More

    ಮೇಯರ್ ಆಯ್ಕೆಗೆ ಮುಹೂರ್ತ ಫಿಕ್ಸ್

    ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ-2023 ಜನವರಿ 6 ಅಥವಾ 9ರಂದು ನಡೆಯುವ ಸಾಧ್ಯತೆಯಿದೆ. ಈ ಕುರಿತು ಸರ್ಕಾರವು ಎರಡು ದಿನಗಳಲ್ಲಿ ಮೀಸಲಾತಿ, ದಿನಾಂಕ ಘೋಷಣೆ ಮಾಡಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

    ನಗರದ ಮಹಾವೀರಭವನದಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರ ಸಭೆಯ ಬಳಿಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಹುಬ್ಬಳ್ಳಿ-ಧಾರಾವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗೆ ಒಂದೇ ಬಾರಿ ಚುನಾವಣೆ ನಡೆದಿತ್ತು. ಆದರೆ, ಒಬಿಸಿ ಮೀಸಲಾತಿ ಕಾಯ್ದೆ ಸಮಸ್ಯೆಯಿಂದಾಗಿ ಮೂರು ಪಾಲಿಕೆಗೆ ಮೇಯರ್ ಆಯ್ಕೆ ಆಗಿರಲಿಲ್ಲ. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್ ಆಯ್ಕೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆಗೆ ಮೇಯರ್ ಆಯ್ಕೆ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಜನವರಿ ಒಳಗಾಗಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

    ಮಹಾನಗರ ಪಾಲಿಕೆಗೆ ಸದಸ್ಯರು ಆಯ್ಕೆಗೊಂಡು 16 ತಿಂಗಳು ಕಳೆದಿದೆ. ಆದರೆ, ಯಾವುದೇ ಸದಸ್ಯರು ಅಸಹಾಯಕರಾಗಿರಲಿಲ್ಲ. ನಿತ್ಯ ವಾರ್ಡ್‌ಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ಬಿಜೆಪಿ 35 ಜನ ಸದಸ್ಯರಲ್ಲಿ ಯಾರೊಬ್ಬರು ಪಕ್ಷದ ಮುಖಂಡರು, ಶಾಸಕರ ಮನೆಗಳಿಗೆ ತೆರಳಿ ಲಾಬಿ ಮಾಡಿಲ್ಲ. ಅಲ್ಲದೆ, ಮೇಯರ್ ಆಯ್ಕೆ ವಿಳಂಬ ಕುರಿತು ಸದಸ್ಯರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿಲ್ಲ ಎಂದರು.

    ಮಹಾನಗರ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಕೀಯ ಪಕ್ಷದ ಸದಸ್ಯರೊಬ್ಬರು ಮೇಯರ್ ಆಯ್ಕೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮೇಯರ್ ಆಯ್ಕೆ ವಿಷಯದಲ್ಲಿ ಮರಾಠಿ, ಕನ್ನಡ, ಲಿಂಗಾಯತ ಎಂಬುದು ಬರುವುದಿಲ್ಲ. ಬಿಜೆಪಿ ಸದಸ್ಯರೇ ಮೇಯರ್ ಆಗುತ್ತಾರೆ. ಹಾಗಾಗಿ ಈ ವಿಷಯ ಕುರಿತು ಹೆಚ್ಚಿನ ಚರ್ಚೆ ಮಾಡುವುದು ಅನಗತ್ಯ ಎಂದು ಹೇಳಿದರು.

    ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದಾಗಿ ಭೇಟಿಯಾಗಿರುವ ಸಂದರ್ಭದಲ್ಲಿ ಬೆಳಗಾವಿ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆಗೆ ಅಡ್ಡಿಯಾಗಿರುವ ಮೀಸಲಾತಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ 2023 ಜನವರಿಯ ಮೊದಲ ವಾರದಲ್ಲಿ ಮೇಯರ್ ಆಯ್ಕೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಅನಿಲ ಬೆನಕೆ, ಬಿಜೆಪಿ ನಗರ ಘಟಕದ ಮುಖಂಡ ಮುರೇಂದ್ರಗೌಡ ಪಾಟೀಲ, ದಾದಾಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts