More

    ಮಳೆ ಹಾನಿ ಸಮೀಕ್ಷೆ ವಿಳಂಬ

    ಅಂಕೋಲಾ: ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹದಲ್ಲಿ ನೂರಾರು ಮನೆಗಳಿಗೆ ತೀವ್ರ ಹಾನಿ ಉಂಟಾಗಿ 20 ದಿನ ಕಳೆದರೂ ಸಮೀಕ್ಷೆ ಕಾರ್ಯ ಮಾತ್ರ ವೇಗ ಪಡೆದುಕೊಂಡಿಲ್ಲ. ಇದು ಪರಿಹಾರ ನಿರೀಕ್ಷೆಯಲ್ಲಿರುವ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
    ಕಳೆದ ಎರಡು ವರ್ಷಗಳಲ್ಲಿ ನೆರೆಯಿಂದ ಹಾನಿಗೊಳಗಾದವರಿಗೆ ಸರಿಯಾಗಿ ಪರಿಹಾರ ದೊರೆತಿಲ್ಲ. ಮಾತ್ರವಲ್ಲ ಪರಿಹಾರ ವಿತರಣೆಯಲ್ಲಿ ತಾರತಮ್ಯ ತೋರಲಾಗಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ.
    ಸಮೀಕ್ಷೆ ಗೊಂದಲ: ಕಳೆದ ವರ್ಷ ನೆರೆಯಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ವೇಳೆ ಅಧಿಕಾರಿಗಳು ಮಾಡಿರುವ ತಾಂತ್ರಿಕ ಲೋಪಗಳಿಂದಾಗಿ ಸಂಪೂರ್ಣ ಮನೆ ಹಾನಿಗೊಳಗಾದ ಕೆಲವರಿಗೆ ಒಂದು ರೂಪಾಯಿ ಕೂಡ ಪರಿಹಾರ ದೊರೆತಿರಲಿಲ್ಲ. ಸಮೀಕ್ಷೆ ವಿಳಂಬದಿಂದಾಗಿಯೇ ಪರಿಹಾರ ದೊರೆತಿಲ್ಲ ಎನ್ನುವ ಆರೋಪ ಮನೆ ಕಳೆದುಕೊಂಡವರದ್ದು.
    ಸ್ಥಳೀಯ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯ ಸಿಬ್ಬಂದಿ ಹಾನಿ ಸಮೀಕ್ಷೆ ಮಾಡುತ್ತಾರೆ. ನೆರೆ ಬಂದು 20 ದಿನ ಕಳೆದರೂ ಸಮೀಕ್ಷೆ ಕಾರ್ಯ ಮುಗಿಯದಿರುವುದರಿಂದ ಇನ್ನು ಯಾವಾಗ ಪರಿಹಾರ ದೊರೆಯುತ್ತದೆ ಹಾನಿಯಾಗಿರುವ ಮನೆ ರಿಪೇರಿ ಮಾಡಿಕೊಳ್ಳುವ ಬಗೆ ಹೇಗೆ ಎಂಬಿತ್ಯಾದಿ ಸಮಸ್ಯೆಗಳು ಸಂತ್ರಸ್ತರನ್ನು ಕಾಡುತ್ತಿದೆ.


    ಸಮೀಕ್ಷೆ ಕಾರ್ಯ ವಿಳಂಬವಾದರೂ ಯಾರಿಗೂ ಅನ್ಯಾಯವಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇನೆ. ಈಗಾಗಲೇ ತಾಲೂಕಿನಲ್ಲಿ ನೆರೆಯಿಂದ 2257 ಮನೆಗೆ ನೀರು ಪ್ರವೇಶಿಸಿದ್ದು, 1726 ಫಲಾನುಭವಿಗಳಿಗೆ 3800 ರೂಪಾಯಂತೆ 65,35,000 ಪರಿಹಾರ ನೀಡಲಾಗಿದೆ. 100 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅವುಗಳಲ್ಲಿ 10 ಮನೆಗಳಿಗೆ 95100 ರೂಪಾಯಂತೆ 9,51,000, ಭಾಗಶಃ 59 ಮನೆಗಳ ಫಲಾನುಭವಿಗಳ 5200 ರೂಪಾಯಂತೆ 3,06,800 ರೂಪಾಯಿ ಮತ್ತು ಜಾನುವಾರು ಮರಣ ಹೊಂದಿರುವ 13 ಫಲಾನುಭಗಳಿಗೆ 2,48,000 ರೂಪಾಯಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಇನ್ನುಳಿದ ಎಲ್ಲಾ ಫಲಾನುಭವಿಗಳಿಗೆ ಶೀಘ್ರದಲ್ಲಿ ಹಣ ವರ್ಗಾವಣೆ ಆಗಲಿದೆ.
    | ಆರ್.ವಿ. ಕಟ್ಟಿ ಪ್ರಭಾರ ತಹಸೀಲ್ದಾರ್ ಅಂಕೋಲಾ


    ಕಳೆದ ವರ್ಷ ಮನೆ ಸಂಪೂರ್ಣವಾಗಿ ನಾಶವಾದವರಿಗೂ ಒಂದು ರೂಪಾಯಿ ಪರಿಹಾರ ದೊರಕಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಎಲ್ಲೋ ಕುಳಿತು ಸಮೀಕ್ಷೆ ಕಾರ್ಯ ನಡೆಸಿ ಹಲವು ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ. ಈ ಬಾರಿಯೂ ಕೂಡ ಸಮೀಕ್ಷೆ ಕಾರ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಹೀಗಾಗಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು.
    | ದೇವರಾಯ ನಾಯಕ
    ಅಧ್ಯಕ್ಷ, ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿ, ಸಗಡಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts