More

    ಮಹಾರಾಜ ಟ್ರೋಫಿಗೆ ಕಲಬುರಗಿ ತಂಡ?

    ಕೃಷ್ಣ ಕುಲಕರ್ಣಿ ಕಲಬುರಗಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಹೊಸ ಅವತರಣಿಕೆಯಾದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಟೂರ್ನಿಯಲ್ಲಿ ಕಲಬುರಗಿ ತಂಡವೊಂದು ಸ್ಪರ್ಧಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶನಿವಾರ ವೈರಲ್ ಆಗಿರುವ ಪೋಟೋಗಳು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ಹೌದು. ರಾಜ್ಯದ ಪ್ರತಿಷ್ಠಿತ ಟೂರ್ನಿಗಳಲ್ಲಿ ಕೆಪಿಎಎಲ್ ಒಂದಾಗಿದೆ. ಐಪಿಎಲ್ ಮಾದರಿ ನಡೆಯುವ ಈ ಟೂರ್ನಿ ಅಸಂಖ್ಯ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಿದೆ. 2009ರಿಂದ ಶುರುವಾದ ಈ ಟೂರ್ನಿ ಇದುವರೆಗೆ 8 ಸೀಸನ್ ಮುಗಿದಿದೆ. ವಿನ್ನರ್ಗೆ 10 ಕೋಟಿ ರೂ. ಹಾಗೂ ರನ್ನರ್ ಅಪ್​ಗೆ 5 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ರಾಯಚೂರು ವಲಯದ ತಂಡವಿಲ್ಲ ಎಂಬ ಕೊರತೆ ಕಾಡುತ್ತಿತ್ತು. ಆದರೀಗ ಮೆಗಾ ಸ್ಪೀಡ್ ಬ್ರಾಡ್ಬ್ಯಾಂಡ್ (ಎಂಎಸ್ಬಿ) ಸನ್ ಸಿಟಿ ಜನತೆಗೆ ಶುಭ ಸುದ್ದಿ ನೀಡಿದೆ.


    ಮಹಾರಾಜ ಟ್ರೋಫಿ ಟಿ-20 ಟೂರ್ನಿಯಲ್ಲಿ ಕಲಬುರಗಿ ಟೀಮ್ ಪಾಲ್ಗೊಳ್ಳುವುದು ಪಕ್ಕಾ ಆಗಿದ್ದು, ಹೊಸ ತಂಡಕ್ಕೆ ಎಂಎಸ್ಬಿ ಪ್ರಾಯೋಜಕತ್ವ ವಹಿಸಿದೆ. ಆದರೆ ತಂಡದ ಹೆಸರು, ಯಾರೆಲ್ಲ ಇರಲಿದ್ದಾರೆ? ಟೀಮ್ ಮ್ಯಾನೇಜ್ಮೆಂಟ್ ಇತರ ಮಾಹಿತಿ ಹೊರಬರಬೇಕಿದೆ. ಕೆಎಸ್ಸಿಎ ಜತೆಗೆ ಮಾತುಕತೆ ನಡೆದಿದ್ದು, ಶೀಘ್ರವೇ ಅಧಿಕೃತ ಘೋಷಣೆ ಆಗಲಿದೆ.

    ಕೋವಿಡ್​ನಿಂದಾಗಿ ಎರಡು ವರ್ಷ ಕೆಎಸ್ಸಿಎ ಯಾವುದೇ ಟೂರ್ನಿ ನಡೆದಿರಲಿಲ್ಲ. 2019ರ ಬಳಿಕ ಕೆಪಿಎಲ್ ಸಹ ಮಂಕಾಗಿತ್ತು. ಹೀಗಾಗಿ ಈ ಬಾರಿ ಕೆಎಸ್ಸಿಎ ಮಾಜಿ ಅಧ್ಯಕ್ಷರಾಗಿದ್ದ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಎಂಬ ಟೂರ್ನಿ ಆಯೋಜಿಸುವ ಮೂಲಕ, ಜನರಲ್ಲಿ ಮತ್ತೆ ಕ್ರಿಕೆಟ್ ಕಿಚ್ಚು ಹೆಚ್ಚಿಸಲು ಕೆಎಸ್ಸಿಎ ಮುಂದಾಗಿದೆ.

    ಬೆಂಗಳೂರು ಹಾಗೂ ಮೈಸೂರಿನಲ್ಲಿ ಆ.7ರಿಂದ 26ರವರೆಗೆ ಪಂದ್ಯಗಳನ್ನು ನಡೆಸಲು ನಿರ್ಧರಿಸಿದ್ದು, ಯಾವೆಲ್ಲ ತಂಡಗಳು ಭಾಗವಹಿಸಲಿವೆ? ಆಟಗಾರರು ಯಾರ್ಯಾರು? ಟೂರ್ನಿ ಸ್ವರೂಪ ಹೇಗಿರಲಿದೆ? ಬಹುಮಾನದ ಮೊತ್ತ ಹೀಗೆ ಇತರ ಮಾಹಿತಿ ಒಂದೆರಡು ವಾರದಲ್ಲಿ ಕೆಎಸ್ಸಿಎ ತಿಳಿಸಲಿದೆ ಎಂದು ಮೂಲಗಳು ತಿಳಿಸಿವೆ.

    ಆರು ತಂಡಗಳು ಭಾಗಿ
    ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಟೂರ್ನಿ ಕೆಪಿಎಲ್ ಮಾದರಿಯಂತೆ ನಡೆಯಲಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ರಾಯಚೂರು ವಲಯದ ತಂಟಗಳು ಪಾಲ್ಗೊಳ್ಳಲಿವೆ. ರಾಜ್ಯದಲ್ಲಿ ಆಟಗಾರರನ್ನು ಡ್ರಾಫ್ಟ್ ಮಾದರಿಯಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗುವುದು.

    ಕೋಚ್, ಸೆಲೆಕ್ಷನ್ ಕಮಿಟಿ ರಚನೆ
    ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಪಣತೊಟ್ಟಿರುವ ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ಟುವರ್ಟ್​ ಬಿನ್ನಿ, ನಜಿರುದ್ದೀನ್, ಮನ್ಸೂರ್ ಅಲಿ ಖಾನ್, ನಿಖಿಲ್ ಹಳದೀಪುರ, ದೀಪಕ್ ಚೌಗುಲೆ, ಪಿವಿ ಶಶಿಕಾಂತ ಅವರನ್ನು ಮುಖ್ಯ ಕೋಚ್ಗಳಾಗಿ ನೇಮಕ ಮಾಡಲಾಗಿದೆ. ಆನಂದ ಕಟ್ಟಿ, ಎ.ಆರ್. ಮಹೇಶ, ಎಂ.ಬಿ. ಪ್ರಶಾಂತ, ಸಂತೋಷ ಒಡೆಯರಾಜ್ ಮತ್ತು ರಘೂತ್ತಮ ನವಲಿ ಸೆಲೆಕ್ಷನ್ ಕಮಿಟಿಯಲ್ಲಿದ್ದಾರೆ.

    ಕರೊನಾದಿಂದ ಎರಡು ವರ್ಷ ವ್ಯರ್ಥವಾಗಿದೆ. ಇದರಿಂದ ಕೆಎಸ್ಸಿಎಗೆ ಸಾಕಷ್ಟು ಹಿನ್ನಡೆ ಆಗಿದ್ದು, ಇದೀಗ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಲು ಸಿದ್ಧರಾಗಿದ್ದೇವೆ. ಸಣ್ಣ-ಪುಟ್ಟ ಪಟ್ಟಣಗಳಲ್ಲಿರುವ ಅರ್ಹ ಪ್ರತಿಭೆಗಳನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಟೂರ್ನಿ ಆಯೋಜಿಸಿದ್ದು, ಇದು ಕ್ರಿಕೆಟ್ ಲೋಕಕ್ಕೆ ಮಾದರಿಯಾಗಲಿದೆ ಎಂಬ ವಿಶ್ವಾಸವಿದೆ.
    | ರೋಜರ್ ಬಿನ್ನಿ
    ಕೆಎಸ್ಸಿಎ ಅಧ್ಯಕ್ಷ (ಶನಿವಾರ ಮಾಧ್ಯಮಗಳಲ್ಲಿ ಹೇಳಿದ್ದು)

    ಮೀಟಿಂಗ್ ಪೋಟೋ ವೈರಲ್
    ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 ಟೂರ್ನಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶನಿವಾರ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಕರೆದಿದ್ದ ಮಹತ್ವದ ಸಭೆಯಲ್ಲಿ ಕಲಬುರಗಿಯ ಎಂಎಸ್ಬಿ (ಮೆಗಾ ಸ್ಪೀಡ್ ಬ್ರಾಡ್ ಬ್ಯಾಂಡ್) ಸಂಸ್ಥೆ ಎಂಡಿ ಸೈಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಪಾಲ್ಗೊಂಡಿರುವ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಈ ವೇಳೆ ಕಲಬುರಗಿ ತಂಡ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿದ್ದು, ಕೆಎಸ್ಸಿಎ ಪ್ರಮುಖರಿಂದಲೂ ಒಪ್ಪಿಗೆ ಸಿಕ್ಕಿದೆ ಎನ್ನಲಾಗುತ್ತಿದೆ. ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts