More

    ಮಾರ್ಕೆಪುನವ್ ಜಾತ್ರೆ ಸಂಪನ್ನ

    ಕಾರವಾರ: ಜನ ಸಂದಣಿಯ ಮಧ್ಯೆ ‘ಅಯ್ಯಯ್ಯಯ್ಯೋ’ ಎಂಬ ಕೂಗು ಕೇಳಿಸಿತು. ಅಲ್ಲಿ ಗಂಡು ಮಕ್ಕಳು, ಯುವಕರ ಹೊಟ್ಟೆಗೆ ಸೂಜಿಯಿಂದ ಚುಚ್ಚಿ ದಾರ ಪೋಣಿಸಲಾಗುತ್ತಿತ್ತು. ಇದು ಯಾವುದೋ ಆಸ್ಪತ್ರೆಯ ಸುದ್ದಿಯಲ್ಲ. ಜಾತ್ರೆಯ ಸುದ್ದಿ.

    ಹಲವು ವಿಶಿಷ್ಟ ಆಚರಣೆಗಳಿರುವ ಮಾಜಾಳಿಯ ‘ಮಾರ್ಕೆಪುನವ್’ ಎಂಬ ಜಾತ್ರೆ ಭಾನುವಾರ ವಿಜೃಂಭಣೆಯಿಂದ ಜರುಗಿತು. ಕಾರವಾರ, ಗೋವಾ, ಮಹಾರಾಷ್ಟ್ರಗಳ ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸಿ, ಹರಕೆ ಒಪ್ಪಿಸಿ ಪುನೀತರಾದರು.

    ಈ ಭಾಗದಲ್ಲಿರುವ ಕೊಂಕಣ ಮರಾಠಾ, ಕೋಮಾರಪಂಥ ಸಮುದಾಯದ ಜನ ಈ ಜಾತ್ರೆಗೆ ನಡೆದುಕೊಳ್ಳುತ್ತಾರೆ. ಗಂಡು ಮಕ್ಕಳ ಮದುವೆಗೂ ಮುಂಚೆ ಹೊಟ್ಟೆಗೆ ಸೂಜಿ ಚುಚ್ಚಿ ಹರಕೆ ಒಪ್ಪಿಸುವ ಪದ್ಧತಿ ರೂಢಿಯಲ್ಲಿದೆ. ಹೆಣ್ಣು ಮಕ್ಕಳು ಮದುವೆಗೂ ಮುಂಚೆ ಮತ್ತು ಬೇರೆ ಊರಿನಿಂದ ಮದುವೆಯಾಗಿ ಬಂದ ಸೊಸೆಯಂದಿರು ತಲೆಯ ಮೇಲೆ ಹಣತೆಯ ದೀಪ ಹೊತ್ತು ಸಾಗಿ ಹರಕೆ ಒಪ್ಪಿಸುತ್ತಾರೆ.

    ದಾಡ ದೇವಸ್ಥಾನದ ಎದುರು ಭಕ್ತಾದಿಗಳು ಕಲ್ಲಿಗೆ ಕಾಯಿ ಒಡೆದ ನಂತರ ಜಾತ್ರೆಯ ವಿಧಿ, ವಿಧಾನಗಳು ಪ್ರಾರಂಭವಾಗುತ್ತವೆ. ಹರಕೆ ಒಪ್ಪಿಸಲು ಅಬ್ಬಲ್ಲಿಗೆ ಮಾಲೆಯನ್ನು ತಲೆಗೆ ಕಟ್ಟಿ ಸಿದ್ಧವಾಗಿ ನಿಂತ ಗಂಡು ಮಕ್ಕಳ ಹೊಟ್ಟೆಗೆ ಪೂಜಾರಿ ಸೂಜಿಯಿಂದ ಚುಚ್ಚಿ ದಾರ ಪೋಣಿಸುತ್ತಾನೆ. ಮಕ್ಕಳು ‘ಅಯ್ಯಯ್ಯಯ್ಯೋ’ ಎಂದು ಕೂಗುತ್ತ ಸುಮಾರು ಎರಡು ಕಿಮೀ ದೂರದ ದೇವತಿ ದೇವಸ್ಥಾನದವರೆಗೆ ಬರಿಗಾಲಲ್ಲಿ ನಡೆದು ಸಾಗಿ ಅಲ್ಲಿ ಸೂಜಿ ದಾರವನ್ನು ದೇವತಿ ದೇವರ ಎದುರು ಅರ್ಪಿಸುತ್ತಾರೆ.

    ಸ್ಥಳೀಯ ಭಾಷೆಯಲ್ಲಿ ‘ದೀವಜ್’ ಎಂದು ಕರೆಯುವ ಐದು ಎಸಳುಗಳ ದೀಪವನ್ನು ಮಹಿಳೆಯರು ತಲೆಯ ಮೇಲೆ ಹೊತ್ತು ದಾಡ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ಬರಿಗಾಲಲ್ಲಿ ಸಾಗುತ್ತಾರೆ.

    ಈ ಹರಕೆ ಪ್ರಕ್ರಿಯೆ ಪೂರ್ಣವಾಗುತ್ತಿದ್ದಂತೆ ಆಲೆಮನೆಯ ಗಾಣದ ಸ್ವರೂಪದಲ್ಲಿರುವ ಅಬ್ಬಲ್ಲಿಗೆ ಮಾಲೆ ಸುತ್ತಿ ಸಿದ್ಧ ಮಾಡಿದ ಎರಡು ಬಂಡಿಗಳನ್ನು ದಾಡ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ಭಕ್ತರು ‘ಅಯ್ಯಯ್ಯಯ್ಯೋ…ಯೋ ಬಾಂಡಿ ಯೋ’ ಎಂದು ಕೂಗುತ್ತ ಎಳೆದುಕೊಂಡು ಸಾಗಿ ದೇವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿಗೆ ಜಾತ್ರೆಯ ವಿಧಿಗಳು ಮುಕ್ತಾಯವಾಗುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts