More

    ಮೆಣಸಿನಕಾಯಿ ಗೋಲ್‍ಮಾಲ್

    ಹುಬ್ಬಳ್ಳಿ: ರೈತರು ಬೆಳೆದ ಫಸಲಿಗೆ ಪ್ರಾಮಾಣಿಕ ಹಾಗೂ ಯೋಗ್ಯ ಬೆಲೆ ದೊರೆಯಲಿ ಎನ್ನುವ ಕಾರಣಕ್ಕೆ ಸರ್ಕಾರ ಎಪಿಎಂಸಿಗಳನ್ನು ಮಾಡಿದೆ. ಆದರೆ, ಅದೇ ಜಾಗದಲ್ಲಿ ಮೋಸ, ವಂಚನೆಯಾದರೆ ಅನ್ನದಾತ ಎಲ್ಲಿಗೆ ಹೋಗಬೇಕು?

    ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವಿಸ್ತಾರದಲ್ಲಿ ಬಹಳ ದೊಡ್ಡದೆಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಇಲ್ಲಿಯ ಕೆಲ ವರ್ತಕರು ರೈತರ ಪಾಲಿಗೆ ಹಿತಶತ್ರುಗಳಾಗಿ ಕಾಡುತ್ತಿರುವುದು ಶನಿವಾರ ಬೆಳಕಿಗೆ ಬಂದಿದೆ.

    ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ ನೇತೃತ್ವದಲ್ಲಿ ಆಡಳಿತ ಮಂಡಳಿಯವರು ಇದೇ ಮೊದಲ ಬಾರಿ ದಿಢೀರ್ ಭೇಟಿ ನೀಡಿ, ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ‘ಕೈಮೇಲೆ ವ್ಯಾಪಾರ’ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಲೆಕ್ಕಕ್ಕೆ ಇಲ್ಲದ ಸುಮಾರು 25 ಚೀಲ ಮೆಣಸಿನಕಾಯಿ ವಶಕ್ಕೆ ಪಡೆದಿದ್ದಾರೆ.

    ವಂಚನೆ ಹೇಗೆ?: ಹುಬ್ಬಳ್ಳಿಗೆ ಬೇರೆ ರಾಜ್ಯಗಳಿಂದಲೂ ಮೆಣಸಿನಕಾಯಿ ಬರುತ್ತದೆ. ದರವೂ ಉತ್ತಮವಾಗಿದೆ. ರೈತರ ಹೆಸರಲ್ಲಿ ಒಣಮೆಣಸಿನಕಾಯಿ ಲಾರಿ, ಟ್ರ್ಯಾಕ್ಟರ್, ಇತರೆ ವಾಹನಗಳಲ್ಲಿ ಬರುತ್ತದೆ. ಹಾಗೆ ಬರುವ ವಾಹನಗಳಲ್ಲಿ ಕಡ್ಡಾಯವಾಗಿ ಬೆಳೆ ನಮೂದಾಗಿರುವ ರೈತನ ಉತಾರ ಇರಬೇಕು.

    ಹೀಗೆ ರೈತರು ತಂದ ಮೆಣಸಿನಕಾಯಿ ಪೈಕಿ ಕೆಲವನ್ನು ಮಾತ್ರ ಆನ್​ಲೈನ್ ಟೆಂಡರ್​ಗೆ ಸಾರ್ವಜನಿಕ ಸ್ಥಳದಲ್ಲಿ ಇಟ್ಟು, ಉಳಿದ ಶೇ. 70- 80ರಷ್ಟು ಫಸಲನ್ನು ಕೆಲ ವರ್ತಕರು ಕಳ್ಳ ದಾರಿಯ ಮೂಲಕ ಸಗಟು ವ್ಯಾಪಾರಿಗಳಿಗೆ ದರ ಕೂಗುವ ಮೂಲಕ ಕೈಮೇಲೆ ಮಾರಾಟ ಮಾಡುತ್ತಿದ್ದರು. ಇದರಿಂದ ರೈತರಿಗೆ ಹತ್ತಾರು ಸಾವಿರ ರೂ. ನಷ್ಟವಾಗುತ್ತಿತ್ತು. ಎಪಿಎಂಸಿ ಸೆಸ್, ಜಿಎಸ್​ಟಿ ಎಲ್ಲವನ್ನೂ ಮರೆಮಾಚಲಾಗುತ್ತಿತ್ತು. ರೈತನೊಬ್ಬನ ಹೆಸರಲ್ಲಿ ರಾಯಚೂರ ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರಿನಿಂದ 220 ಚೀಲ ಮೆಣಸಿನಕಾಯಿ ತರಲಾಗಿತ್ತು. ಆದರೆ, ಗಣಕೀಕೃತ ಉತಾರದಲ್ಲಿ ‘ಮೆಣಸಿನಕಾಯಿ’ ಎಂದು ಕೈಯಿಂದ ಬರೆಯಲಾಗಿತ್ತು. ಅಲ್ಲದೆ, ಯಾವ ಅಂಗಡಿಗೆ ಈ ಮೆಣಸಿನಕಾಯಿ ಇಳಿಸಲಾಗಿತ್ತೋ ಅಲ್ಲಿ ಕರ್ನಲ್​ನಿಂದ ಬಂದ ಫಸಲು ಎಂದು ನಮೂದಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

    ಗೇಟ್ ಎಂಟ್ರಿ ಇಲ್ಲವೇ?: ಎಪಿಎಂಸಿಗೆ ಬರುವ ಪ್ರತಿಯೊಂದು ಫಸಲಿನ ದಾಖಲೆ ಗೇಟ್​ನಲ್ಲೇ ಎಂಟ್ರಿ ಆಗಬೇಕು. ಅದೇ ರೀತಿ ಹೊರಗೆ ಹೋಗುವ ಸರಕಿನ ವಿವರ ದಾಖಲಿಸಲಾಗುತ್ತದೆ. ಹಾಗಿದ್ದ ಮೇಲೆ ಇದು ಲೆಕ್ಕಕ್ಕೆ ಸಿಗದಿರಲು ಹೇಗೆ ಸಾಧ್ಯ? 24 ಗಂಟೆಯೂ ಗೇಟ್​ನಲ್ಲಿ ಭದ್ರತೆ ಇಲ್ಲವೇ? ಇದ್ದರೂ ಸರಿಯಾಗಿ ಪರಿಶೀಲನೆ ನಡೆಯುತ್ತಿಲ್ಲವೇ? ಅಥವಾ ಏನಾದರೂ ಗೋಲ್‍ಮಾಲ್ ನಡೆಸಲಾಗುತ್ತಿದೆಯೇ? ಎಂಬ ಹತ್ತಾರು ಅನುಮಾನಗಳು ಮೂಡುತ್ತಿವೆ. ದಾಳಿ ತಂಡದಲ್ಲಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಸದಸ್ಯರಾದ ಶಿವಯೋಗಿ ಮಂಟೂರಶೆಟ್ರ, ಸುರೇಶ ಕಿರೇಸೂರ, ರಘುನಾಥ ಕೆಂಪಲಿಂಗನಗೌಡ್ರ, ಬಸವರಾಜ ನಾಯ್ಕರ, ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ಇತರರು ಇದ್ದರು.

    ಸಿಬ್ಬಂದಿ ಶಾಮೀಲು, ಮಿಲಾಪಿ ವ್ಯವಹಾರ: ಅಂಗಡಿಗೆ ಬಂದ ಮೆಣಸಿನಕಾಯಿಯನ್ನು ಮುಕ್ತವಾಗಿ ಟೆಂಡರ್​ಗೆ ಇಡದೇ ಒಳಗಿಂದೊಳಗೆ ಕೆಲವೇ ಖರೀದಿದಾರರ ಮುಂದೆ ದರ ಕೂಗಲಾಗುತ್ತದೆ. ಇಲ್ಲಿ ಮಿಲಾಪಿ ವ್ಯವಹಾರ ಕೂಡ ನಡೆಯುತ್ತದೆ. ಇದರಿಂದ 20 ಸಾವಿರ ರೂ.ಗೆ ಕ್ವಿಂಟಾಲ್​ನಂತೆ ಮಾರಾಟವಾಗುವ ಮೆಣಸಿನಕಾಯಿ ಹೆಚ್ಚೆಂದರೆ 15 ಸಾವಿರ ರೂ.ಗೆ ಮಾರಾಟ ಮಾಡಿ ರೈತರಿಗೆ ಸಾವಿರಾರು ರೂ. ವಂಚಿಸಲಾಗುತ್ತಿದೆ. ಈ ರೀತಿಯ ಅಕ್ರಮ ವ್ಯವಹಾರ ಇಂದು ನಿನ್ನೆಯದಲ್ಲ. ಮೆಣಸಿನಕಾಯಿ ಅಲ್ಲದೆ, ಇತರೆ ಬೆಳೆಗಳಲ್ಲೂ ರೈತರ ಫಸಲಿಗೆ ಕಡಿಮೆ ದರ ನಿಗದಿ ಮಾಡಲಾಗುತ್ತಿದೆ. ಈ ಅವ್ಯವಹಾರ ಎಪಿಎಂಸಿಯ ಕೆಲ ಸಿಬ್ಬಂದಿಯ ಕುಮ್ಮಕ್ಕು ಇಲ್ಲದೇ ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತುತ್ತಿದ್ದಾರೆ.

    ದಾಳಿ ಸಂದರ್ಭದಲ್ಲಿ ಆವಕಕ್ಕೆ ಸಂಬಂಧಿಸಿ ಸರಿಯಾದ ದಾಖಲೆ ಇಲ್ಲದಿರುವುದು ಪತ್ತೆಯಾಗಿದೆ. 25 ಚೀಲ ವಶಕ್ಕೆ ಪಡೆದಿದ್ದೇವೆ. ಹೇರಾಪೇರಿ ಮಾಡಿದ ವರ್ತಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಈವರೆಗೆ ಗೇಟ್ ಎಂಟ್ರಿ ಇರಲಿಲ್ಲ. ಕಳೆದೊಂದು ವಾರದಿಂದ ಗೇಟ್ ಎಂಟ್ರಿ ಬಲಗೊಳಿಸಲಾಗಿದೆ.

    | ರಾಜಣ್ಣ ಎಪಿಎಂಸಿ ಕಾರ್ಯದರ್ಶಿ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts