More

    ಮಾಸ್ಕ್ ಧರಿಸದಿದ್ದರೆ ಸಿಗದು ಮದಿರೆ


    ಹಳಿಯಾಳ: ಸರ್ಕಾರದ ನಿಯಮಾವಳಿಯಂತೆ ಸೋಮವಾರದಿಂದ ಮದ್ಯ ಮಾರಾಟ ಮಾಡಲು ಪಟ್ಟಣದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ.

    ಮದ್ಯ ಮಾರಾಟ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮಿನಿ ವಿಧಾನ ಸೌದದಲ್ಲಿ ತಾಲೂಕಾಡಳಿತವು ಮದ್ಯ ಮಾರಾಟಗಾರರ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದೆ. ಅಬಕಾರಿ ಇಲಾಖೆ ಎಸ್​ಐ ಮಂಜುಕುಮಾರ ನಾಯ್ಕ ನೇತೃತ್ವದ ತಂಡ ಪಟ್ಟಣಕ್ಕೆ ಆಗಮಿಸಿ ಎಲ್ಲ ಸಿಎಲ್-2 ಮತ್ತು 11 ಲೈಸೆನ್ಸ್ ಪಡೆದ ಶಾಪ್​ಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದೆ.

    ಪಟ್ಟಣದಲ್ಲಿ ಸಿಎಲ್-11 ಲೈಸೆನ್ಸ್ ಪಡೆದಿರುವ ಎಂಎಸ್​ಐಎಲ್ ಮಳಿಗೆ 1 ಹಾಗೂ ಸಿಎಲ್ ಲೈಸೆನ್ಸ್ ಹೊಂದಿರುವ 6 ವೈನ್​ಶಾಪ್​ಗಳಿವೆ. ಗ್ರಾಮಾಂತರ ಭಾಗ ಮುರ್ಕವಾಡದಲ್ಲಿ 1 ವೈನ್​ಶಾಪ್ ಇದೆ.

    ಬಂದೋಬಸ್ತ್: ಜನಜಂಗುಳಿ ತಡೆಯಲು ಹಾಗೂ ನಿಯಮಾವಳಿಯಂತೆ ಐದು ಜನರಿಗೆ ಸರದಿಯಲ್ಲಿ ಮದ್ಯ ಮಾರಾಟ ಮಾಡಲು ಅನುಕೂಲವಾಗುವಂತೆ ಮದ್ಯದಂಗಡಿಗಳ ಮುಂದೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಗ್ರಾಹಕರು ಸಾಮಾಜಿಕ ಅಂತರ ಕಾಪಾಡಲು ಚೌಕಾಕಾರದ ಗುರುತು ಮಾಡಲಾಗಿದೆ. ಕೇವಲ ಪಾರ್ಸಲ್​ಗೆ ಅವಕಾಶವಿದ್ದು, ವೈನ್​ಶಾಪ್​ಗಳಲ್ಲಿ ಕುಡಿಯಲು ನಿರ್ಬಂಧ ವಿಧಿಸಿರುವುದರಿಂದ ಜನ ಸಾರ್ವಜನಿಕ ಸ್ಥಳಗಳನ್ನು ಬಳಸುವ ಸಾಧ್ಯತೆಗಳಿವೆ. ತಾಲೂಕು ಕ್ರೀಡಾಂಗಣ, ಮರಡಿ ಗುಡ್ಡ ಹಾಗೂ ಕಿಲ್ಲಾ ಕೋಟೆಯ ನಿಸರ್ಗ ಉದ್ಯಾನಗಳು, ಪುರಸಭೆಯ ವಲ್ಲಭಬಾಯಿ ಉದ್ಯಾನ, ಕುಸ್ತಿ ಅಖಾಡಾ, ಎಪಿಎಂಸಿ ಪ್ರಾಂಗಣ, ಗುತ್ತಿಗೆರೆ ಕೆರೆ ಮೊದಲಾದವುಗಳು ಡ್ರಿಂಕ್ಸ್ ಸ್ಪಾಟ್​ಗಳಾಗಿದ್ದು ಈ ಸ್ಥಳಗಳಲ್ಲಿ ತಾಲೂಕಾಡಳಿತ ಬಿಗಿ ಬಂದೋಬಸ್ತ್ ಮಾಡಿದೆ.

    ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದವರಿಗೆ ಮದ್ಯ ಮಾರಾಟ ಮಾಡಬಾರದು. ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ಪರವಾನಗಿ ರದ್ದುಗೊಳಿಸುತ್ತೇವೆ.
    | ಮಂಜುಕುಮಾರ ನಾಯ್ಕ ಅಬಕಾರಿ ಇಲಾಖೆ ಎಸ್​ಐ

    ಅಂಗಡಿಗಳ ಮುಂದೆ ಮಾರ್ಕ್
    ಮುಂಡಗೋಡ:
    ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪಟ್ಟಣದ ವೈನ್​ಶಾಪ್ ಮಾಲೀಕರು ಅಂಗಡಿಗಳ ಮುಂದೆ ಮಾರ್ಕ್ ಮಾಡಿದ್ದಾರೆ. ತಾಲೂಕಿನಲ್ಲಿ ಒಟ್ಟು 5 ಮದ್ಯದ ಅಂಗಡಿಗಳಿವೆ. ಪಟ್ಟಣದಲ್ಲಿರುವ 3 ಮದ್ಯದ ಅಂಗಡಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದೆ. ಜನಸಂದಣಿ ಜಾಸ್ತಿ ಆಗುವ ಸಾಧ್ಯತೆ ಇರುವುದರಿಂದ ಮದ್ಯದಂಗಡಿಯ ಮಾಲೀಕರು ಈಗಾಗಲೇ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 9ರಿಂದ ಸಾಯಂಕಾಲ 7 ಗಂಟೆಯವರೆಗೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಮಾ. 24ರಿಂದ ಮದ್ಯದಂಗಡಿಗಳು ಬಂದ್ ಆಗಿದ್ದವು. ದೀರ್ಘ ಸಮಯದ ನಂತರ ಮತ್ತೆ ಮದ್ಯದಂಗಡಿಗಳ ಬಾಗಿಲು ತೆರೆಯುತ್ತಿರುವುದರಿಂದ ಮದ್ಯ ಪ್ರಿಯರಿಗೆ ಸಂತಸ ಉಂಟು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts