More

    ಮೆಕ್ಕೆಜೋಳಕ್ಕೆ ಲದ್ದಿ ಹುಳು ಕಾಟ

    ರಾಣೆಬೆನ್ನೂರ: ಕಳೆದ ಮೂರ್ನಾಲ್ಕು ವರ್ಷಗಳಿಂದ ಮೆಕ್ಕೆಜೋಳ ಬೆಳೆಗೆ ತೆನೆ ಕಟ್ಟುವ ಹಂತದಲ್ಲಿ ಕಾಡುತ್ತಿದ್ದ ಲದ್ದಿ ಹುಳು ಕೀಟಬಾಧೆ ಈ ಬಾರಿ ಬೆಳೆ ಬೆಳೆಯುವ ಹಂತದಲ್ಲಿಯೇ ಕಾಡಲಾರಂಭಿಸಿದ್ದು, ರೈತರ ನಿದ್ದೆಗೆಡಿಸಿದೆ.
    ತಾಲೂಕಿನಲ್ಲಿ ಈಗಾಗಲೇ ಮೆಕ್ಕೆಜೋಳ ಬೀಜ ಬಿತ್ತನೆ ಸಂಪೂರ್ಣ ಮುಕ್ತ್ತಾಯವಾಗಿದೆ. ಬೆಳೆ ಕೂಡ ಒಂದು ಅಡಿಯಷ್ಟು ಎತ್ತರ ಬೆಳೆದಿದೆ. ದಿನವೊಂದಕ್ಕೆ ನೂರಾರು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳವನ್ನು ಲದ್ದಿ ಹುಳುಗಳು ತಿಂದು ಹಾಕುತ್ತಿವೆ. ಹೀಗಾಗಿ, ಬೆಳವಣಿಗೆ ಹಂತದಲ್ಲಿರುವ ಮೆಕ್ಕೆಜೋಳ ಭೂಮಿಯಿಂದ ಮೇಲೇಳುವ ಹಂತದಲ್ಲಿಯೇ ನೆಲ ಕಚ್ಚುತ್ತಿದೆ. ಲದ್ದಿ ಹುಳದಿಂದಾಗಿ ಶೇ. 30ರಷ್ಟು ಇಳುವರಿ ಕುಸಿಯುವ ಭೀತಿ ಎದುರಾಗಿದೆ.
    ಹತ್ತಿ ಬಿಟ್ಟು ಮೆಕ್ಕೆಜೋಳ ಹಿಡಿದ್ದಿದ್ದ ರೈತ: ತಾಲೂಕಿನಲ್ಲಿ ಹತ್ತಿ ಹಾಗೂ ಮೆಕ್ಕೆಜೋಳ ಬೆಳೆಗಳು ಪ್ರಮುಖವಾಗಿವೆ. ಈ ಬಾರಿ ಹೆಚ್ಚಿನ ಪ್ರಮಾಣದ ರೈತರು ಹತ್ತಿ ಬೆಳೆ ಕೈ ಬಿಟ್ಟು ಮೆಕ್ಕೆಜೋಳ ಬೀಜ ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆ 39,866 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೀಜ ಬಿತ್ತನೆ ಗುರಿ ಹೊಂದಿದ್ದರೆ, 42,222 ಹೆಕ್ಟೇರ್ ಪ್ರದೇಶದಲ್ಲಿ ಬೀಜ ಬಿತ್ತನೆಯಾಗಿದೆ. 3,360 ಹೆಕ್ಟೇರ್ ಹತ್ತಿ ಬೀಜ ಬಿತ್ತನೆ ಹೊಂದಿದ್ದರೆ, 1,731 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೀಜ ಬಿತ್ತನೆಯಾಗಿದೆ.
    ಹತ್ತಿಗೆ ಪಿಂಕ್​ಬೋಯರ್ ಕೀಟಬಾಧೆ ಹೆಚ್ಚಾದ ಕಾರಣ ರೈತರು ಹತ್ತಿ ಬದಲು ಮೆಕ್ಕೆಜೋಳ ಬೆಳೆಯಲು ಮುಂದಾದರು. ಆದರೀಗ ಮೆಕ್ಕೆಜೋಳಕ್ಕೂ ಲದ್ದಿ ಹುಳುವಿನ ಕಾಟ ಶುರುವಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಹತೋಟಿಗಾಗಿ ರೈತರು ರಾಸಾಯನಿಕ ದ್ರಾವಣ ಸಿಂಪಡಣೆ ಮಾಡುತ್ತಿದ್ದಾರೆ. ಆದರೂ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ರೈತರು ಅಳಲು ತೋಡಿಕೊಂಡಿದ್ದಾರೆ.
    ಬಿಸಿಲು ಬಿದ್ದರೆ ಅನುಕೂಲ: ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತಂಪಾದ ಗಾಳಿ ಬೀಸುತ್ತಿದೆ. ಜತೆಗೆ ಆಗಾಗ ಜಿಟಿಜಿಟಿ ಮಳೆ ಆಗುತ್ತಿದೆ. ಇದರಿಂದಾಗಿ ಲದ್ದಿ ಹುಳು ಕೀಟಬಾಧೆ ಹೆಚ್ಚಾಗಿದೆ. ಮುಂದಿನ ದಿನದಲ್ಲಿ ಕೊಂಚ ಬಿಸಿಲು ಬಿದ್ದರೆ ಕೀಟಬಾಧೆ ತಗ್ಗಲಿದೆ. ಆದ್ದರಿಂದ ರೈತರು ಸದ್ಯ ಲದ್ದಿ ಹುಳುಗಳಿಗೆ ರಾಸಾಯನಿಕ ಸಿಂಪಡಣೆ
    ಮಾಡಿ ನಿಯಂತ್ರಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

    ಈ ಬಾರಿ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಬೇಗ ಅಂಟಿಕೊಂಡಿದೆ. ರೈತರು ಮೆಕ್ಕೆಜೋಳದ ಎಲೆಯ ಮೇಲೆ ತೇವಾಂಶ ಕಡಿಮೆಯಾದ ಕೂಡಲೆ ಔಷಧ ಸಿಂಪಡಣೆ ಮಾಡಬೇಕು. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಲದ್ದಿ ಹುಳು ನಿಯಂತ್ರಣಕ್ಕಾಗಿ ಔಷಧ ಲಭ್ಯವಿದೆ.
    | ಎಂ.ಬಿ. ಗೌಡಪ್ಪಳವರ ಸಹಾಯಕ ಕೃಷಿ ನಿರ್ದೇಶಕ
    ಮೆಕ್ಕೆಜೋಳ ಈಗತಾನೆ ಬೆಳೆಯುತ್ತಿದೆ. ಇಂಥ ಸಮಯದಲ್ಲಿ ಲದ್ದಿ ಹುಳು ಕೀಟಬಾಧೆ ಶುರುವಾಗಿದೆ. ಇದರಿಂದ ಬೆಳೆ ಸಂಪೂರ್ಣ ಹಾಳಾಗುತ್ತಿದೆ. ಔಷಧ ಸಿಂಪಡಣೆ ಮಾಡಿದರೂ ಕೀಟ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ಕೀಟ ನಿಯಂತ್ರಣಕ್ಕೆ ಸೂಕ್ತ ಮಾಗೋಪಾಯ ಸೂಚಿಸಬೇಕು.
    | ಹನುಮಂತಪ್ಪ ಕೆ. ಮೆಕ್ಕೆಜೋಳ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts