More

    ಮಹಾ ಸರ್ಕಾರ ಕನ್ನಡಿಗರ ತಾಳ್ಮೆ ಪರೀಕ್ಷಿಸಬಾರದು – ಸಿದ್ದರಾಮಯ್ಯ

    ಬೆಳಗಾವಿ: ಕನ್ನಡಿಗರ ಸ್ವಾಭಿಮಾನ, ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿರುವುದು ಸರಿಯಲ್ಲ. ಕನ್ನಡಿಗರು ಶಾಂತವಾಗಿದ್ದಾರೆ ಎಂದರೆ ಅಶಕ್ತರು ಎಂದರ್ಥವಲ್ಲ. ನೆಲ, ಜಲ, ಭಾಷೆ ಉಳಿಸಲು ಎಂತಹ ತ್ಯಾಗಕ್ಕೂ ಕನ್ನಡಿಗರು ಸಿದ್ಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದಿಂಚೂ ಜಾಗ ಬಿಟ್ಟು ಕೊಡಲ್ಲ. ಭಾಷೆ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ.

    ಒಂದು ರಾಜ್ಯ ಮತ್ತೊಂದು ರಾಜ್ಯದಲ್ಲಿ ಹಸ್ತಕ್ಷೇಪ ಮಾಡುವುದು ಅಸಾಂವಿಧಾನಿಕ. ಜತ್ತ ತಾಲೂಕಿನ ಕೆಲ ಹಳ್ಳಿಗಳು ಕರ್ನಾಟಕಕ್ಕೆ ಸೇರುವ ಬಗ್ಗೆ ಧ್ವನಿ ಎತ್ತುತ್ತಿವೆ. ಹಾಗಂತ ನಾವು ಅಲ್ಲಿನ ಜನರಿಗೆ ಕಾರ್ಯಕ್ರಮ ರೂಪಿಸಲು ಬರುವುದಿಲ್ಲ ಎಂದು ತಿಳಿಸಿದರು. ಮಹಾರಾಷ್ಟ್ರ ಸರ್ಕಾರ ಅನಗತ್ಯವಾಗಿ ಮೇಲಿಂದ ಮೇಲೆ ಕಾಲು ಕೆರೆದು ಜಗಳ ಮಾಡುತ್ತಿದೆ. ಇದೊಂದು ಷಡ್ಯಂತ್ರ. ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನ, ಗೌರವ ಕೆದಕುವ ಕೆಲಸ ಮಾಡುತ್ತಿದ್ದಾರೆ. ಭಾಷೆಗಳ ಆಧಾರದ ಮೇಲೆ ರಾಜ್ಯಗಳು ನಿರ್ಮಾಣ ಆಗಿವೆ. ಮಹಾಜನ್ ವರದಿಯನ್ನೇ ನಾವು ಅಂತಿಮ ಎಂದಿದ್ದೇವೆ. ಅಲ್ಲದೇ ಆಯೋಗ ಮಾಡುವಂತೆ ಹೇಳಿ ಈಗ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಅಧಿಕಾರಕ್ಕಾಗಿ ರಾಜ್ಯ ಬಿಜೆಪಿ ನಮ್ಮ ರಾಜ್ಯದ ಸ್ವಾಭಿಮಾನ ಅಡವಿಟ್ಟಿದೆ. ಯಾರು ಬೇಕಾದರೂ ಬಂದು ಅಧಿಕಾರ ನಡೆಸಲು ಬಿಟ್ಟಿದ್ದೀರಿ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ತಕ್ಷಣ ರಾಜ್ಯಪಾಲರು ಮಧ್ಯಪ್ರವೇಶಿಸಿ ಬೊಮ್ಮಾಯಿ ಸರ್ಕಾರವನ್ನು ವಜಾ ಮಾಡಬೇಕು. ಅದೇ ರೀತಿ 356ರ ಕಲಂ ಪ್ರಕಾರ ಮಹಾರಾಷ್ಟ್ರ ಸರ್ಕಾರವನ್ನೂ ವಜಾ ಮಾಡಬೇಕು ಎಂದು ಡಿಕೆಶಿ ಆಗ್ರಹಿಸಿದರು.

    ಎಐಸಿಸಿ ಕಾರ್ಯದರ್ಶಿ ವಿಷ್ಣುನಾಗ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ಕೆ.ಎಚ್.ಮುನಿಯಪ್ಪ, ಐ.ಜಿ.ಸನದಿ, ಉಮಾಶ್ರೀ, ಪ್ರಕಾಶ ರಾಠೋಡ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts