More

    ಮುಂದುವರಿದ ಕಾಡಾನೆಗಳ ದಾಂಧಲೆ

    ಬೇಲೂರು: ತಾಲೂಕಿನಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು, ಕೋಗಿಲಮನೆ ಸಮೀಪದ ಕೊತ್ತನಹಳ್ಳಿ ಗ್ರಾಮದಲ್ಲಿ ನಾಲ್ಕು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಜೋಳ ಹಾಗೂ ಶುಂಠಿ ಸೇರಿದಂತೆ ಇತರ ಬೆಳೆಗಳನ್ನು ಮಂಗಳವಾರ ಹಾಗೂ ಬುಧವಾರ ಕಾಡಾನೆಗಳು ನಾಶ ಮಾಡಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

    ಕಳೆದ ಕೆಲ ತಿಂಗಳಿಂದ ತಾಲೂಕಿನ ಮಲೆನಾಡು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನಿಂದಾಗಿ ಕಾಫಿ ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ತೋಟ, ಹೊಲ ಗದ್ದೆಗಳಿಗೆ ತೆರಳಲು ಪರದಾಡುವಂತಾಗಿದೆ. ಕಳೆದ ಮೂರು ದಿನಗಳಿಂದ ತಾಲೂಕಿನ ಬಿಕ್ಕೋಡು ಹೋಬಳಿಯ ಕೋಗಿಲಮನೆ ಸಮೀಪದ ಕೊತ್ತನಹಳ್ಳಿ ಗ್ರಾಮದ ಜೋಳದ ಹೊಲ ಮತ್ತು ಅಕ್ಕಪಕ್ಕದ ತೋಟದಲ್ಲಿ ಬೀಡು ಬಿಟ್ಟಿದ್ದ 22ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕೊತ್ತನಹಳ್ಳಿ ಗ್ರಾಮದ ಸಂತೋಷ್ ಹಾಗೂ ಪುನೀತ್ ಎಂಬುವರ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಶುಂಠಿ ಮತ್ತು ಜೋಳವನ್ನೆಲ್ಲ ತಿಂದಿದ್ದಲ್ಲದೆ, ತುಳಿದು ನಾಶ ಪಡಿಸಿವೆ.
    ಜತೆಗೆ ಅಕ್ಕಪಕ್ಕದಲ್ಲಿನ ಗಿಡಗಳನ್ನು ಕಿತ್ತು ಹಾಕಿವೆ. ಶುಂಠಿ ಬೆಳೆಗೆ ನೀರುಣಿಸಲು ಅಳವಡಿಸಿದ್ದ ಸ್ಪಿಂಕ್ಲರ್ ಪೈಪ್‌ಗಳನ್ನೆಲ್ಲ ತುಳಿದು ಪುಡಿ ಮಾಡಿವೆ. ಇದರಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ದಿನದಿಂದ ದಿನಕ್ಕೆ ಮಲೆನಾಡು ಭಾಗದ ಅರೇಹಳ್ಳಿ-ಬಿಕ್ಕೋಡು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಪ್ರತಿನಿತ್ಯ ಒಂದಲ್ಲ ಒಂದು ಗ್ರಾಮದಲ್ಲಿ ಪ್ರತ್ಯಕ್ಷವಾಗುತ್ತಿರುವುದು ರೈತರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts