More

    ಮುಕ್ತಿಧಾಮ ಎದುರು ವಾರದಲ್ಲಿ ಮೂರು ಅಪಘಾತ

    ಯಲ್ಲಾಪುರ: ಎರಡು ಪ್ರತ್ಯೇಕ ಅಪಘಾತಗಳಲ್ಲಿ ಸಕ್ಕರೆ ಹಾಗೂ ಹಣ್ಣು ತುಂಬಿದ ಲಾರಿಗಳು ಪಲ್ಟಿಯಾದ ಘಟನೆ ತಾಲೂಕಿನಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

    ಕಿರವತ್ತಿ ಸಮೀಪದ ಹೊಸಳ್ಳಿ ಬಳಿ ಹುಬ್ಬಳ್ಳಿ ಕಡೆಯಿಂದ ಕೇರಳದ ಕಡೆಗೆ ಹೊರಟಿದ್ದ ಹಣ್ಣು ತುಂಬಿದ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ದಾಳಿಂಬೆ, ದ್ರಾಕ್ಷಿ ಹಣ್ಣುಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವಿಷಯ ತಿಳಿಯುತ್ತಿದ್ದಂತೆ ಘಟನೆಯ ಸ್ಥಳದಲ್ಲಿ ನೂರಾರು ಸಾರ್ವಜನಿಕರು ಜಮಾಯಿಸಿ, ಹಣ್ಣುಗಳನ್ನು ಟ್ರೇ ಸಹಿತ ಹೊತ್ತೊಯ್ಯತೊಡಗಿದರು. ಸಿಪಿಐ ಡಾ. ಮಂಜುನಾಥ ನಾಯಕ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಹಣ್ಣುಗಳನ್ನು ಪ್ಯಾಕ್ ಮಾಡಿಸಿ ಹೊತ್ತೊಯ್ಯುವುದನ್ನು ತಡೆದರು.

    ಲಾರಿ ಸಂಪೂರ್ಣ ಜಖಂಗೊಂಡಿದ್ದು, ಚಾಲಕ-ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

    ಹುಬ್ಬಳ್ಳಿ ಕಡೆಯಿಂದ ಕೇರಳ ಕಡೆಗೆ ಸಕ್ಕರೆ ತುಂಬಿಕೊಂಡು ಹೊರಟ ಲಾರಿ ಮುಕ್ತಿಧಾಮದ ಎದುರು ಪಲ್ಟಿಯಾಗಿದೆ. ಇದರಿಂದ ಸಕ್ಕರೆ ಚೀಲಗಳೆಲ್ಲ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

    ವಾರದಲ್ಲಿ ಮೂರನೇ ಅಪಘಾತ: ಕಳೆದ ಒಂದು ವಾರದಲ್ಲಿ ಮುಕ್ತಿಧಾಮದ ಎದುರು ಸತತ ಮೂರನೇ ಅಪಘಾತ ಇದಾಗಿದೆ. ಕಳೆದ ವಾರ ಕಾರು ಹಳ್ಳಕ್ಕೆ ಬಿದ್ದು, ಪ್ರಯಾಣಿಕರು ಗಾಯಗೊಂಡಿದ್ದರು. ಕಳೆದ ಶನಿವಾರ ಹಣ್ಣು ತುಂಬಿದ ಲಾರಿ ಪಲ್ಟಿಯಾಗಿ ಹಣ್ಣುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಈ ಸಂದರ್ಭದಲ್ಲೂ ಜನರು ಮುಗಿಬಿದ್ದು, ಹಣ್ಣನ್ನು ಒಯ್ದಿದ್ದರು. ಈ ಘಟನೆ ಮಾಸುವ ಮುನ್ನವೇ ಸಕ್ಕರೆ ಲಾರಿ ಬಿದ್ದಿದ್ದು, ಈ ಪ್ರದೇಶ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts