More

    ಮತದಾರರಿಗೆ ಕಾಂಗ್ರೆಸ್ಸಿನಿಂದ ಆಮಿಷ: ಅನಿಲ ಮೆಣಸಿನಕಾಯಿ

    ವಿಜಯವಾಣಿ ಸುದ್ದಿಜಾಲ ಗದಗ
    ಹಾವೇರಿ-ಗದಗ ಲೋಕಸಭೆ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಗೆಲುವು ನಿಶ್ಚಿತ ಎನ್ನುವ ವಾತಾವರಣವಿದೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಕೊಟ್ಟು ಮತದಾರರಿಗೆ ಆಮಿಷ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪಿಸಿದರು.
    ಶುಕ್ರವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸಚಿವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಮತದಾರರಿಗೆ ಗ್ಯಾರಂಟಿ ಕಾರ್ಡ್ ಗಳನ್ನು ಕೊಟ್ಟು, ಅವರಿಂದ ಆಧಾರ್ ಕಾರ್ಡ್ , ರೇಷನ್ ಕಾರ್ಡ್ ಪಡೆಯುವ ಮೂಲಕ ವೈಯಕ್ತಿಕ ಮಾಹಿತಿ ಸಂಗ್ರಹಣೆ ಮತ್ತು ಆಮಿಷ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
    ಗ್ಯಾರಂಟಿ ಕಾರ್ಡ್ ನೀಡುವುದು ಮತದಾರರಿಗೆ ಆಮಿಷ ನೀಡಿದಂತೆ ಎಂದು ಚುನಾವಣೆ ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಆದರೂ ಕಾಂಗ್ರೆಸ್ ಕಾರ್ಯಕರ್ತರು ಕಾರ್ಡ್ ಹಂಚಿಕೆಯಲ್ಲಿ ತೊಡಗಿದ್ದಾರೆ. ಇಂಥವರ ವಿರುದ್ಧ ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೆಣಸಿನಕಾಯಿ ಒತ್ತಾಯಿಸಿದರು.
    ಅಭಿವೃದ್ಧಿ ವಿರೋಧಿ:
    ಕಾಂಗ್ರೆಸ್ ಪ್ರಣಾಳಿಕೆಯನ್ನು ಗಮನಿಸಿದರೆ ಅಭಿವೃದ್ಧಿಗೆ ಯಾವುದೇ ಆದ್ಯತೆ ನೀಡದಿರುವುದು ಸ್ಪಷ್ಟವಾಗಿದೆ. ಬಿಜೆಪಿ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು, ತಮ್ಮ ಪ್ರಣಾಳಿಕೆಯನ್ನು ಉದ್ಯೋಗ ಸೃಷ್ಟಿಗೆ ಯಾಕೆ ಆದ್ಯತೆ ಕೊಟ್ಟಿಲ್ಲ. ಯುವಕರಿಗೆ 1 ಲಕ್ಷ ರೂಪಾಯಿ ಕೊಡುವ ಭರವಸೆ ನೀಡಿದ್ದಾರೆ ಹೊರತು ಉದ್ಯೋಗ ಕೊಡುವ ಭರವಸೆ ನೀಡಿಲ್ಲ. ದೇಶದ ಬಜೆಟ್ 45 ಲಕ್ಷ ಕೋಟಿ ರೂಪಾಯಿ ಇದ್ದರೂ 100 ಲಕ್ಷ ಕೋಟಿ ರೂಪಾಯಿಗಳ ಗ್ಯಾರಂಟಿ ಕಾರ್ಯಕ್ರಮ ಘೋಷಣೆ ಮಾಡಿದ್ದಾರೆ. ಆ ಹಣ ಎಲ್ಲಿಂದ ತರುತ್ತಾರೆ? ಇದೇ ರೀತಿ ಉಚಿತ ಯೋಜನೆಗಳನ್ನು ಕೊಡುತ್ತಾ ಹೋದರೆ ದೇಶ ದಿವಾಳಿಯಾಗಲಿದೆ ಎಂದರು.
    ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಮೊದಲು ರಾಜ್ಯದ ರೈತರ ಸಾಲ ಮನ್ನಾ ಮಾಡಿ ಜನರ ವಿಶ್ವಾಸ ಗಳಿಸಿ ಮತ ಕೇಳಲಿ ಎಂದು ಸವಾಲು ಹಾಕಿದರು.
    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ಸಂಗಮೇಶ ದುಂದೂರ, ಮಂಜಣ್ಣ ಮುತ್ತಿನಪೆಂಡಿಮಠ, ಮುತ್ತಣ್ಣ ಗದಗಿನ, ವಸಂತ ಪಡಗದ, ಪರಮೇಶ ನಾಯಕ, ರವಿಕಾಂತ ಅಂಗಡಿ, ಆನಂದ ಸೇಠ, ಪ್ರಫುಲ್ ಪುಣೇಕರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts