More

    ಮೂವತ್ತೊಂದನೇ ಸ್ಥಾನಕ್ಕೆ ಕುಸಿದ ಚಿತ್ರದುರ್ಗ

    ಚಿತ್ರದುರ್ಗ: ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ರಾಜ್ಯದಲ್ಲೇ ಜಿಲ್ಲೆ 31ನೇ ಸ್ಥಾನ ಪಡೆಯುವ ಮೂಲಕ ಕಳಪೆ ಸಾಧನೆಗೈದಿದೆ.

    2022-23ನೇ ಶೈಕ್ಷಣಿಕ ಸಾಲಿನಲ್ಲಿ ಶೇ 69.5 ರಷ್ಟು ಫಲಿತಾಂಶದೊಂದಿಗೆ 28ನೇ ಸ್ಥಾನ, 2021-22ರಲ್ಲಿ ಶೇ 49.31 ರಷ್ಟು ಫಲಿತಾಂಶ ಪಡೆದು, ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳ ಪೈಕಿ 32ನೇ ಸ್ಥಾನದೊಂದಿಗೆ ಕೊನೆ ಸ್ಥಾನದಲ್ಲಿತ್ತು.

    ಜಿಲ್ಲೆಗೆ ಇದು ನಿರೀಕ್ಷಿತ ಫಲಿತಾಂಶ ಅಲ್ಲದಿದ್ದರೂ ಹಿಂದಿನ ಸಾಲಿನ ಶೈಕ್ಷಣಿಕ ಸಾಲುಗಳಿಗೆ ಹೋಲಿಸಿದರೆ, ಈ ಬಾರಿ ಶೇಕಡವಾರು 72.92 ರಷ್ಟು ಫಲಿತಾಂಶ ಲಭಿಸಿದ್ದು, ಸುಧಾರಣೆಯೊಂದಿಗೆ ತುಸು ಸಮಾಧಾನವನ್ನೂ ತಂದಿದೆ.

    ಜಿಲ್ಲೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಿಂದ ಒಟ್ಟು 13,348 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 9,734 ಮಂದಿ ತೇರ್ಗಡೆಯಾಗಿದ್ದಾರೆ.

    ಶೇಕಡವಾರು ವಿಜ್ಞಾನ ವಿಭಾಗ ಪ್ರಥಮ: ವಿಜ್ಞಾನ ವಿಭಾಗದಲ್ಲಿ ಶೇ 81.88 ಫಲಿತಾಂಶ ಲಭ್ಯವಾಗಿದ್ದು, ಪರೀಕ್ಷೆ ಎದುರಿಸಿದ 5,921 ವಿದ್ಯಾರ್ಥಿಗಳ ಪೈಕಿ 4,848 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ವಿಭಾಗದವರು ಜಿಲ್ಲೆಗೆ ಪ್ರಥಮ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ಶೇ 75.07 ಫಲಿತಾಂಶ ಲಭಿಸಿದ್ದು, ಪರೀಕ್ಷೆ ಬರೆದ 3,437 ವಿದ್ಯಾರ್ಥಿಗಳ ಪೈಕಿ 2,580 ಮಂದಿ ಉತ್ತೀರ್ಣರಾಗಿದ್ದು, ದ್ವಿತೀಯ ಸ್ಥಾನದಲ್ಲಿದೆ.

    ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 3,990 ವಿದ್ಯಾರ್ಥಿಗಳ ಪೈಕಿ 2,306 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ 57.79 ಫಲಿತಾಂಶದೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.

    ಕನ್ನಡ ಮಾಧ್ಯಮಕ್ಕೆ ಶೇ 59.56 ಫಲಿತಾಂಶ ಬಂದಿದ್ದು, 7,241 ವಿದ್ಯಾರ್ಥಿಗಳ ಪೈಕಿ 4,313 ಮಂದಿ ಪಾಸಾಗಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ಶೇ 79.74 ಫಲಿತಾಂಶ ಲಭಿಸಿದ್ದು, 7,457 ವಿದ್ಯಾರ್ಥಿಗಳ ಪೈಕಿ 5,946 ಮಂದಿ ತೇರ್ಗಡೆ ಹೊಂದಿದ್ದಾರೆ.

    ಬಾಲಕಿಯರೇ ಮೇಲುಗೈ: ಪರೀಕ್ಷೆ ಎದುರಿಸಿದ 8,258 ವಿದ್ಯಾರ್ಥಿನಿಯರಲ್ಲಿ 6,114 ಮಂದಿ ಪಾಸಾಗಿದ್ದು, ಶೇ 74.04 ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದಾರೆ. ಇನ್ನೂ 6,440 ವಿದ್ಯಾರ್ಥಿಗಳ ಪೈಕಿ 4,145 ಮಂದಿ ಪಾಸಾಗಿದ್ದು, ಶೇ 64.36 ಫಲಿತಾಂಶ ಲಭಿಸಿದೆ.

    ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ: ಜಿಲ್ಲೆಯ ಗ್ರಾಮೀಣ ಭಾಗದ 4,590 ವಿದ್ಯಾರ್ಥಿಗಳ ಪೈಕಿ 3,448 ಮಂದಿ ತೇರ್ಗಡೆಯಾಗಿದ್ದು, ಶೇ 75.12 ಫಲಿತಾಂಶ ಬಂದಿದೆ. ನಗರ, ಪಟ್ಟಣ ಭಾಗದ 8,758 ವಿದ್ಯಾರ್ಥಿಗಳ ಪೈಕಿ 6,286 ಉತ್ತೀರ್ಣರಾಗಿದ್ದು, ಶೇ 71.77 ರಷ್ಟು ಫಲಿತಾಂಶ ಪಡೆದಿದ್ದಾರೆ.

    ಅಲ್ಲದೆ, ಪರೀಕ್ಷೆಗೆ ಹಾಜರಾದ 965 ಪುನಾರವರ್ತಿತ ವಿದ್ಯಾರ್ಥಿಗಳ ಪೈಕಿ 402, 385 ಖಾಸಗಿ ವಿದ್ಯಾರ್ಥಿಗಳ ಪೈಕಿ 123 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts