More

    ಮೊದಲ ದಿನವೇ 685 ವಿದ್ಯಾರ್ಥಿಗಳು ಗೈರು

    ಶಿವಮೊಗ್ಗ: ಕರೊನಾ ವೈರಸ್ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗುರುವಾರ ನಿರಾತಂಕವಾಗಿ ಇಂಗ್ಲಿಷ್ ಪರೀಕ್ಷೆ ಎದುರಿಸಿದರು. ಪರೀಕ್ಷೆಯಿಂದ ಒಬ್ಬ ವಿದ್ಯಾರ್ಥಿಯೂ ಹೊರಗುಳಿಯದಂತೆ ಎಚ್ಚರ ವಹಿಸುವುದಾಗಿ ಶಿಕ್ಷಣ ಇಲಾಖೆ ಹೇಳಿತ್ತು. ಆದರೂ ಮೊದಲ ದಿನವೇ 685 ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಪರೀಕ್ಷೆಗೆ ಗೈರು ಹಾಜರಾದರು.

    ಜಿಲ್ಲೆಯಲ್ಲಿ 24,904 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅದರಲ್ಲಿ 24,224 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕಂಟೈನ್ಮೆಂಟ್ ಜೋನ್​ನಲ್ಲಿದ್ದ 34 ವಿದ್ಯಾರ್ಥಿಗಳಲ್ಲಿ 27 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ 5 ಮಂದಿ ಹೊರಗುಳಿಯುವಂತಾಯಿತು. ವಲಸೆ ಬಂದ 661 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.

    84 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿತ್ತು. ಪರೀಕ್ಷೆಗೆ ತೆರಳಲು 142 ಖಾಸಗಿ ಬಸ್, 56 ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಂತ ವಾಹನಗಳಲ್ಲಿ ಬಂದರೆ, 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಬಂದು ಪರೀಕ್ಷೆ ಬರೆದರು. ಶೀತ, ಜ್ವರ, ಕೆಮ್ಮು ಸೇರಿ ಅನಾರೋಗ್ಯದಿಂದ ಬಳಲುತ್ತಿದ್ದ ಕೆಲವರನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಯಿಸಲಾಯಿತು.

    ಮಾಸ್ಕ್, ಸ್ಯಾನಿಟೈಸರ್ ವಿತರಣೆ: ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಬೆಳಗ್ಗೆ 8.30ರಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಮುಂದೆ ಹಾಜರಿದ್ದರು. ಸರದಿಯಲ್ಲಿ ನಿಂತು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡರು. ಪರೀಕ್ಷಾ ಕೇಂದ್ರಗಳ ಹೊರಗಡೆ ಸ್ಯಾನಿಟೈಸ್, ಮಾಸ್ಕ್ ವಿತರಣೆ ಮಾಡಲಾಯಿತು.

    ಪಾಲಕರಲ್ಲೂ ಮನೆ ಮಾಡಿದ್ದ ಆತಂಕ: ವಿದ್ಯಾರ್ಥಿಗಳ ಪಾಲಕರಲ್ಲೂ ಆತಂಕ ಮನೆ ಮಾಡಿತ್ತು. ಮಕ್ಕಳನ್ನು ಕರೆತಂದಿದ್ದ ಪಾಲಕರು ಪರೀಕ್ಷಾ ಕೇಂದ್ರದೊಳಗೆ ಹೋಗುವವರೆಗೂ ಜತೆಗಿದ್ದು ಧೈರ್ಯ ತುಂಬಿದರು. ದೂರದ ಊರುಗಳಿಂದ ಬಂದ ಕೆಲವರು ಪರೀಕ್ಷೆ ಆಗುವವರೆಗೂ ಕಾದು ಮಕ್ಕಳನ್ನು ಮನೆಗೆ ಕರೆದೊಯ್ದರು.

    ಪರೀಕ್ಷಾ ಕೇಂದ್ರಗಳಿಗೆ ಡಿಸಿ ಭೇಟಿ: ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ನಿರೀಕ್ಷೆಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಸುಗಮವಾಗಿ ಆರಂಭಗೊಂಡು ಮೊದಲ ದಿನದ ಪರೀಕ್ಷೆ ಮುಕ್ತಾಯಗೊಂಡಿದೆ ಎಂದು ಡಿಸಿ ಕೆ.ಬಿ.ಶಿವಕುಮಾರ್ ತಿಳಿಸಿದರು. ದುರ್ಗಿಗುಡಿ ಸೇರಿ ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಪರೀಕ್ಷಾರ್ಥಿಗಳು ಅಂತರಕಾಯ್ದುಕೊಂಡು ಕೇಂದ್ರ ಪ್ರವೇಶಿಸುವುದನ್ನು ಖುದ್ದು ಗಮನಿಸಿದರು. ಕಾರಣಾಂತರಗಳಿಂದ ಹಾಗೂ ನಿರ್ಬಂಧಿತ ಪ್ರದೇಶಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಇಲಾಖೆಯು ತೀರ್ವನಿಸಿದೆ. ಅವಕಾಶ ವಂಚಿತರು ಈ ಅವಕಾಶವನ್ನು ಪಡೆದು ಪರೀಕ್ಷೆ ಬರೆಯಬಹುದಾಗಿದೆ ಎಂದವರು ತಿಳಿಸಿದ್ದಾರೆ.

    ಜಿಲ್ಲೆಯ ಯಾವುದೇ ಪರೀಕ್ಷಾ ಕೇಂದ್ರಗಳಲ್ಲೂ ಸಮಸ್ಯೆಯಾಗಿಲ್ಲ. ವಲಸೆ ಬಂದ 661 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆದರು. ಒಟ್ಟಾರೆ 24,224 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 680 ವಿದ್ಯಾರ್ಥಿಗಳು ಅನಾರೋಗ್ಯ ಸೇರಿ ವಿವಿಧ ಕಾರಣಗಳಿಂದ ಪರೀಕ್ಷೆಗೆ ಗೈರು ಹಾಜರಾದರು.

    |ಎನ್.ಎಂ.ರಮೇಶ್, ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts