More

    ಮಾದಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರ

    ಹನೂರು: ಹೊಸ ವರ್ಷದ ಪ್ರಯುಕ್ತ ತಾಲೂಕಿನ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಗೆ ಬುಧವಾರ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ನೂತನ ಸಂವತ್ಸರದ ಹಿನ್ನೆಲೆ ದೇಗುಲವನ್ನು ತಳಿರು ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಸ್ವಾಮಿಗೆ ಬೆಳಗಿನ ಜಾವ 3.30ರಿಂದ 6 ಗಂಟೆಯವರೆಗೆ ಬಿಲ್ವಾರ್ಚನೆ, ವಿವಿಧ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಮಹಾ ಮಂಗಳಾರತಿ ಬೆಳಗಿಸಲಾಯಿತು.

    ತಮಿಳುನಾಡು ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಅಂತರಗಂಗೆಯ ಬಳಿ ಪುಣ್ಯಸ್ನಾನ ಮಾಡಿ ಸ್ವಾಮಿಗೆ ಧೂಪಹಾಕಿ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಕೆಲವರು 300 ರೂ. ಟಿಕೆಟ್ ಪಡೆದು ವಿಶೇಷ ಕೌಂಟರ್ ಮೂಲಕ ತೆರಳಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಆವರಣದಲ್ಲಿ ಜರುಗಿದ ರುದ್ರಾಕ್ಷಿ ವಾಹನ, ಹುಲಿವಾಹನ ಹಾಗೂ ಬಸವ ವಾಹನವನ್ನು ಎಳೆಸಿ ಪ್ರದಕ್ಷಿಣೆ ಹಾಕುವುದರ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು.

    ಈ ವೇಳೆ ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೋಷಣೆಗಳು ಭಕ್ತರಿಂದ ಮೊಳಗಿದವು. ಇನ್ನು ಹರಕೆ ಹೊತ್ತ ಭಕ್ತರು ಮುಡಿಸೇವೆ ನೀಡಿದರಲ್ಲದೇ ಪಂಜಿನ ಸೇವೆ ಹಾಗೂ ರಜಾ ಹೊಡೆಯುವ (ದೇಗುಲದ ಸುತ್ತ ಸ್ವಚ್ಛಗೊಳಿಸುವುದು) ಸೇವೆಯನ್ನು ನೆರವೇರಿಸಿದರು.

    ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ತಮಿಳುನಾಡು, ಚಾಮರಾಜನಗರ, ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಮದ್ದೂರು, ಹಲಗೂರು, ಮಳವಳ್ಳಿ ಇನ್ನಿತರ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಳೆದ ಮೂರು ದಿನಗಳ ಹಿಂದೆಯೇ ಕಾಲ್ನಡಿಗೆ ಹಾಗೂ ವಾಹನಗಳ ಮೂಲಕ ಆಗಮಿಸಿ ಅಲ್ಲಿಯೇ ಬೀಡು ಬಿಟ್ಟಿದ್ದರು. ಇದರಲ್ಲಿ ಕೆಲವರು ನಾಗಮಲೆಗೂ ಬುಧವಾರ ಬೆಳಗ್ಗೆ ಪೂಜೆ ಸಲ್ಲಿಸಿ ಹೊಗೆನೆಕಲ್ ಫಾಲ್ಸ್‌ಗೂ ತೆರಳಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು. ಈ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ವತಿಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

    ಬಸ್ಸಿಗಾಗಿ ಪರದಾಟ:
    ತಮ್ಮ ಗ್ರಾಮಗಳಿಗೆ ಹಿಂದಿರುಗುವ ವೇಳೆ ಸಮರ್ಪಕ ಬಸ್ ಸೌಕರ್ಯ ಇಲ್ಲದ ಪರಿಣಾಮ ಭಕ್ತರು ಮ.ಬೆಟ್ಟದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ಭಕ್ತರು ನೂಕುನುಗ್ಗಲಿನಲ್ಲಿ ನಿಂತುಕೊಂಡೆ ಪ್ರಯಾಣ ಬೆಳೆಸಿದರೆ ಬಹುತೇಕ ಭಕ್ತರು ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ನಿಲ್ಲಬೇಕಾಯಿತು.

    ಟ್ರಾಫಿಕ್ ಜಾಮ್:
    ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ವಾಹನಗಳ ಮೂಲಕ ಕೊಳ್ಳೇಗಾಲ ಮಾರ್ಗದ ಮೂಲಕ ತೆರಳಿದರು. ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿತ್ತು. ಇದರಿಂದ ಈ ಮಾರ್ಗದ ಮಧುವನಹಳ್ಳಿ, ಕಾಮಗೆರೆ, ಹನೂರು, ಕೌದಳ್ಳಿ ಹಾಗೂ ತಾಳುಬೆಟ್ಟದ ತಿರುವುಗಳಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ನಿರ್ಮಾಣವಾಗುತ್ತಿತ್ತು. ಆಯಾ ಭಾಗದಲ್ಲಿ ನಿಯೋಜಿಸಲ್ಪಟ್ಟ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಸುಗಮ ಸಂಚಾರಕ್ಕೆ ಹರಸಹಾಸ ಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts