More

    ಶಾಪಮುಕ್ತ ಅಯೋಧ್ಯೆಯಲ್ಲಿ ಶುರುವಾದ ಅಭಿವೃದ್ಧಿ ಪರ್ವ

    | ರಾಘವ ಶರ್ಮ ನಿಡ್ಲೆ, ಅಯೋಧ್ಯೆ

    ಜನವರಿ 22ರಂದು ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ತಯಾರಿ ಭರದಿಂದ ಸಾಗಿದೆ. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಳದ ನಡುವೆ, ಬಿಗಿ ಪೊಲೀಸ್ ಭದ್ರತೆ, ಸೇನೆ ನಿಯೋಜನೆಯೊಂದಿಗೆ ಬಾಲರಾಮನ ಪ್ರತಿಷ್ಠಾಪನೆಗೆ ರಾಮನೂರು ಸಜ್ಜಾಗುತ್ತಿದೆ. ಸ್ಥಳೀಯರಲ್ಲೂ ಉತ್ಸಾಹ ಕಾಣುತ್ತಿದ್ದರೆ, ದೇಶದ ಕೋಟ್ಯಂತರ ರಾಮಭಕ್ತರು ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಲು ಕಾದು ಕುಳಿತಿದ್ದಾರೆ.

    2019ರ ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ತನಕ ಶಾಪಗ್ರಸ್ಥವಾಗಿದ್ದ, ಅಭಿವೃದ್ಧಿಯ ಲವಲೇಶವನ್ನೂ ಕಾಣದ ಅಯೋಧ್ಯೆ, ಮುಂಬರುವ ವರ್ಷಗಳಲ್ಲಿ ಇಡೀ ವಿಶ್ವದ ಗಮನ ಸೆಳೆಯಲಿದ್ದು, ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈ ದಿಕ್ಕಿನಲ್ಲಿ ಕೋಟ್ಯಂತರ ರೂ. ವೆಚ್ಚದ ಮಾಸ್ಟರ್ ಪ್ಲಾನ್​ಗಳನ್ನು ಈಗಾಗಲೇ ಸಿದ್ಧಪಡಿಸಿಕೊಂಡಿವೆ.

    ಈವರೆಗೆ ಸಮರ್ಪಕವಾದ ಬಸ್ ನಿಲ್ದಾಣವನ್ನೇ ನೋಡದ ನಗರಿಯಲ್ಲಿ, ಈಗ ಅತ್ಯಾಧುನಿಕ ರೈಲ್ವೆ ನಿಲ್ದಾಣ ಜತೆಗೆ ಹೊಸ ವಿಮಾನ ನಿಲ್ದಾಣದ ಮೂಲದ ವಾಯು ಸಂಪರ್ಕಕ್ಕೂ ತೆರೆದುಕೊಂಡಿದೆ. ಹೊಸದೊಂದು ಸುಸಜ್ಜಿತ ಬಸ್ ನಿಲ್ದಾಣ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಮತ್ತು ಅದರ ಪೂರ್ವದಲ್ಲೂ ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವುದು ಯಾವುದೇ ಸರ್ಕಾರಗಳಿಗೆ ಆದ್ಯತೆ ವಿಷಯವಾಗಿರಲಿಲ್ಲ. 1992ರ ಘಟನೆ ಬಳಿಕ ರಾಮಜನ್ಮಭೂಮಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರಿಂದ ನಂತರ ಬಂದ ಸರ್ಕಾರಗಳೂ ಅಯೋಧ್ಯೆಯತ್ತ ಗಮನ ನೀಡಲಿಲ್ಲ. ರಾಮಜನ್ಮಭೂಮಿ ಹೊರತುಪಡಿಸಿ, ನಗರದ ಆಮೂಲಾಗ್ರ ಅಭಿವೃದ್ಧಿಗೆ ಸಮಾಜವಾದಿ ಅಥವಾ ಬಹುಜನ ಸಮಾಜ ಪಾರ್ಟಿ ಸರ್ಕಾರಗಳು ಮನಸ್ಸು ಮಾಡಲೇ ಇಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಂಡು, ಆ ಮತಬ್ಯಾಂಕ್​ನ ಆಕ್ರೋಶಕ್ಕೆ ಗುರಿಯಾಗುವುದು ಕಾಂಗ್ರೆಸ್, ಎಸ್​ಪಿ ಮತ್ತು ಬಿಎಸ್​ಪಿಗೆ ಬೇಕಿರಲಿಲ್ಲ. ಹೀಗಾಗಿ, ರಾಮಮಂದಿರ ನಿರ್ವಣಕ್ಕೆ ಬಿಜೆಪಿ ತೋರಿದ ಆಸಕ್ತಿ, ಉತ್ಸಾಹವನ್ನು ಈ ಪಕ್ಷಗಳು ತೋರಲಿಲ್ಲ. ಅಂತಿಮವಾಗಿ, ಸುಪ್ರೀಂಕೋರ್ಟ್ ಹೋರಾಟದಲ್ಲಿ ಗೆದ್ದ ಕೇಂದ್ರ ಸರ್ಕಾರ ಮತ್ತು ಹಿಂದು ಸಂಘಟನೆಗಳು ಮಂದಿರ ನಿರ್ವಣಕ್ಕೆ ಮುಂದಾಗಿ, ಈಗ ಶ್ರೀರಾಮ ಜನ್ಮಸ್ಥಾನದ ಆಮೂಲಾಗ್ರ ಪರಿವರ್ತನೆಗೆ ನಾಂದಿ ಹಾಡಿದ್ದಾರೆ. ಅಲ್ಲಿಗೆ ಕೋಟ್ಯಂತರ ರಾಮಭಕ್ತರ ಶತಮಾನಗಳ ಕನಸು, ಛಲಬಿಡದ ಹೋರಾಟ, ಅಭಿಯಾನಗಳಿಗೆ ನ್ಯಾಯ ಸಿಕ್ಕಂತಾಗಲಿದೆ.

    ‘ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ತಿಂಗಳಿಗೆ 2-3 ಬಾರಿ ಭೇಟಿ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ನಮ್ಮ ಊರಿನ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿರುವುದು ಖುಷಿ ಕೊಟ್ಟಿದೆ’ ಎಂದು ತಳ್ಳೋಗಾಡಿಯಲ್ಲಿ ಪರೋಟಾ, ರೋಟಿ ವ್ಯಾಪಾರ ಮಾಡುವ ಕಮಲೂ ಪಾಂಡೆ ಹೇಳುತ್ತಾರೆ.

    ಮಂದಿರ ನಿರ್ವಣಕ್ಕೆ ಮುನ್ನ ದಿನಕ್ಕೆ ರೂ. 200-300 ಸಂಪಾದಿಸುತ್ತಿದ್ದೆ. ಆದರೆ ಕಳೆದೊಂದು ವರ್ಷದಿಂದ ದಿನಕ್ಕೆ ರೂ. 800-1000 ಸಂಪಾದಿಸುತ್ತಿದ್ದೇನೆ. ಮಂದಿರ ನಿರ್ವಣದ ಬಳಿಕ ಸಂಪಾದನೆ ಹೆಚ್ಚಾಗಬಹುದು ಎಂಬ ಭರವಸೆಯಿದೆ ಎನ್ನುತ್ತಾರೆ ಅಯೋಧ್ಯೆಯ ಆಟೋ ಚಾಲಕ ದೇವಾಂಶ್.

    ಹುಬ್ಬೇರಿಸುವಷ್ಟು ಬದಲಾವಣೆ: ‘ಇದು ಮೂರೂವರೆ ವರ್ಷಗಳ ಹಿಂದೆ ನೋಡಿದ ಅಯೋಧ್ಯೆಯಾ?’ ಅಂತ ಹುಬ್ಬೇರಿಸಿ ನೋಡುವಷ್ಟು ಬದಲಾವಣೆಗಳಾಗಿವೆ. ಕಾನೂನು ವ್ಯಾಜ್ಯ ಹಾಗೂ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಸೊರಗಿದ್ದ ಅಯೋಧ್ಯೆ ಮತ್ತು ಇಲ್ಲಿನ ಸ್ಥಳೀಯರು, ಇಂದು ತಮ್ಮ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವುದನ್ನು ಕಂಡು ಹಷೋಲ್ಲಾಸಭರಿತರಾಗಿದ್ದಾರೆ. ಪ್ರವಾಸಿಗರನ್ನು ಕಂಡ ಕೂಡಲೇ ಜೈ ಶ್ರೀರಾಮ್ ಎಂದು ಕೈಮುಗಿದು ಸ್ವಾಗತಿಸುವ ಜನರಿಲ್ಲಿ ಸಾಕಷ್ಟು ಕಾಣಸಿಗುತ್ತಾರೆ. ಭಗವಾನ್ ಶ್ರೀರಾಮನ ಸ್ವಾಗತಕ್ಕೆ ಇಡೀ ಅಯೋಧ್ಯೆ ಉತ್ಸಾಹ, ಹುಮ್ಮಸ್ಸಿನಿಂದ ಎದ್ದುನಿಂತಂತೆ ಭಾಸವಾಗುತ್ತಿದೆ. ಭಾರತದ ಪ್ರಾಚೀನ ಧಾರ್ವಿುಕ ನಗರಿ, ತನ್ನ ಗತವೈಭವದತ್ತ ಮರಳುತ್ತಿದೆ ಎಂಬ ಸಂತಸ, ಉಲ್ಲಾಸ ಅಯೋಧ್ಯೆಗೆ ಬರುತ್ತಿರುವ ಪ್ರತಿಯೊಬ್ಬ ರಾಮಭಕ್ತನಲ್ಲೂ ಎದ್ದುಕಾಣುತ್ತಿದೆ.

    ಅಭಿವೃದ್ಧಿಗೆ ಹಲವು ಕ್ರಮ: ಅಯೋಧ್ಯೆಯಲ್ಲಿ ರೂ. 20,000 ಕೋಟಿಗೂ ಹೆಚ್ಚಿನ ಆದ್ಯತೆಯ ಅಭಿವೃದ್ಧಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಅಯೋಧ್ಯೆಯನ್ನು ಜಾಗತಿಕ ಧಾರ್ವಿುಕ ಕೇಂದ್ರಗಳಲ್ಲಿ ಪ್ರಮುಖವಾದ ಪವಿತ್ರ ಕೇಂದ್ರ ಎಂದು ಬಿಂಬಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ರೂ. 20,000 ಕೋಟಿಯಲ್ಲಿ ರೂ. 1,700 ಕೋಟಿ ವೆಚ್ಚದ ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. ಇದಲ್ಲದೆ, ಉತ್ತರ ಪ್ರದೇಶ ಗೃಹ ಮತ್ತು ಅಭಿವೃದ್ಧಿ ಮಂಡಳಿ ಗ್ರೀನ್​ಫೀಲ್ಡ್ ಟೌನ್​ಶಿಪ್ ನಿರ್ವಿುಸಲು ರೂ. 3,000 ಕೋಟಿ ವ್ಯಯಿಸುತ್ತಿದೆ. ಇದಕ್ಕಾಗಿ ಸುಮಾರು ಶೇ. 83ರಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 2024ರಲ್ಲಿ ಯೋಜನೆ ಪೂರ್ಣಗೊಳಿಸುವ ಉದ್ದೇಶವಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ರಸ್ತೆಗಳ ನಿರ್ವಣಕ್ಕೆ ರೂ. 12,000 ಕೋಟಿ ಖರ್ಚು ಮಾಡುತ್ತಿದ್ದು, ಇದರಲ್ಲಿ ಚೌರಾಸಿ ಕೋಸಿ ಪರಿಕ್ರಮ ಮಾರ್ಗದ ಅಗಲೀಕರಣಕ್ಕೆ ರೂ. 6,657 ಕೋಟಿ ಮತ್ತು 67 ಕಿಮೀ ಉದ್ದದ ಅಯೋಧ್ಯೆ ಬೈಪಾಸ್ ನಿರ್ವಣಕ್ಕೆ ರೂ. 5,924 ಕೋಟಿ ಮೀಸಲಿಟ್ಟಿದೆ.

    ಪರಿಪೂರ್ಣ ಮಂದಿರಕ್ಕೆ ಬೇಕು 2-3 ವರ್ಷ
    ಜ.22ಕ್ಕೆ ಪ್ರಾಣಪ್ರತಿಷ್ಠೆ ಪೂರ್ಣಗೊಳಿಸಿ, ಭಕ್ತರಿಗೆ ರಾಮನ ಮೂಲಸ್ಥಾನದಲ್ಲಿ ದರ್ಶನ ಮಾಡಿಸಬೇಕು ಎನ್ನುವುದು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್​ನ ಉದ್ದೇಶ. ಹೀಗಾಗಿ, ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳದಿದ್ದರೂ, ಈ ಹಿಂದೆ ನೀಡಿದ ಭರವಸೆಯಂತೆ ಸಂಕ್ರಾಂತಿ ಮುಗಿದು ಉತ್ತರಾಯಣ ಪುಣ್ಯಕಾಲ ಅರಂಭವಾಗುತ್ತಿದ್ದಂತೆ ಪ್ರತಿಷ್ಠಾಪನಾ ಕಾರ್ಯದ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ತೀರ್ವನಿಸಿದರು. 2020ರಲ್ಲಿ ಮಂದಿರ ನಿರ್ವಣದ ಜವಾಬ್ದಾರಿಯನ್ನು ಲಾರ್ಸೆನ್ ಆಂಡ್ ಟೂಬ್ರೊ (ಎಲ್ ಆಂಡ್ ಟಿ) ಕಂಪನಿಗೆ ನೀಡಿದ್ದಾಗ 3 ವರ್ಷಗಳಲ್ಲಿ ಪೂರ್ಣಗೊಳಿಸಬಹುದು ಎಂಬ ಅಭಿಪ್ರಾಯ ನೀಡಿದ್ದರು. ಆದರೆ, ಜನ್ಮಸ್ಥಾನ ವೀಕ್ಷಣೆ ಹಾಗೂ ಪರಿಶೀಲನೆ ಬಳಿಕ ಇಲ್ಲಿ ವಿಪರೀತ ಧೂಳು, ಮರಳಿದ್ದುದರಿಂದ ಅಡಿಪಾಯ ಗಟ್ಟಿ ಮಾಡುವ ಪ್ರಕ್ರಿಯೆಗೇ ಸಾಕಷ್ಟು ಸಮಯ ಬೇಕು ಎಂದು ತಿಳಿಸಿದರು. ಇದಕ್ಕಾಗಿ ಮಂದಿರ ನಿರ್ವಣದ ಜಾಗದಲ್ಲಿ ದೊಡ್ದ ಹೊಂಡ ಅಗೆದು, ಅಡಿಪಾಯ ಗಟ್ಟಿಗೊಳಿಸಲು ಮುಂದಾದರು. ಮೊದಲ ಒಂದು ವರ್ಷ ಅದಕ್ಕೇ ಬೇಕಾಯಿತು. ಹೀಗಾಗಿ, ಎರಡೂವರೆ ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಇದು ಪರಿಪೂರ್ಣ ಮಂದಿರವಾಗಲು ಕನಿಷ್ಠ ಇನ್ನೆರಡು ವರ್ಷ ಬೇಕು ಎಂದು ರಾಮಮಂದಿರ ಟ್ರಸ್ಟ್​ನ ಸದಸ್ಯರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋಧ್ಯೆಯಲ್ಲಿ ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡರು.

    2024 ಪ್ರಯಾಣಿಕ ಸ್ನೇಹಿ ವರ್ಷ: ಹಲವು ಯೋಜನೆ ಜಾರಿಗೊಳಿಸಿದ ಕೆಎಸ್‌ಆರ್‌ಟಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts