More

    ಮೂಲ ಬಿಜೆಪಿಗರಿಗೆ ಒಲಿದೀತೆ ಪಟ್ಟ?

    ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೂರನೇ ಅವಧಿಯ ಚುನಾವಣೆ ಪ್ರಕ್ರಿಯೆ ಜುಲೈ 9ರಂದು ನಿಗದಿಯಾಗಿದೆ.

    20 ತಿಂಗಳಂತೆ ಈಗಾಗಲೇ ಎರಡು ಅವಧಿ ಪೂರೈಸಿರುವ ಸದಸ್ಯರು ಈಗ ಮೂರನೇ 20 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಚುನಾಯಿಸಬೇಕಿದೆ. ಎಪಿಎಂಸಿ ಸಭಾಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಶಶಿಧರ ಮಾಡ್ಯಾಳ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

    ಈ ಮೊದಲು ಕಾಂಗ್ರೆಸ್, ನಂತರದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಮಧ್ಯೆ ಏರ್ಪಟ್ಟ ಆಂತರಿಕ ಒಪ್ಪಂದದಂತೆ 10 ತಿಂಗಳಿಗೊಬ್ಬರಂತೆ ಅಧಿಕಾರ ಹಂಚಿಕೆ ಮಾಡಿಕೊಂಡು ನಾಲ್ಕು ಅವಧಿಗೆ ಮೂವರು ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ.

    ಮೊದಲ 10 ತಿಂಗಳಿಗೆ ಅಮರಗೋಳದ ಈಶ್ವರ ಕಿತ್ತೂರ, ನೂಲ್ವಿಯ ಜಗನ್ನಾಥಗೌಡ ಸಿದ್ದನಗೌಡ್ರ (20 ತಿಂಗಳು) ಇದೀಗ ಉಣಕಲ್ಲದ ರಾಮಚಂದ್ರ ಜಾಧವ ಅಧ್ಯಕ್ಷರಾಗಿದ್ದಾರೆ. ಈಗ ಮತ್ತೆ ನಿಯಮದಂತೆ 20 ತಿಂಗಳ ಅವಧಿಗೆ ಚುನಾವಣೆ ನಡೆದರೂ ಸದಸ್ಯರ ಒಳ ಒಪ್ಪಂದದಂತೆ 10 ತಿಂಗಳಿಗೆ ಅಧಿಕಾರ ಸೀಮಿತಗೊಳ್ಳುವ ಸಾಧ್ಯತೆ ಇದೆ.

    ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷದ ಬೆಂಬಲಿತರು ಎಪಿಎಂಸಿ ಅಧ್ಯಕ್ಷಗಿರಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತ ಬಂದಿದ್ದಾರೆ. ಪ್ರಸ್ತುತ ಅಧ್ಯಕ್ಷ ರಾಮಚಂದ್ರ ಜಾಧವ ಬಿಜೆಪಿ ಬೆಂಬಲಿತರು. ಈ ಹಿಂದೆ ಇದ್ದವರು ಕಾಂಗ್ರೆಸ್ ಬೆಂಬಲಿತರಾಗಿದ್ದರು.

    ಒಟ್ಟು 14 ಸದಸ್ಯ ಬಲದ ಎಪಿಎಂಸಿಗೆ ಮೂವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಲಿದೆ. ಅದರಂತೆ ಒಟ್ಟು 17 ಜನ ಸದಸ್ಯರ ಪೈಕಿ 9 ಜನರ ಬೆಂಬಲ ಸಿಕ್ಕವರು ಅಧ್ಯಕ್ಷರಾಗಲಿದ್ದಾರೆ. ಸದ್ಯ ಬಿಜೆಪಿಯ 7 ಜನರು, ನಾಮ ನಿರ್ದೇಶನವಾಗುವ ಮೂವರು ಸೇರಿದರೆ ಬಿಜೆಪಿ ಬೆಂಬಲಿತರ ಆಯ್ಕೆ ಸುಲಭವಾಗಲಿದೆ.

    ಮೂಲ ಬಿಜೆಪಿ

    ಈ ಎಲ್ಲ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತರು ಅವಕಾಶ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ, ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಸದಸ್ಯರಿಗೆ ಬೆಂಬಲ ನೀಡಿದ್ದ ಪಕ್ಷೇತರರಾಗಿ ಗುರುತಿಸಿಕೊಂಡವರು ತಮಗೂ ಒಂದು ಅವಕಾಶ ನೀಡುವಂತೆ ಬಿಜೆಪಿ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

    ಮೂಲ ಬಿಜೆಪಿಗರಾದ ಗೋಕುಲದ ಬಸವರಾಜ ನಾಯ್ಕರ ಅವರ ಹೆಸರು ಸದ್ಯ ಮುಂಚೂಣಿಯಲ್ಲಿದೆ. ಇನ್ನೂ ಕೆಲವರು ತಮ್ಮ ತಮ್ಮ ಮಟ್ಟದಲ್ಲಿ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ. ಅಧ್ಯಕ್ಷಗಿರಿ ಬಿಜೆಪಿಯವರಿಗೆ ನೀಡಿ, ಉಪಾಧ್ಯಕ್ಷ ಸ್ಥಾನವನ್ನು ಬೆಂಬಲ ನೀಡುವ ಪಕ್ಷೇತರರಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts