More

    ಮೈ ನಡುಗಿಸುವ ಚಳಿ, ದಟ್ಟವಾದ ಮಂಜು: ಕೆಲವು ರಾಜ್ಯಗಳಲ್ಲಿ ಜ.6 ರವರೆಗೆ ಶಾಲೆಗಳು ಕ್ಲೋಸ್‌, ರೈಲು, ವಿಮಾನ ಮಾರ್ಗದಲ್ಲಿ ಬದಲಾವಣೆ

    ನವದೆಹಲಿ: ಹೊಸ ವರ್ಷದ ಆರಂಭದಿಂದಲೇ ಚಳಿಗಾಲದ ದರ್ಶನವಾಗುತ್ತಿದೆ. ಗುಡ್ಡಗಾಡು ಪ್ರದೇಶದಿಂದ ಬಯಲು ಸೀಮೆಯವರೆಗೂ ಇದರ ಪರಿಣಾಮವನ್ನು ಕಾಣಬಹುದು. ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ಚಳಿ ಮತ್ತು ದಟ್ಟವಾದ ಮಂಜಿನ ಕಾರಣ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದೆ. ಈ ಕಾರಣದಿಂದಾಗಿ, ಅನೇಕ ರಾಜ್ಯಗಳಲ್ಲಿ ಶಾಲೆಗಳನ್ನು ಕ್ಲೋಸ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಅಷ್ಟೇ ಅಲ್ಲ, ಅನೇಕ ರೈಲುಗಳು ಮತ್ತು ವಿಮಾನಗಳ ಮಾರ್ಗಗಳನ್ನು ಸಹ ಬದಲಾಯಿಸಲಾಗಿದೆ.

    ಗ್ರೇಟರ್ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ವರ್ಮಾ ಅವರು ತೀವ್ರ ಚಳಿ ಮತ್ತು ದಟ್ಟವಾದ ಮಂಜಿನಿಂದಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ನೀಡಲಾದ ನಿರ್ದೇಶನಗಳನ್ನು ಅನುಸರಿಸಿ ಜಿಲ್ಲೆಯ ಗೌತಮ್ ಬುಧ್‌ನಗರದಲ್ಲಿ ಎಲ್ಲಾ ಬೋರ್ಡ್-ಮಾನ್ಯತೆ ಪಡೆದ ಶಾಲೆಗಳನ್ನು (8 ನೇ ತರಗತಿ ನರ್ಸರಿ) ಜನವರಿ 6 ರವರೆಗೆ ಮುಚ್ಚಲು ಆದೇಶ ಹೊರಡಿಸಿದ್ದಾರೆ. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿಯೂ ಹೇಳಲಾಗಿದೆ. ಇದಲ್ಲದೇ ದೆಹಲಿ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲೂ ಇದೇ ರೀತಿಯ ಆದೇಶ ಹೊರಡಿಸಲಾಗಿದೆ.

    ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದ ಆರಂಭದಿಂದಲೇ ಶಾಲೆ ಕ್ಲೋಸ್ ಮಾಡಲು ಆದೇಶ ಹೊರಡಿಸಲಾಗಿದ್ದು, ಜನವರಿ 6ರವರೆಗೆ ಅದನ್ನು ಪಾಲಿಸುವಂತೆ ತಿಳಿಸಲಾಗಿದೆ. ಈ ಬಾರಿ ದೆಹಲಿಯಲ್ಲಿ 6 ದಿನಗಳ ಕಾಲ ಚಳಿಗಾಲದ ರಜೆ ಇದೆ. ನವೆಂಬರ್ ತಿಂಗಳಿನಲ್ಲಿ ಮಾಲಿನ್ಯದ ಕಾರಣ ಶಾಲೆಗಳನ್ನು ಮುಚ್ಚಲಾಗಿತ್ತು.

    ಉತ್ತರ ಭಾರತದಲ್ಲಿ ಚಳಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಯುಪಿ ಸರ್ಕಾರವು ಡಿಸೆಂಬರ್ 31 ರಿಂದ 2024 ರ ಜನವರಿ 14 ರವರೆಗೆ ಶಾಲೆಗಳನ್ನು ಮುಚ್ಚಲು ಆದೇಶವನ್ನು ಹೊರಡಿಸಿತ್ತು. ಇದರ ಹೊರತಾಗಿ, ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ತೀವ್ರ ಚಳಿಯಿಂದಾಗಿ ಡಿಸೆಂಬರ್ 25 ರಿಂದ ಶಾಲೆಗೆ ರಜೆ ನೀಡಲು ಆದೇಶ ನೀಡಲಾಗಿದೆ. ರಾಜಸ್ಥಾನದಲ್ಲಿ ಜನವರಿ 6 ರಂದು ಶಾಲೆಗಳು ತೆರೆಯಲಿವೆ. ಹರಿಯಾಣ ಕೂಡ ಜನವರಿ 15 ರವರೆಗೆ ಚಳಿಗಾಲದ ರಜೆಯನ್ನು ಹೊಂದಿರುತ್ತದೆ.

    ಇದಲ್ಲದೇ ಗುಡ್ಡಗಾಡು ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ಹಾಗೂ ಹಿಮಪಾತದಿಂದಾಗಿ ಜನರು ಪರದಾಡುವಂತಾಗಿದೆ. ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶನಾಲಯವು ಫೆಬ್ರವರಿ 29ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.

    ತಡವಾಗಿ ಸಂಚರಿಸಿದ ರೈಲುಗಳು 
    ತೀವ್ರ ಚಳಿ ಮತ್ತು ಮಂಜಿನ ಪರಿಣಾಮ ರೈಲುಗಳ ಮೇಲೂ ಗೋಚರಿಸುತ್ತಿದೆ. ಇದರಿಂದಾಗಿ ಮಂಗಳವಾರ ದೆಹಲಿಯಲ್ಲಿ 26 ರೈಲುಗಳು ತಡವಾಗಿ ಸಂಚರಿಸಿದವು. ಭೋಪಾಲ್-ನಿಜಾಮುದ್ದೀನ್, ಬೆಂಗಳೂರು-ನಿಜಾಮುದ್ದೀನ್, ಭುವನೇಶ್ವರ-ನವದೆಹಲಿ ರಾಜಧಾನಿ, ರಾಣಿಕಮಲಾಪತಿ ಭೋಪಾಲ್-ನವದೆಹಲಿ, ಹೌರಾ-ನವದೆಹಲಿ ಡುರೊಂಟೊ, ಚೆನ್ನೈ-ನವದೆಹಲಿ, ಪುರಿ-ನವದೆಹಲಿ ಪುರುಷೋತ್ತಮ ಎಕ್ಸ್‌ಪ್ರೆಸ್, ಕಾನ್ಪುರ-ನವದೆಹಲಿ ಶ್ರಮಶಕ್ತಿ, ಹೌರಾ-ನವದೆಹಲಿ ಪೂರ್ವ ಎಕ್ಸ್‌ಪ್ರೆಸ್, ಸಹರ್ಸಾ-ನವದೆಹಲಿ ವೈಶಾಲಿ ಎಕ್ಸ್‌ಪ್ರೆಸ್, ರೇವಾ-ಆನಂದ್ ವಿಹಾರ್ ಎಕ್ಸ್‌ಪ್ರೆಸ್ ರೈಲುಗಳು ರೈಲುಗಳ ವಿಳಂಬ ಸಂಚಾರ ಪಟ್ಟಿಯಲ್ಲಿ ಸೇರಿವೆ.

    ದಟ್ಟವಾದ ಮಂಜು ಮತ್ತು ಕೆಟ್ಟ ಹವಾಮಾನವೂ ವಿಮಾನಗಳ ಮೇಲೂ ಪರಿಣಾಮ ಬೀರಿತು. ಈ ಕಾರಣದಿಂದಾಗಿ, ದೇಶದ ಹಲವೆಡೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ. ಪ್ರತಿಕೂಲ ಹವಾಮಾನ ಮತ್ತು ಸರಿಯಾಗಿ ಗೋಚರವಾಗದ ಪರಿಣಾಮವಾಗಿ ಮಂಗಳವಾರ ಎಂಟು ವಿಮಾನಗಳನ್ನು ತಿರುಗಿಸಬೇಕಾಯಿತು ಮತ್ತು 12 ವಿಮಾನಗಳನ್ನು ರದ್ದುಗೊಳಿಸಲಾಯಿತು ಎಂದು ಹೈದರಾಬಾದ್‌ನ ಜಿಎಂಆರ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವಾರದಿಂದ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗಿದೆ. 

    ಶಾಪಮುಕ್ತ ಅಯೋಧ್ಯೆಯಲ್ಲಿ ಶುರುವಾದ ಅಭಿವೃದ್ಧಿ ಪರ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts