More

    ಮೇ ತಿಂಗಳಲ್ಲಿ ಮರಣ ಮೃದಂಗ

    ಹುಬ್ಬಳ್ಳಿ: ಕರೊನಾ ಮೊದಲ ಅಲೆಗಿಂತ ಎರಡನೇ ಅಲೆ ವೇಳೆ ಧಾರವಾಡ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಏರಿಕೆಯಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳು ಸೇರಿ 334 ಜನರು ಕೋವಿಡ್ ಮಾರಿಗೆ ಬಲಿಯಾಗಿದ್ದಾರೆ.

    ಮೊದಲ ಅಲೆಯಲ್ಲಿ (2021 ಮಾರ್ಚ್ 3ರವರೆಗೆ) ಒಟ್ಟು 618 ಜನ ಮೃತಪಟ್ಟಿದ್ದಾರೆ. ಕೋವಿಡ್ ಎರಡನೇ ಅಲೆಯು ಕಳೆದ ಮಾರ್ಚ್ ಮಧ್ಯಾರ್ಧ ತಿಂಗಳಲ್ಲಿ ಆಗಮಿಸಿತು. ಆರಂಭದಲ್ಲಿ ಅಷ್ಟು ತೀವ್ರತೆ ಕಂಡು ಬಂದಿರಲಿಲ್ಲ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಏರಿಕೆಯತ್ತ ಸಾಗಿತು. ಇದರೊಟ್ಟಿಗೆ ಸಾವಿನ ಪ್ರಮಾಣವೂ ಹೆಚ್ಚಿತು. ಮೇ ತಿಂಗಳಂತೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ಕಷ್ಟವೇ ಆಗಿತ್ತು.

    ಏಪ್ರಿಲ್ ತಿಂಗಳಲ್ಲಿ ಒಟ್ಟು 7460 ಪಾಸಿಟಿವ್ ಪ್ರಕರಣಗಳಿದ್ದವು. 3963 ಜನರು ಗುಣವಾಗಿ ಬಿಡುಗಡೆಯಾಗಿದ್ದು, ಒಟ್ಟು 77 ಜನರನ್ನು ಕೋವಿಡ್ ಮಹಾಮಾರಿ ಬಲಿ ತೆಗೆದುಕೊಂಡಿತು. ಮೇ ತಿಂಗಳಲ್ಲಿ ಒಟ್ಟು 25281 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 23007 ಜನರು ಗುಣವಾಗಿ ಮನೆ ಸೇರಿದ್ದಾರೆ. ಆದರೆ, ಮೃತರ ಸಂಖ್ಯೆ 267 ಇದೆ. ಮೊದಲ ಹಾಗೂ ಎರಡನೇ ಅಲೆಗಳನ್ನು ಗಣನೆಗೆ ತೆಗೆದುಕೊಂಡರೆ, ಒಂದು ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಸೋಂಕಿತರು ಮೃತಪಟ್ಟಿರುವುದು ಮೇ ತಿಂಗಳಲ್ಲಿ ಎಂಬುದು ಆತಂಕದ ವಿಷಯವಾಗಿದೆ.

    ಮೇ 1ರಿಂದ 23ರವರೆಗೆ 12 ವರ್ಷದೊಳಗಿನ ಒಟ್ಟು 1222 ಮಕ್ಕಳ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 309 ಮಕ್ಕಳಿಗೆ ಪಾಸಿಟಿವ್ ದೃಢಪಟ್ಟಿದೆ. ಲಕ್ಷಣ ರಹಿತ ಬಹಳಷ್ಟು ಮಕ್ಕಳು ಹೋಂ ಐಸೋಲೇಷನ್​ನಲ್ಲಿ ಇದ್ದರು. 14 ಮಕ್ಕಳು ತೀವ್ರ ತರಹದ ಕೋವಿಡ್ ಸೋಂಕಿಗೆ ತುತ್ತಾಗಿ ಕಿಮ್ಸ್​ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇವರಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಈ ಮಕ್ಕಳು ನರರೋಗ, ಕಿಡ್ನಿ, ದೇಹ ವಿಕಾಸ ನ್ಯೂನತೆಯಿಂದ ಮೃತಪಟ್ಟಿದ್ದಾರೆ ಎಂದು ಕಿಮ್್ಸ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ವಾರಿ ತಿಳಿಸಿದ್ದಾರೆ.

    291 ಕರೊನಾ ಪ್ರಕರಣ ದೃಢ: ಧಾರವಾಡ ಜಿಲ್ಲೆಯಲ್ಲಿ ಸೋಮವಾರ 291 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 10 ಜನ ಮೃತಪಟ್ಟಿದ್ದಾರೆ. 5757 ಸಕ್ರಿಯ ಪ್ರಕರಣಗಳಿದ್ದು, 792 ಜನ ಬಿಡುಗಡೆಯಾಗಿದ್ದಾರೆ. ಐಸಿಯುನಲ್ಲಿ 559 ಜನರಿದ್ದಾರೆ. ಕೋವಿಡ್​ನಿಂದ ಇದುವರೆಗೆ 969 ಜನ ಮೃತಪಟ್ಟಿದ್ದಾರೆ. 130 ಜನರು ಬ್ಲ್ಯಾಕ್ ಫಂಗಸ್​ನಿಂದ ನರಳುತ್ತಿದ್ದಾರೆ.

    ಸರ್ಕಾರದಿಂದ ಆಡಿಟ್: ಧಾರವಾಡ ಸೇರಿ ಹಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಮರಣ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತು ಆಡಿಟ್ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಶೇ. 1ರಷ್ಟು ಕೋವಿಡ್ ಮರಣ ದರ ಇರಬಹುದು ಎಂದು ಅಂದಾಜಿಸಲಾಗಿದೆ. ತೀವ್ರ ಉಸಿರಾಟದಿಂದ ಮೃತಪಟ್ಟ ರೋಗಿಗಳ ವರದಿ ನೆಗೆಟಿವ್ ಬಂದರೆ, ಇದನ್ನು ಕೋವಿಡ್ ಮರಣದ ಸಂಖ್ಯೆಯಲ್ಲಿ ಸೇರಿಸುವುದಿಲ್ಲ ಬ್ಲ್ಯಾಕ್ ಫಂಗಸ್ ರೋಗಕ್ಕೆ ಸಂಬಂಧಿಸಿದ ಔಷಧವನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತಿದೆ. ಕೋವಿಡ್ ವ್ಯಾಕ್ಸಿನ್ ಸರಬರಾಜು ಆಧರಿಸಿ ಜಿಲ್ಲೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಖಚಿತತೆಯ (ಪಾಸಿಟಿವಿಟಿ) ಪ್ರಮಾಣ ಶೇ. 14 ಇದೆ. ದಿನದಿಂದ ದಿನಕ್ಕೆ ಸೋಂಕು ಇಳಿಮುಖವಾಗುತ್ತಿದೆ. ವಿರೋಧ ಪಕ್ಷದವರು ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡಬೇಕು ಎಂದು ಶೆಟ್ಟರ್ ಹೇಳಿದರು.

    ಕೋವಿಡ್ ಲಕ್ಷಣಗಳು ಕಂಡುಬಂದ ತಕ್ಷಣ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಉಸಿರಾಟದ ಸಮಸ್ಯೆ ತೀವ್ರಗೊಂಡು ಸಾವು ಸಂಭವಿಸಬಹುದು. ಜನರು ಸೋಂಕು ಬಾರದಂತೆ ಎಚ್ಚೆತ್ತುಕೊಳ್ಳಬೇಕೆನ್ನುವುದು ಇದೇ ಕಾರಣಕ್ಕೆ.
    | ಡಾ. ಈಶ್ವರ ಹಸಬಿ ಕಿಮ್್ಸ ಮೆಡಿಸಿನ್ ವಿಭಾಗದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts