More

    ಮುಸಲಧಾರೆಗೆ ನಲುಗಿದ ಉತ್ತರ ಕನ್ನಡ

    ಕಾರವಾರ: ಬೆಳಗಾವಿ, ಧಾರವಾಡ ಜಿಲ್ಲೆಗಳು ಹಾಗೂ ಉತ್ತರ ಕನ್ನಡದ ಘಟ್ಟದ ಮೇಲಿನ ಪ್ರದೇಶಗಳಲ್ಲಿಗುರುವಾರ ಹಾಗೂ ಶುಕ್ರವಾರ ಸುರಿದ ಭಾರಿ ಮಳೆಗೆ ಕರಾವಳಿ ತತ್ತರಗೊಂಡಿದೆ. ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸಾವಿನ ದವಡೆಗೆ ಸಿಲುಕಿದ್ದ 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. 7 ಸಾವಿರಕ್ಕೂ ಅಧಿಕ ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಸರೆ ನೀಡಲಾಗಿದೆ.

    ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು ತನ್ನ ಸಾಮಾನ್ಯ ಹರಿವಿನ ವ್ಯಾಪ್ತಿಯನ್ನು ಕಿಮೀಗಟ್ಟಲೇ ವಿಸ್ತರಿಸಿಕೊಂಡಿವೆ. ಎಲ್ಲ ತಗ್ಗು ಪ್ರದೇಶಗಳೂ ನೀರಿನಿಂದ ತುಂಬಿ ಹೋಗಿದ್ದು, ಗದ್ದೆಗಳು, ಮನೆಗಳು, ಎಲ್ಲ ಜಲಾವೃತವಾಗಿವೆ. ಎಲ್ಲಿ ನೋಡಿದರೂ ಕೆಂಬಣ್ಣದ ನೀರೇ ಕಾಣಿಸತೊಡಗಿದೆ. ಜನ ಉಟ್ಟ ಬಟ್ಟೆಯಲ್ಲಿ ಜೀವ ಉಳಿಸಿಕೊಳ್ಳಲು ದೋಣಿ, ಹಿಡಿದು ಕಾಳಜಿ ಕೇಂದ್ರಗಳತ್ತ ಧಾವಿಸಿದ್ದಾರೆ. ಅತ್ತ ಹಲವು ಮನೆಗಳ ಕೋಳಿನವರೆಗೂ ನೀರು ತುಂಬಿದ್ದರೆ, ಇನ್ನು ಕೆಲ ಮನೆಗಳು ನೋಡ ನೋಡುತ್ತಿದ್ದಂತೆ ಉದುರಿ ಬಿದ್ದವು. ಮನೆಗಳು ಉದುರಿ ಬೀಳುವ, ವಾಹನ ಕೊಚ್ಚಿ ಹೋಗುವ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಮತ್ತಷ್ಟು ಆತಂಕಗೊಂಡಿದ್ದಾರೆ.

    ಶುಕ್ರವಾರ ಬೆಳಗಿನಿಂದಲೇ ಕಂದಾಯ ಇಲಾಖೆ ಪೊಲೀಸ್ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳಿಂದ ನೇಮಕವಾದ ನೋಡಲ್ ಅಧಿಕಾರಿಗಳು ಜನರ ರಕ್ಷಣೆಗೆ ಶ್ರಮ ವಹಿಸುತ್ತಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಕೋಸ್ಟ್ ಗಾರ್ಡ್, ನೌಕಾನೆಲೆ, ಎಸ್​ಡಿಆರ್​ಎಫ್ ತಂಡಗಳು ಕಾರ್ಯಾಚರಣೆಗಿಳಿದವು. ಶುಕ್ರವಾರ ರಾತ್ರಿ ಹೊತ್ತಿಗೆ ಮಂಗಳೂರಿನ ಎನ್​ಡಿಆರ್​ಎಫ್ ತಂಡ ಆಗಮಿಸುತ್ತಿದೆ. ಬೆಳಗಾವಿಯಿಂದ ಸೇನಾ ತುಕಡಿಯೊಂದನ್ನು ಕರೆಸುವ ಬಗೆಗೂ ಮಾತುಕತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಮಾಹಿತಿ ನೀಡಿದ್ದಾರೆ.

    ತುಂಬಿ ಹರಿದ ಹಳ್ಳ-ಕೊಳ್ಳ

    ಜೊಯಿಡಾ: ಭಾರಿ ಮಳೆಯಿಂದಾಗಿ ತಾಲೂಕಿನ ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತಾಲೂಕಿನಾದ್ಯಂತ ನಾಟಿ ಮಾಡಿದ ಮತ್ತು ಉಳುಮೆ ಮಾಡಿ ನಾಟಿ ಮಾಡಲು ಸಿದ್ಧವಾಗಿಟ್ಟುಕೊಂಡಿದ್ದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.

    ಕ್ಯಾಸಲರಾಕ್​ನಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, 25ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಜೊಯಿಡಾದಿಂದ ನಾಗೋಡಾ ಹೋಗುವ ರಸ್ತೆಯಲ್ಲಿ ನಾಗೋಡಾ ಹಳೇ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಹೊಸ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಇಲ್ಲಿ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಹೊಸದಾಗಿ ನಿರ್ವಿುಸುತ್ತಿರುವ ಚಾಂದೇವಾಡಿ ಸೇತುವೆ ಪೂರ್ಣಗೊಳ್ಳದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಾತ್ಕಾಲಿಕ ರಸ್ತೆಯೂ ಮುಳುಗಡೆಯಾಗಿದೆ. ನಾಗೋಡಾ ಗ್ರಾಪಂ ಅಧ್ಯಕ್ಷ ಸಂತೋಷ ರೇಡ್ಕರ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡರು. ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಕಾನೇರಿಯಲ್ಲಿ ನರಸಿಂಹ ಭಟ್ಟ ಅವರ ತೋಟ ಮತ್ತು ಮನೆ ಮುಳುಗಿದೆ. ಕೊಟ್ಟಿಗೆಯಲ್ಲಿದ್ದ ದನ ಕರುಗಳು ನಾಪತ್ತೆಯಾಗಿದೆ. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ ಸುಮನಾ ಹರಿಜನ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts