More

    ಮಸೀದಿಗಳಿಗೂ ‘ಗೌರವ’ಧನ!

    ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರ ಕೇವಲ ಮಠ-ಮಂದಿರಕ್ಕಷ್ಟೇ ಅಲ್ಲದೆ, ಮಸೀದಿಗಳ ಏಳಿಗೆಗೂ ಅನುದಾನ ನೀಡುತ್ತಿದೆ. ಮುಸ್ಲಿಂ ಸಮುದಾಯದ ಪ್ರಾರ್ಥನಾ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಪೇಶ್ ಇಮಾಮ್ ಹಾಗೂ ಮೌಜ್ಜಿನ್‌ಗಳಿಗೂ ಪ್ರತಿವರ್ಷ ಕೋಟ್ಯಂತರ ರೂ.ಮಾಸಾಶನ ವಿತರಿಸುತ್ತಿದೆ.

    ಮಸೀದಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕರೊನಾದ ಸಂಕಷ್ಟ ಕಾಲದಲ್ಲಿಯೂ (2020-21ರಲ್ಲಿ) 40 ಕೋಟಿ ರೂಪಾಯಿಗೂ ಅಧಿಕ ಮಾಸಾಶನ ಪಾವತಿಸಿದೆ. ಅಲ್ಲದೆ, ನೋಂದಾಯಿತ ಮಸೀದಿಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಪೇಶ್ ಇಮಾಮ್ ಮತ್ತು ಮೌಜ್ಜಿನ್‌ಗಳಿಗೂ ಶೇ. 50ರಷ್ಟು ಗೌರವಧನ ವಿತರಿಸುವ ಯೋಜನೆ ಆರಂಭಿಸಿದ್ದು, ಅದನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತಿದೆ.

    101 ಕೋಟಿ ರೂ.: ರಾಜ್ಯಾದ್ಯಂತ ಒಟ್ಟು 10,870 ಮಸೀದಿಗಳಿವೆ. ಈ ಪೈಕಿ 9,672 ಮಸೀದಿಗಳು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿವೆ. ನೋಂದಾಯಿತ ಒಟ್ಟು ಮಸೀದಿಗಳಲ್ಲಿ 7,688 ಪೇಶ್ ಇಮಾಮ್ ಹಾಗೂ 7,483 ಮೌಜ್ಜಿನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆಲ್ಲ ಸರ್ಕಾರದಿಂದ ಕಳೆದ ಎರಡು ವರ್ಷದಲ್ಲಿ 101 ಕೋಟಿ ರೂ. ಮಾಸಾಶನ ವಿತರಿಸಲಾಗಿದೆ.

    ಲಾನುಭವಿಗಳ ಸಂಖ್ಯೆ ಏರಿಕೆ: ಪ್ರತಿ ತಿಂಗಳು ಪೇಶ್ ಇಮಾಮ್‌ಗಳಿಗೆ 4,000 ರೂ., ಮೌಜ್ಜಿನ್‌ಗಳಿಗೆ 3,000 ರೂ. ಮಾಸಾಶನ ನೀಡಲಾಗುತ್ತಿದ್ದೆ. 2019-2020ನೇ ಆರ್ಥಿಕ ವರ್ಷದಲ್ಲಿ 14,250 ಜನರಿಗೆ 59.20 ಕೋಟಿ ರೂ. ವಿತರಿಸಲಾಗಿದೆ. 2020-21 ಸಾಲಿನಲ್ಲಿ ನೋಂದಾಯಿಸಲ್ಪಟ್ಟವರ ಸಂಖ್ಯೆ ಹೆಚ್ಚಿದ್ದು, ಅದು 15,171ಕ್ಕೆ ಏರಿದೆ. ಅವೆರೆಲ್ಲರಿಗೂ 2021ರ ಜನವರಿವರೆಗೆ 42.01 ಕೋಟಿ ರೂ. ಮಾಸಾಶನ ಜಮಾ ಮಾಡಲಾಗಿದೆ. ದಾಖಲೆಗಳ ಹೊಂದಾಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕೆಲವರಿಗೆ ಮಾಸಾಶನ ತಡೆಹಿಡಿಯಲಾಗಿತ್ತು. ಬಳಿಕ ತಾಂತ್ರಿಕ ದೋಷ ಸರಿಪಡಿಸಿ, ಮತ್ತೆ 850 ಜನರಿಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮಾಸಾಶನ ಜಮಾ ಮಾಡಲಾಗಿದೆ.

    ಸಂಕಷ್ಟದ ವೇಳೆ ಧನಸಹಾಯ: ಕರೊನಾ ಸಂಕಷ್ಟದಲ್ಲಿ ಆರ್ಥಿಕ ಸಹಾಯದ ಪ್ಯಾಕೇಜ್‌ನಲ್ಲಿ ಘೋಷಿಸಿದಂತೆ ಸುಮಾರು 16 ಸಾವಿರ ಪೇಶ್ ಇಮಾಮ್ ಮತ್ತು ಮೌಜಿನ್‌ನ್‌ಗಳಿಗೆ ಒಂದು ಬಾರಿ ತಲಾ 3 ಸಾವಿರ ರೂ. ಆರ್ಥಿಕ ಸಹಾಯ ದೊರೆಯಲಿದೆ. ಹೊಸದಾಗಿ ಅರ್ಜಿ ಸಲ್ಲಿಸಿರುವ 319 ಜನ ಸೇರಿದಂತೆ ಸುಮಾರು 2 ಸಾವಿರಕ್ಕೂ ಅಧಿಕ ಅರ್ಹರ ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ನಿವೃತ್ತರಿಗೂ 10.68 ಲಕ್ಷ ರೂ. ಪಾವತಿ

    ನೋಂದಾಯಿತ ಮಸೀದಿಗಳಲ್ಲಿ ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿರುವ ಹಾಗೂ 65 ವರ್ಷ ಮೇಲ್ಪಟ್ಟ ಪೇಶ್ ಇಮಾಮ್ ಹಾಗೂ ಮೌಜ್ಜಿನ್‌ಗಳಿಗೆ ಶೇ. 50ರಷ್ಟು ಅಂದರೆ ಕ್ರಮವಾಗಿ 2,000 ಮತ್ತು 1,500 ರೂ.ಗಳನ್ನು 2020ರ ಜೂನ್ ತಿಂಗಳಿನಿಂದ ಪಿಂಚಣಿ ವಿತರಿಸುವ ಯೋಜನೆ ಆರಂಭಿಸಲಾಗಿದೆ. ಆರಂಭದ 6 ತಿಂಗಳ ಅವಧಿಯಲ್ಲಿ (2020ರ ಡಿಸೆಂಬರ್‌ವರೆಗೆ) ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ತುಮಕೂರು, ರಾಮನಗರ, ಯಾದಗಿರಿ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ಮೈಸೂರು ಜಿಲ್ಲೆಯ 88 ನಿವೃತ್ತರಿಗೆ ಸೌಲಭ್ಯ ಒದಗಿಸಲಾಗುತ್ತಿದ್ದು, ಒಟ್ಟು 10.68 ಲಕ್ಷ ರೂ. ಪಿಂಚಣಿ ಅಥವಾ ಗೌರವ ಧನ ಪಾವತಿಸಲಾಗಿದೆ.

    | ರವಿ ಗೋಸಾವಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts