಧಾನಿ ಎದುರು ತಲೆ ಆಡಿಸುವ ಕೋಲೆ ಬಸವರು ಎಂದು ಜರಿದ ಸಿದ್ದರಾಮಯ್ಯ, ಬರ ಪರಿಹಾರ, ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ದೂರಿದರು.
    ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ರೂ. ಅನುದಾನ ಬಿಡುಗಡೆ ಆಗುತ್ತದೆ ಎಂದು ನಾವು ಶಬರಿಯಂತೆ ಕಾದಿದ್ದೇ ಬಂತು. ರಾಷ್ಟ್ರೀಯ ಯೋಜನೆಯೂ ಸುಳ್ಳಾಯಿತು ಎಂದು ಆರೋಪಿಸಿದ ಸಿಎಂ, ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ‘ಭದ್ರಾ’ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
    ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಲೂಟಿ ಗಿರಾಕಿ ಎಂದು ದೂರಿದ ಸಿಎಂ, ಮತದಾರರು ‘ಮಿಸ್ಟರ್ ಕಾರಜೋಳ ಪ್ಲೀಸ್ ಗೋ ಬ್ಯಾಕ್’ ಎನ್ನಬೇಕು ಎಂದರು.
    ಸಂವಿಧಾನ ರಕ್ಷಿಸಲು ಬಿಜೆಪಿ- ಜೆಡಿಎಸ್‌ನಿಂದ ಸಾಧ್ಯವಿಲ್ಲ. ಇವರನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗೆಸ್ ಗೆಲ್ಲಿಸಬೇಕು. ಈ ಮೂಲಕ ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯ ಬೇಕಿದೆ ಎಂದು ತಿಳಿಸಿದರು.
    ಶಿರಾ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವದ ಸ್ವಾತಂತ್ರೃ ಮತ್ತು ಸಂವಿಧಾನಕ್ಕೆ ಧಕ್ಕೆ ಆಗುತ್ತದೆ ಎಂದರು.
    ಲೋಕಸಭೆ ವ್ಯಾಪ್ತಿಯ ಎಲ್ಲ ಶಾಸಕರು ಹೆಚ್ಚು ಲೀಡ್ ಕೊಡಿಸಲು ಶ್ರಮಿಸುತ್ತೇವೆಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರೆ, ಸಂವಿಧಾನ ಉಳಿಸಲು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
    ಗ್ಯಾರಂಟಿಗಳನ್ನು ಜಾರಿಗೊಳಿಸಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಧೈರ್ಯದಿಂದ ಮತ ಕೇಳುವಂತೆ ಶಾಸಕ ಬಿ.ಜಿ.ಗೋವಿಂದಪ್ಪ ಸಲಹೆ ನೀಡಿದರೆ, ಪಕ್ಷದ ಇತಿಹಾಸ, ಸಾಧನೆ ಪರಿಗಣಿಸಿ ಆತ್ಮಸಾಕ್ಷಿಗೆ ಅನುಗುಂಣವಾಗಿ ಮತ ನೀಡುವಂತೆ ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.
    ಪಾವಗಡ ಶಾಸಕ ವೆಂಕಟೇಶ್ ಮಾತನಾಡಿ, ಸಿದ್ದರಾಮಯ್ಯ ಅವರಿಂದಾಗಿ ಪಾವಗಡವನ್ನು ಇಂದು, ಸೌರವಿದ್ಯುತ್ ವಿಚಾರದಲ್ಲೇ ವಿಶ್ವ ನೋಡುವಂತಾಗಿದೆ ಎಂದರು.
    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಒಗ್ಗಟ್ಟಿನಿಂದ ಚಂದ್ರಪ್ಪ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
    ಸಚಿವ ಡಿ.ಸುಧಾಕರ್, ಮಾಜಿ ಶಾಸಕರಾದ ಪೂರ್ಣಿಮಾ,ಎ.ವಿ.ಉಮಾಪತಿ, ಸಾ.ಲಿಂಗಯ್ಯ, ಮಾಜಿ ಎಂಎಲ್‌ಸಿ ಜಯಮ್ಮ ಬಾಲರಾಜ್, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಕೆಪಿಸಿಸಿ ಅಸಂಘಟಿತ ವಿಭಾಗ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಡಿ.ಟಿ.ಶ್ರೀನಿವಾಸ್, ವಿಜಯಕುಮಾರ್, ರಾಮಪ್ಪ, ಬಿ.ಟಿ.ಜಗದೀಶ್ ,ನರಸಿಂಹರಾಜು, ಕುಮಾರ್, ಸಂಪತ್‌ಕುಮಾರ್, ಮೈಲಾರಪ್ಪ, ಎಲ್.ತಿಪ್ಪೇಸ್ವಾಮಿ, ಅಂಜಿನಪ್ಪ, ಗೀತಾ ನಂದಿನಿಗೌಡ, ಕೆ.ಸಿ.ನಾಗರಾಜ್, ಮರುಳಾರಾಧ್ಯ, ಕುಮಾರಗೌಡ ಇತರರಿದ್ದರು.

    ಎಸ್ಸೆನ್, ಪಾಟೀಲ್, ಬಿಎಸ್‌ವೈಗೂ ಆಗಿರಲಿಲ್ಲ
    ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಅವರಿಗೂ ಆಗಿರಲಿಲ್ಲ. ಆ ಕೆಲಸವನ್ನು ನಾನು ಮಾಡಿದ್ದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.

    ಅಪರೇಷನ್ ಕಮಲಕೆ ಕೋಟ್ಯಂತರ ದುಡ್ಡು ಎಲ್ಲಿದ್ದು?
    ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ರೂ. ಎಲ್ಲಿಂದ ಬಂತು ಎಂದು ಮೋದಿ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಬರ ಪರಿಹಾರ ವಿಚಾರದಲ್ಲಿ ಶಾ ಸುಳ್ಳು ಹೇಳಿದ್ದಾರೆ. ಆರ್‌ಎಸ್‌ಎಸ್ ಇವರಿಗೆ ಸುಳ್ಳು ಹೇಳುವ ತರಬೇತಿ ಕೊಡುತ್ತದೆ ಎಂದು ಟೀಕಿಸಿದರು. ಮಾಜಿ ಸಚಿವ ಈಶ್ವರಪ್ಪ ಪಕ್ಷೇತರರಾಗಿ ನಿಂತರೆ, ಇಡಿ, ಸಿಬಿಐ ಮೂಲಕ ಕೇಂದ್ರ ಅವರ ವಿರುದ್ಧ ದ್ವೇಷ ಸಾಧಿಸುತ್ತದೆ ಎಂದು ಭವಿಷ್ಯ ನುಡಿದರು.

    *ಕೋಟ್
    ಜಾತ್ರೆಯಲ್ಲಿರುವ ಟೂರಿಂಗ್ ಟಾಕೀಸ್, ನಾಟಕ ಕಂಪನಿಗಳಂತೆ ಬಿಜೆಪಿ ಅಭ್ಯರ್ಥಿಗಳನ್ನು ಬದಲಿಸಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಬದಲು ಕಾರಜೋಳರಿಗೆ ಟಿಕೆಟ್ ನೀಡಿದೆ. ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಲು ಕಾಂಗ್ರೆಸ್ ಗೆಲ್ಲಬೇಕಿದೆ. ರಾಜ್ಯದಲ್ಲಿ ಮೋದಿ ಹವಾ ಇಲ್ಲ, ಏನಿದ್ದರೂ ಸಿದ್ದರಾಮಯ್ಯ ಹವಾ.
    ಸತೀಶ್ ಜಾರಕಿಹೊಳಿ, ಸಚಿವ

    *ಕೋಟ್
    ಪ್ರತಿಸ್ಪರ್ಧಿಗಳನ್ನು ಟೀಕೆ ಮಾಡುವುದರಲ್ಲಿ ಸಮಯ ವ್ಯರ್ಥ ಮಾಡುವುದಿಲ್ಲ. ನಮ್ಮ ಪಕ್ಷ ಹಾಗೂ ಸರ್ಕಾರದ ಯೋಜನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುವೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ದೀಪ ಹಚ್ಚುವವರು ಇರುವುದಿಲ್ಲ ಎಂಬ ಕಾರಜೋಳ ಹೇಳಿಕೆ ಅವರ ಭ್ರಮೆ ಅಷ್ಟೇ.
    ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಅಭ್ಯರ್ಥಿ

    *ಶ್ರೀರಾಮ ಬಿಜೆಪಿ ಆಸ್ತಿಯಲ್ಲ
    ಬೆಲೆ ಏರಿಕೆ ನಿಯಂತ್ರಣ ಸೇರಿ ಹಲವು ಭರವಸೆ ಈಡೇರಿಸುವುದಾಗಿ ಹೇಳಿ ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಯಾವುದೇ ಭರವಸೆ ಈಡೇರಿಸಿಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಿಸಿವೆ ಎಂದು ಸಿಎಂ ತಿಳಿಸಿದರು.
    ಶ್ರೀರಾಮ ಬಿಜೆಪಿ ಆಸ್ತಿಯಲ್ಲ, ನಮ್ಮೂರಲ್ಲಿ ಎರಡು ಶ್ರೀರಾಮ ದೇವಾಲಯಗಳನ್ನು ನಿರ್ಮಿಸಿದ್ದೇನೆ. ನಾನು ಜೈ ಸೀತಾರಾಮ ಎನ್ನುತ್ತೇನೆಂದು ಬಿಜೆಪಿಯ ಹಿಂದುತ್ವ ಕಾರ್ಡ್‌ಗೆ ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts