More

    ಮಳೆ ಬಂದರೆ ಜನರಿಗೆ ತೊಂದರೆ

    ನರಗುಂದ: ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಿನ ಭೈರನಹಟ್ಟಿ ಗ್ರಾಮದ ಜನತಾ ಪ್ಲಾಟ್​ನ ಚರಂಡಿ ವಿವಿಧ ಸಮಸ್ಯೆಗಳನ್ನು ಸೃಷ್ಟಿಸಿದೆ.

    ಚರಂಡಿಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಕಟ್ಟಿಕೊಂಡಿದೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ಬಂದಾಗಲೊಮ್ಮೆ ಮಳೆ ನೀರಿನೊಂದಿಗೆ ಚರಂಡಿ ತ್ಯಾಜ್ಯ ಹರಿದು ಬಂದು ರಸ್ತೆಯಲ್ಲಿ ಸಂಗ್ರಹಗೊಳ್ಳುತ್ತದೆ. ಜತೆಗೆ ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

    ಗ್ರಾಮದ ಮಣ್ಣಿನ ರಸ್ತೆಗಳು ಸುಧಾರಣೆ ಕಂಡಿಲ್ಲ. ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗುವ ಕಾರಣ ಜನ-ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜನತಾಪ್ಲಾಟ್​ನಲ್ಲಿ ಅಂದಾಜು 200 ಕುಟುಂಬಗಳಿವೆ. ನಿವಾಸಿಗಳಿಗಾಗಿ ಮುಖ್ಯರಸ್ತೆಗೆ ಹೊಂದಿಕೊಂಡು ಚರಂಡಿ ಮೇಲೊಂದು ಶೌಚಗೃಹ ನಿರ್ವಿುಸಲಾಗಿದೆ. ಮಳೆ ನೀರು ಶೌಚಗೃಹ ಆವರಿಸುವುದರಿಂದ ಬಳಸಲು ಸಾಧ್ಯವಾಗುವುದಿಲ್ಲ. ಜತೆಗೆ ಶೌಚಗೃಹ ಸುತ್ತ ಗಿಡಗಂಟಿ ಬೆಳೆದಿದ್ದರಿಂದ ವಿಷ ಜಂತುಗಳ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಶೌಚಗೃಹ ಬಳಸಲು ಜನ ಹೆದರುತ್ತಾರೆ.

    ಈ ಬಗ್ಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಲ್ಲಿನ ನಿವಾಸಿಗಳು ಪಿಡಿಒ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಜನತಾಪ್ಲಾಟ್​ನಲ್ಲಿರುವ ನಾಲ್ಕೈದು ರಸ್ತೆಗಳಿಗೆ ಗ್ರಾಪಂನಿಂದ ಎರಡ್ಮೂರು ಬಾರಿ ಗರಸು ಮಣ್ಣು ಹಾಕಲು ಕ್ರಮ ಕೈಗೊಂಡಿತ್ತು. ಆದರೆ, ಗುತ್ತಿಗೆದಾರರು ತಮಗೆ ಬೇಕಾದ ಕಡೆಗಳಲ್ಲಿ ಸ್ವಲ್ಪ ಪ್ರಮಾಣದ ಮಣ್ಣು ಹಾಕಿ ಬಿಲ್ ಪಡೆದಿದ್ದಾರೆ. ಇದೀಗ ರಸ್ತೆ, ಚರಂಡಿ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

    | ಸುರೇಶಗೌಡ ಪಾಟೀಲ, ಭೈರನಹಟ್ಟಿ ನಿವಾಸಿ

    ಅನಾರೋಗ್ಯದಿಂದ ಭೈರನಹಟ್ಟಿ ಗ್ರಾಪಂ ಪ್ರಭಾರ ಪಿಡಿಒ ಎಸ್.ಡಿ. ಹಿರೇಮನಿ ಅವರು ಕಳೆದ 15 ದಿನಗಳಿಂದ ರಜೆಯಲ್ಲಿದ್ದಾರೆ. ಕೊಣ್ಣೂರು ಗ್ರಾಪಂ ಪಿಡಿಒ ಸಂಕನಗೌಡ್ರ ಅವರಿಗೆ ಭೈರನಹಟ್ಟಿ ಗ್ರಾಮಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ. ಎರಡ್ಮೂರು ದಿನದಲ್ಲಿ ರಸ್ತೆಗಳನ್ನು ತಾತ್ಕಾಲಿಕವಾಗಿ ಅಭಿವೃದ್ಧಿಪಡಿಸಲಾಗುವುದು.

    ಚಂದ್ರಶೇಖರ ಕುರ್ತಕೋಟಿ, ತಾಪಂ ಇಒ ನರಗುಂದ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts