More

    ಮಹಾರಾಷ್ಟ್ರ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹ, ಕರವೇ ಪ್ರತಿಭಟನೆ

    ದಾವಣಗೆರೆ: ಗಡಿ ವಿವಾದ ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರು ಮತ್ತು ಕರ್ನಾಟಕದ ಆಸ್ತಿಗಳ ಮೇಲೆ ದಾಳಿ ನಡೆಸುತ್ತಿರುವ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಕ್ಷಣಾ (ಟಿ.ಎ.ನಾರಾಯಣಗೌಡರ ಬಣ) ವೇದಿಕೆ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಪಾಲಿಕೆ ಆವರಣದಿಂದ ಮೆರವಣಿಗೆ ಹೊರಟು ಉಪವಿಭಾಗಾಧಿಕಾರಿ ಕಚೇರಿ ಎದುರು ಮಹಾರಾಷ್ಟ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
    ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ, ದಶಕದಿಂದಲೂ ತಗಾದೆ ತೆಗೆಯುತ್ತ ಗಡಿಯಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣವಾಗಿದೆ. ಬೆಳಗಾವಿ ಕರ್ನಾಟಕದ್ದೆಂದು ಮೆಹರ್‌ಚಂದ್ ಮಹಾಜನ್ ಆಯೋಗ ತೀರ್ಪು ನೀಡಿದ್ದರೂ ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ರಾಜಕಾರಣಿಗಳು ಕನ್ನಡಿಗರು-ಮರಾಠಿಗರ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಸುತ್ತಿದ್ದಾರೆ.
    ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಹಣಕಾಸಿನ ಬೆಂಬಲ ನೀಡಿ ಗಡಿಭಾಗದಲ್ಲಿ ದಾಂಧಲೆ ನಡೆಸಲು ಕಾರಣರಾಗಿದ್ದಾರೆ. ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಕನ್ನಡಿಗರು ಮತ್ತು ಅವರ ಆಸ್ತಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಮಹಾರಾಷ್ಟ್ರದ ಬಹುತೇಕ ರಾಜಕೀಯ ಪಕ್ಷಗಳೂ ಕನ್ನಡಿಗರ ವಿರುದ್ಧದ ದಾಳಿಗಳಿಗೆ ಪ್ರಚೋದನೆ ನೀಡುತ್ತಿವೆ. ಶಿವಸೇನೆಯ ಎರಡೂ ಬಣಗಳು ಮತ್ತು ಎನ್‌ಸಿಪಿ, ಎಂಎನ್‌ಎಸ್ ಪಕ್ಷಗಳು ಈ ಕುಕೃತ್ಯಗಳಲ್ಲಿ ನೇರವಾಗಿ ಶಾಮೀಲಾಗಿವೆ ಎಂದು ಆರೋಪಿಸಿದರು.
    ಹೀಗಾಗಿ ಅಲ್ಲಿನ ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಬೇಕು. ತತ್‌ಕ್ಷಣ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಿ, ಅದರ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೇತೃತ್ವದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಪದಾಧಿಕಾರಿಗಳಾದ ಮಂಜುಳಾ ಮಹಾಂತೇಶ್, ಸಾಕಮ್ಮ, ನಾಗಮ್ಮ, ಎನ್.ಟಿ.ಹನುಮಂತಪ್ಪ, ಜಿ.ಎಸ್.ಸಂತೋಷ್, ಗೋಪಾಲ್ ದೇವರಮನೆ. ಡಿ.ಮಲ್ಲಿಕಾರ್ಜುನ್, ಎಂ.ಡಿ.ರಫೀಕ್, ಆರ್.ರವಿಕುಮಾರ್, ಜಬೀವುಲ್ಲಾ, ಅನ್ವರ್, ಲೋಕೇಶ್, ರಾಜೇಶ್, ಮುಗ್ದುಂ, ರುದ್ರಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts