More

    ಮಾ.31ರೊಳಗೆ ತೆರಿಗೆ ಪಾವತಿಸಿ

    ಗದಗ: ಜಿಲ್ಲೆಯಲ್ಲಿ ಪವನ ವಿದ್ಯುತ್ ಘಟಕ ಕಂಪನಿಯವರು ಮಾ.31ರೊಳಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸಬೇಕು ಎಂದು ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದರು.

    ನಗರದ ಜಿಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಅವರು ಮಾತನಾಡಿದರು. ಪವನ ವಿದ್ಯುತ್ ಕಂಪನಿಗಳು ಇಲ್ಲಿವರೆಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ನಯಾಪೈಸೆ ತೆರಿಗೆ ಕಟ್ಟಿಲ್ಲ. ಹೀಗಾಗಿ ಮಾ. 31ರೊಳಗೆ ಎಲ್ಲ ಘಟಕಗಳು ತೆರಿಗೆ ಪಾವತಿಸುವುದು ಕಡ್ಡಾಯ. ಉದಾಸೀನ ತೋರುವ ಘಟಕಗಳ ವಿರುದ್ಧ ಕಾನೂನು ಪ್ರಕಾರ ನೋಟಿಸ್ ಜಾರಿಗೊಳಿಸಿ ಅವರ ವಿರುದ್ಧ ಪ್ರಕರಣ ದಾಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸೇವೆಯಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಸುಜಲಾನ್ ಕಂಪನಿಯ ಭದ್ರತಾ ಸಿಬ್ಬಂದಿ ಮುಂಡರಗಿಯಲ್ಲಿ ಕಳೆದ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜಿಪಂ ಸದಸ್ಯ ಈರಪ್ಪ ನಾಡಗೌಡ್ರ ಒತ್ತಾಯಿಸಿದರು.

    ಭದ್ರತಾ ಸಿಬ್ಬಂದಿ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಿಂದ ಆಗಮಿಸಿದ್ದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮುಂಡರಗಿಗೆ ತೆರಳಿ ಸಮಸ್ಯೆ ಆಲಿಸಲಾಗಿದೆ. ಅಲ್ಲದೆ, ಕಂಪನಿ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಕಾರ್ವಿುಕ ಇಲಾಖೆ ಅಧಿಕಾರಿ ಸಭೆಗೆ ವಿವರಿಸಿದರು.

    ಅಧಿಕಾರಿ ತರಾಟೆಗೆ: ಜಿಪಂ ಸಾಮಾನ್ಯಸಭೆಗೆ ಕೈ ಬೀಸಿಕೊಂಡು ಬರಬಾರದು, ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಕಳೆದ ಸಭೆಯಲ್ಲಿ ಎಲ್ಲ ಅಧಿಕಾರಿಗಳಿಗೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆದರೂ ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿದ್ದಾರೆ ಎಂದು ಕೆಲ ಜಿಪಂ ಸದಸ್ಯರು ಆರೋಪಿಸಿದರು.

    ತೋಟಗಾರಿಕೆ ಇಲಾಖೆಯಲ್ಲಿ ಏಜೆಂಟರ ಹಾವಳಿ ಮಿತಿಮೀರಿದೆ. ರೋಣ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ತೋಟಗಾರಿಕೆ ಕಚೇರಿಯಲ್ಲಿಯೇ ಏಜೆಂಟರು ಠಿಕಾಣಿ ಹೂಡಿರುತ್ತಾರೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಿಪಂ ಅಧ್ಯಕ್ಷ , ತೋಟಗಾರಿಕೆ ಕಚೇರಿಯಲ್ಲಿ ಏಜೆಂಟರ ಹಾವಳಿ ಇರುವುದು ನಿಜ. ಇದು ನನ್ನ ಗಮನಕ್ಕೂ ಬಂದಿದೆ. ಏಜೆಂಟರ ಹಾವಳಿ ತಪ್ಪಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗೆ ಜಿಪಂ ಅಧ್ಯಕ್ಷ ಎಚ್ಚರಿಕೆ ನೀಡಿದರು. ಈ ಕುರಿತು ಜಿಪಂ ಸಿಇಒ ಅವರು ಗಮನ ಹರಿಸಬೇಕೆಂದು ತಾಕೀತು ಮಾಡಿದರು.

    ಸಭೆಯಲ್ಲಿ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಜಿಪಂ ಸಿಇಒ ಡಾ. ಆನಂದ ಉಪಸ್ಥಿತರಿದ್ದರು. ಸದಸ್ಯರಾದ ವಾಸಣ್ಣ ಕುರಡಗಿ, ರೇಖಾ ಅಳವಂಡಿ, ರಾಜುಗೌಡ ಕೆಂಚನಗೌಡ, ಮಂಜುಳಾ ಹುಲ್ಲಣ್ಣವರ, ಹನುಮಂತಪ್ಪ ಪೂಜಾರ, ಶಕುಂತಲಾ ಚವ್ಹಾಣ, ರೂಪಾ ಅಂಗಡಿ ಮತ್ತಿತರರು ಇದ್ದರು.

    ಶಿಸ್ತು ಕ್ರಮ ಜರುಗಿಸಲು ಪಟ್ಟು: ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಪಶು ಸಂಗೋಪನೆ ಇಲಾಖೆಗೆ ಆಗಿರುವ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸದ ಜಿಲ್ಲಾ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕರ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಅಲ್ಲದೆ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಸದಸ್ಯರು ಪಟ್ಟು ಹಿಡಿದರು.

    ಜಿಲ್ಲೆಯಲ್ಲಿ ನೆರೆ ಸಂಭವಿಸಿ ಆರು ತಿಂಗಳು ಕಳೆಯಿತು. ನೆರೆಯಿಂದ ಸಾಕಷ್ಟು ಹಾನಿಯಾಗಿದ್ದು ವಿವಿಧ ಇಲಾಖೆಗಳು ತಮ್ಮ ವರದಿ ಸಲ್ಲಿಸಿವೆ. ಅದಕ್ಕೆ ಸರ್ಕಾರದಿಂದ ಹಣವೂ ಬಂದಿತು. ಆದರೆ, ಪಶು ಇಲಾಖೆ ಮಾತ್ರ ವರದಿ ಸಲಿಸಿಲ್ಲ. ವರದಿ ಸಿದ್ಧಪಡಿಸುವುದಿರಲಿ, ಹಾನಿ ಕುರಿತು ಅವರ ಬಳಿ ಮಾಹಿತಿ ಇಲ್ಲ ಎಂದು ಜಿಪಂ ಸದಸ್ಯರಾದ ಪಡಿಯಪ್ಪ ಪೂಜಾರ, ಶಿವಕುಮಾರ ನೀಲಗುಂದ ಆರೋಪಿಸಿದರು. ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವುದು ಸೂಕ್ತ ಎಂದು ಸದಸ್ಯ ಎಸ್.ಪಿ. ಬಳಿಗಾರ ಮನವಿ ಮಾಡಿದರು. ಸ್ಪಂದಿಸಿದ ಸಿದ್ಧಲಿಂಗೇಶ್ವರ ಪಾಟೀಲ, ಕೂಡಲೆ ನೆರೆ ಹಾವಳಿ ಕುರಿತು ಸಭೆಗೆ ವರದಿ ನೀಡದಿದ್ದರೆ ಕ್ರಮ ಜರುಗಿಸಲಾಗುವುದು. ಮಾಹಿತಿ ನೀಡುವವರೆಗೂ ತಮ್ಮೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿ ಮುಂದಿನ ವಿಷಯ ಚರ್ಚೆಗೆ ಕೈಗೆತ್ತಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts