More

    ಮೆಡಿಕಲ್ ಕಾಲೇಜ್​ನಿಂದ ಏನು ಪ್ರಯೋಜನ?

    ಕಾರವಾರ: ‘100 ಕೋಟಿ ರೂಪಾಯಿಯಲ್ಲಿ ಮೆಡಿಕಲ್ ಕಾಲೇಜ್ ಕಟ್ಟಿದರು. ಆದರೂ ಇಲ್ಲಿ ಬೇಕಾದ ಚಿಕಿತ್ಸೆ ಸಿಗುತ್ತಿಲ್ಲ. ಮಂಗಳೂರು, ಮಣಿಪಾಲ, ಬಾಂಬೋಲಿಂ, ಧಾರವಾಡ, ಶಿವಮೊಗ್ಗಕ್ಕೆ ಹೋಗುವ ಗೋಳು ತಪ್ಪಿಲ್ಲ. ಕಾಲೇಜ್ ಆಗಿ ಏನು ಪ್ರಯೋಜನವಾಯ್ತು…?’

    ಇದು ಕಾರವಾರ ಕ್ರಿಮ್್ಸ ಬಗ್ಗೆ, ಅದರಲ್ಲೂ ವಿಶೇಷವಾಗಿ ಕರೊನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಜನರು ಕೇಳುವ ಸಾಮಾನ್ಯ ಪ್ರಶ್ನೆ ಇದು.

    ಈ ಹಿನ್ನೆಲೆಯಲ್ಲಿ, ತುರ್ತು ವೈದ್ಯಕೀಯ ಸೌಲಭ್ಯಗಳು ಇಲ್ಲಿ ಸಿಗದಿರಲು ಕಾರಣ ಏನು ಎಂಬ ಬಗ್ಗೆ ‘ವಿಜಯವಾಣಿ’ ದಿನಪತ್ರಿಕೆಯು ವಿವಿಧ ವೈದ್ಯರ ಜತೆ ಚರ್ಚೆ ನಡೆಸಿ ಇಲ್ಲಿನ ಅವಶ್ಯಕತೆ, ಸಮಸ್ಯೆ ಕುರಿತು ಬೆಳಕು ಚೆಲ್ಲಿದೆ.

    ಎಮರ್ಜೆನ್ಸಿ ಸೌಲಭ್ಯ ಎಂದರೆ, ದೊಡ್ಡ ಕಟ್ಟಡ, ಅತ್ಯಾಧುನಿಕ ಯಂತ್ರಗಳು ಮಾತ್ರವಲ್ಲ. ಅದನ್ನು ಬಳಸುವ ತಜ್ಞ ವೈದ್ಯರ ತಂಡವೂ ಅಷ್ಟೇ ಅವಶ್ಯ ಎಂಬುದು ಹೆಚ್ಚಿನ ವೈದ್ಯರ ಅಭಿಪ್ರಾಯ. ತಜ್ಞ ವೈದ್ಯರ ನೇಮಕ ಮಾಡುವ ದೊಡ್ಡ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಮೇಲಿದೆ.

    ವೈದ್ಯರನ್ನು ತರುವುದೇ ಸವಾಲು

    ಸದ್ಯ ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ 102 ವೈದ್ಯರಿದ್ದಾರೆ. ಇನ್ನೂ 80 ವೈದ್ಯ ಹುದ್ದೆಗಳು ಖಾಲಿ ಇವೆ. ಸದ್ಯ ರಾಜೀವ ಗಾಂಧಿ ವೈದ್ಯಕೀಯ ವಿವಿಯಿಂದ ಸ್ನಾತಕೋತ್ತರ ಕೋರ್ಸ್​ಗಳ ಆರಂಭಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ವೈದ್ಯಕೀಯ ಸ್ನಾತಕೋತ್ತರ ಕೋರ್ಸ್​ಗಳು ಪ್ರಾರಂಭವಾದರೆ ಇನ್ನಷ್ಟು ಸ್ಥಾನಿಕ ವೈದ್ಯರು ಆಗಮಿಸಲಿದ್ದಾರೆ. ಎಂಆರ್​ಐ ಸ್ಕ್ಯಾನಿಂಗ್ ವ್ಯವಸ್ಥೆ ಇದೆ. ಶೀಘ್ರದಲ್ಲಿಯೇ ವೈರಾಲಜಿ ಪ್ರಯೋಗಾಲಯ ಸಿದ್ಧವಾಗುತ್ತಿದೆ. 160 ಕೋಟಿ ರೂ.ಗಳಲ್ಲಿ 400 ಹಾಸಿಗೆಗಳ ಹೊಸ ಆಸ್ಪತ್ರೆ ಕಟ್ಟಡ ನಿರ್ವಣವಾಗುತ್ತಿದ್ದು, ಅಪಘಾತವಾದವರಿಗೆ ತುರ್ತು ಚಿಕಿತ್ಸೆ ನೀಡಬಲ್ಲ ಮಿನಿ ಟ್ರಾಮಾ ಸೆಂಟರ್ ಸೌಲಭ್ಯವೂ ಇರಲಿದೆ. ಇಷ್ಟೆಲ್ಲ ಆದರೂ ಇಲ್ಲಿಯೇ ಎಲ್ಲ ರೀತಿಯ ಚಿಕಿತ್ಸೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

    ಮುಖ್ಯವಾಗಿ ನರ ರೋಗ, ಹೃದ್ರೋಗ, ಕ್ಯಾನ್ಸರ್ ಹಾಗೂ ರೋಗ ಶಾಸ್ತ್ರ ಮುಂತಾದ ವಿಭಾಗಗಳಿಗೆ ತಜ್ಞವೈದ್ಯರ ನೇಮಕಾತಿ ಅತಿ ಅವಶ್ಯಕತೆ ಇದೆ. ಜಿಲ್ಲೆಯ ಮೂಲದ ಸಾಕಷ್ಟು ತಜ್ಞ ವೈದ್ಯರು ರಾಜ್ಯದ ವಿವಿಧೆಡೆ ಹಾಗೂ ಹೊರ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕಾರವಾರ ಕಾಲೇಜ್​ಗೆ ಬರಲು ಒಪ್ಪುತ್ತಿಲ್ಲ. ಏಕೆಂದರೆ ಇಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇದೆ. ದಿನಕ್ಕೆ ನಾಲ್ಕಾರು ಶಸ್ತ್ರ ಚಿಕಿತ್ಸೆ ಮಾಡಿ ಲಕ್ಷ ರೂಪಾಯಿ ಗಳಿಸುವ ತಜ್ಞ ವೈದ್ಯರು ಕಾರವಾರ ಕಾಲೇಜ್​ನಲ್ಲಿ ಸಿಗುವ 2.5 ಲಕ್ಷ ರೂ. ಮಾಸಿಕ ವೇತನಕ್ಕೆ ಒಪ್ಪುವುದಾದರೂ ಹೇಗೆ ಎಂಬುದು ಜಿಲ್ಲೆಯ ಹಿರಿಯ ವೈದ್ಯರೊಬ್ಬರ ಪ್ರಶ್ನೆ.

    ಭೌಗೋಳಿಕ ಸ್ವರೂಪವೂ ಸಮಸ್ಯೆ: ಜಿಲ್ಲೆಯ ಭೌಗೋಳಿಕ ಸ್ವರೂಪವೂ ಇಲ್ಲಿನ ರೋಗಿಗಳನ್ನು ಹೊರ ಜಿಲ್ಲೆಗಳಿಗೆ ಕಳಿಸಲು ಮೂಲ ಕಾರಣವಾಗಿದೆ. ಭಟ್ಕಳದಲ್ಲಿ ತುರ್ತು ಪರಿಸ್ಥಿತಿಯಲ್ಲಿರುವ ಒಬ್ಬ ರೋಗಿಯನ್ನು ಕಾರವಾರಕ್ಕೆ ಕರೆತರಲು 128 ಕಿ.ಮೀ. ಸಂಚರಿಸಬೇಕು. ಅದರೆ, ದಕ್ಷಿಣದತ್ತ 91 ಕಿ.ಮೀ. ಪ್ರಯಾಣಿಸಿದರೆ ಸೂಪರ್ ಸ್ಪೆಷಾಲಿಟಿ ಸೌಲಭ್ಯವಿರುವ ಮಣಿಪಾಲ ಆಸ್ಪತ್ರೆ ಸಿಗುತ್ತದೆ. ಇನ್ನು ದಾಂಡೇಲಿಯ ರೋಗಿಯನ್ನು ಕಾರವಾರಕ್ಕೆ ಕರೆತರಲು 103 ಕಿ.ಮೀ. ದೂರವಿದೆ. 73 ಕಿಮೀ ದೂರದಲ್ಲಿ ಹುಬ್ಬಳ್ಳಿ ತಲುಪಬಹುದು. ಸಿದ್ದಾಪುರದ ವ್ಯಕ್ತಿಯನ್ನು ಘಟ್ಟ ಇಳಿದು ಕಾರವಾರಕ್ಕೆ ಕರೆತರುವ ಬದಲು ಶಿವಮೊಗ್ಗಕ್ಕೆ ಬೇಗನೇ ತಲುಪಬಹುದು. ಹೀಗಾಗಿ, ಮೊದಲಿನಿಂದಲೂ ಕಾರವಾರ ಜಿಲ್ಲಾ ಆಸ್ಪತೆಗೆ ಜಿಲ್ಲೆಯ ಇತರೆಡೆಯಿಂದ ರೋಗಿಗಳನ್ನು ಕರೆತರುವ ಪರಿಪಾಠ ಕಡಿಮೆ. ಮುಂದೆ ಕಾರವಾರದಲ್ಲಿ ಎಲ್ಲ ಸೌಲಭ್ಯಗಳಾದರೂ ಇದೇ ಸಮಸ್ಯೆ ಎದುರಾಗಲಿದೆ ಎಂಬುದು ವೈದ್ಯರೊಬ್ಬರ ಅಭಿಪ್ರಾಯ.

    ಎಮರ್ಜೆನ್ಸಿ ಕೇರ್ ವ್ಯವಸ್ಥೆ ಎಂದರೆ ಸೆಂಟ್ರಲ್ ವೆಂಟಿಲೇಶನ್ ವ್ಯವಸ್ಥೆ, ಕ್ಯಾಥಲ್ಯಾಬ್, ಎಂಆರ್ ಸ್ಕ್ಯಾನಿಂಗ್​ನಂಥ ಸೌಲಭ್ಯ, ಪ್ರಯೋಗಾಲಯ ಹಾಗೂ ಇದನ್ನೆಲ್ಲ ನಿಭಾಯಿಸುವ ತಜ್ಞ ವೈದ್ಯರ ತಂಡ ಇರಬೇಕು. ಸದ್ಯ ಜಿಲ್ಲೆಯಲ್ಲಿ ಅಂಥ ಎಲ್ಲವೂ ಒಂದು ಸೂರಿನಡಿ ಸಿಗುವ ಆಸ್ಪತ್ರೆ ಇಲ್ಲ. ಸಾಮಾನ್ಯವಾಗಿ ಮೆಡಿಕಲ್ ಕಾಲೇಜ್​ಗಳಲ್ಲಿ ಮಾತ್ರ ಈ ಎಲ್ಲ ಸೌಲಭ್ಯಗಳನ್ನು ಒಂದೆಡೆ ಕಲ್ಪಿಸಲು ಸಾಧ್ಯ. ಕಾರವಾರ ಮೆಡಿಕಲ್ ಕಾಲೇಜ್​ನಲ್ಲಿ ಮುಂದಿನ ದಿನದಲ್ಲಿ ಇಂಥ ಸೌಲಭ್ಯ ಸಿಕ್ಕರೂ ಇಲ್ಲಿನ ಭೌಗೋಳಿಕ ಪರಿಸ್ಥಿತಿಯಿಂದ ಇಡೀ ಜಿಲ್ಲೆಗೆ ಉಪಯೋಗವಾಗುವುದು ಕಷ್ಟ. ಇದರಿಂದ ಜಿಲ್ಲೆಯ ಕೇಂದ್ರ ಸ್ಥಾನ ಕುಮಟಾದಲ್ಲಿ ಒಂದು ಎಮರ್ಜೆನ್ಸಿ ಕೇರ್ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಇದೆ.

    ಡಾ.ಜಿ.ಜಿ. ಹೆಗಡೆ, ಹಿರಿಯ ವೈದ್ಯರು, ಕುಮಟಾ

    ಖಾಸಗಿ ಆಸ್ಪತ್ರೆಗಳಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ನೀಡಿದರೆ ಮಧ್ಯಮ ಹಾಗೂ ಶ್ರೀಮಂತ ವರ್ಗದವರೂ ಇದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಸದ್ಯ ಸರ್ಕಾರ ನೀಡುವ ಅನುದಾನದಲ್ಲಿ ಯಂತ್ರೋಪಕರಣ ಖರೀದಿ, ಮೂಲ ಸೌಕರ್ಯ ವ್ಯವಸ್ಥೆ ಮಾಡುವುದು ದೊಡ್ಡ ಸಮಸ್ಯೆಯೇ ಅಲ್ಲ. ಸೂಪರ್ ಸ್ಪೆಷಾಲಿಟಿ ಎಂದು ಬೇರೆ ಆಸ್ಪತ್ರೆ ಕಟ್ಟುವ ಬದಲು ಇದ್ದ ಆಸ್ಪತ್ರೆಯಲ್ಲೇ ಹೆಚ್ಚಿನ ವೈದ್ಯರು, ತಜ್ಞರ ಸೇವೆ ಸಿಗುವ ವ್ಯವಸ್ಥೆ ಮಾಡಿಕೊಟ್ಟರೆ ಒಳ್ಳೆಯದು.

    ಡಾ.ಸವಿತಾ ಕಾಮತ್ , ಆಡಳಿತ ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ ಭಟ್ಕಳ

    ಎಮರ್ಜೆನ್ಸಿ, ಸೂಪರ್ ಸ್ಪೆಷಾಲಿಟಿ ಎಂದು ಪ್ರತ್ಯೇಕ ಆಸ್ಪತ್ರೆ ಕಟ್ಟುವ ಬೇಡಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಸದ್ಯ ಇರುವ ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿಯೇ ಬೇಕಾದ ಸೌಲಭ್ಯಗಳು ಹಾಗೂ ತಜ್ಞ ವೈದ್ಯರನ್ನು ನೇಮಕ ಮಾಡಿದಲ್ಲಿ ಜಿಲ್ಲೆಯ ಜನ ಇಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳೂ ಮುಂದೆ ನಿಪುಣ ವೈದ್ಯರಾಗಿ ಹೊರಹೊಮ್ಮಲು ಸಾಧ್ಯ.

    ಡಾ.ನಿತಿನ್ ಪಿಕಳೆ, ಐಎಂಎ ಅಧ್ಯಕ್ಷ, ಕಾರವಾರ

    ಬೇಕಾದ ಸೌಲಭ್ಯ ಕೊಡಲು ವೈದ್ಯಕೀಯ ಶಿಕ್ಷಣ ಇಲಾಖೆ ಸಿದ್ಧವಿದೆ. ಆದರೆ, ನಮಗೆ ಮುಖ್ಯವಾಗಿ ಬೇಕಾಗಿರುವುದು ತಜ್ಞ ವೈದ್ಯರು. ಎಷ್ಟೇ ಬಾರಿ ಸಂದರ್ಶನ ಕರೆದರೂ ಇಲ್ಲಿಗೆ ವೈದ್ಯರು ಬರಲು ಒಪ್ಪುತ್ತಿಲ್ಲ. ತಜ್ಞ ವೈದ್ಯರಿಲ್ಲದ ಕಾರಣಕ್ಕೆ ನಾವು ಹಲವು ಪ್ರಕರಣಗಳನ್ನು ನಿರ್ವಹಿಸಲು ಸಾಧ್ಯವಾಗದೆ ಬೇರೆ ಜಿಲ್ಲೆ, ರಾಜ್ಯದ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕಾಗುತ್ತಿದೆ.

    ಡಾ. ಗಜಾನನ ನಾಯಕ , ನಿರ್ದೇಶಕರು, ಸರ್ಕಾರಿ ಮೆಡಿಕಲ್ ಕಾಲೇಜ್ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts