More

    ಮಳೆಗೆ ಕೊಚ್ಚಿಹೋದ ಬೆಳೆ, ಬದುಕು

    ರಾಮದುರ್ಗ: ರಾಮದುರ್ಗ ತಾಲೂಕು ವ್ಯಾಪ್ತಿಯಲ್ಲಿ ಹರಿದುಹೋಗಿರುವ ಮಲಪ್ರಭೆ ಪ್ರತಿ ಬಾರಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವುದರಿಂದ ಈ ಭಾಗದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ದೂರದ ಖಾನಾಪುರ ಸೇರಿ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆ ಕೋಟೆನಾಡು ರಾಮದುರ್ಗ ಭಾಗದ ರೈತರಿಗೆ ವರವಾಗುವ ಬದಲು ಶಾಪವಾಗುತ್ತಿದೆ. ಪರಿಣಾಮ ಅನೇಕ ರೈತರು ಕೃಷಿ ಕಾಯಕ ತೊರೆದು ಮಹಾನಗರದತ್ತ ಮುಖ ಮಾಡುತ್ತಿದ್ದಾರೆ.

    ಮುಂಗಾರು ಮಳೆ, ಬೋರ್‌ವೆಲ್ ನಂಬಿಕೊಂಡು ಸಾಲಮಾಡಿ ರೈತರು ಕಬ್ಬು, ಬಾಳೆ, ಗೋವಿನಜೋಳ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಅನೇಕ ಬೆಳೆ ಬಿತ್ತನೆ ಮಾಡಿದ್ದರು. ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಇತ್ತೀಚೆಗೆ ಸುರಿದ ಮಳೆ, ಮಲಪ್ರಭಾ ನದಿ ಪ್ರವಾಹ ಬೇಸರ
    ಮೂಡಿಸಿದೆ. ಮಲಪ್ರಭೆ ಅಬ್ಬರಕ್ಕೆ ಬೆಳೆಗಳು ಕೊಚ್ಚಿಹೋಗಿವೆ. ಇದು ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    ಬೆಳೆಹಾನಿ ಹೆಚ್ಚಳ ಸಾಧ್ಯತೆ: ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ಒಟ್ಟು 20,213 ಹೆಕ್ಟೇರ್ ಕೃಷಿ ಭೂಮಿ ಪ್ರವಾಹ ಹಾಗೂ ಮಳೆಗೆ ಹಾನಿಯಾಗಿತ್ತು. ಈ ವರ್ಷದ ಹಾನಿ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

    ಪರಿಹಾರದಿಂದ ದೂರವಾಗದ ಸಮಸ್ಯೆ: ಬೋರ್‌ವೆಲ್ಹಾ ಗೂ ಮಳೆ ನಂಬಿ ಬಿತ್ತನೆ ಮಾಡಲು ನಾವು ಪ್ರತಿ ಎಕರೆಗೆ 50 ಸಾವಿರ ರೂ. ಖರ್ಚು ಮಾಡುತ್ತೇವೆ. ಆದರೆ, ಸರ್ಕಾರ ನಮಗೆ ಬೆಳೆ ಹಾನಿ ರೂಪದಲ್ಲಿ ನೀಡುವ ಪರಿಹಾರ ಹಾಕಿದ ಬಂಡವಾಳದ ಮೊತ್ತವನ್ನು ದಾಟುತ್ತಿಲ್ಲ. ಇದರಿಂದ ಪ್ರಯೋಜನವಾಗುವುದಿಲ್ಲ. ಅಲ್ಲದೆ, ಸರ್ಕಾರ ನೀಡಿದ ಪೂರ್ಣ ಅನುದಾನವೂ ನಮ್ಮ ಕೈ ಸೇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರಾಮದುರ್ಗ ತಾಲೂಕಿನ ರೈತರು.

    ಪರಿಹಾರ ವಿತರಣೆಯಲ್ಲೂ ತಾರತಮ್ಯ: ಕಳೆದ ಎರಡು ವರ್ಷಗಳು ನದಿ ಪಾತ್ರದ ಜನತೆಗೆ ಬೆಳೆ ಹಾನಿ ಪರಿಹಾರ ನೀಡುವಲ್ಲಿ ತಾರತಮ್ಯ ಉಂಟಾಗಿದೆ. ಅರ್ಹ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ರೈತರು ಪರಿಹಾರಕ್ಕಾಗಿ ಕಚೇರಿಗೆ ನಿತ್ಯ ಓಡಾಡುವಂತಾಗಿದೆ. ಇನ್ನಾದರೂ ಅಧಿಕಾರಿಗಳು ದುರ್ಬಲ ವ್ಯವಸ್ಥೆಯಿಂದ ಹೊರಬಂದು ರೈತರಿಗೆ ಸೌಲಭ್ಯ ತಲುಪಿಸಲು ಕ್ರಮವಹಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

    ನಮ್ಮ ತಾಲೂಕಿನಲ್ಲಿ ಮಳೆಯಾಗದಿದ್ದರೂ ಮಲಪ್ರಭೆ ಅಬ್ಬರಕ್ಕೆ ಈ ಭಾಗದ ರೈತರು ಕೃಷಿ ಕಾಯಕದಲ್ಲಿ ತೊಡಗಲು ಹಿಂದೇಟು ಹಾಕುತ್ತಿದ್ದಾರೆ. ಅನೇಕರು ಕೃಷಿ ಭೂಮಿಗಳನ್ನು ಮಾರಾಟ ಮಾಡಿ ಬೆಂಗಳೂರು, ಪುಣೆ, ಮಹಾರಾಷ್ಟ್ರ, ಗೋವಾದತ್ತ ಕುಟುಂಬ ಸಮೇತ ಮುಖಮಾಡಿದ್ದಾರೆ. ಸರ್ಕಾರದ ನೆರೆ ಪರಿಹಾರವೂ ಸಕಾಲಕ್ಕೆ ಕೈ ಸೇರದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
    | ಗೋಪಾಲ ಗಡದೆ ಅವರಾದಿ ಗ್ರಾಮದ ರೈತ.

    ನದಿ ಪಾತ್ರದಲ್ಲಿ ಹಾನಿಯಾದ ಬೆಳೆಗಳ ಕುರಿತು ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳ ಜಂಟಿ ಸಮೀಕ್ಷೆ ನಡಿಸಲಾಗುವುದು. ಜಂಟಿ ಸಮೀಕ್ಷೆ ವರದಿಯನ್ನು ಶೀಘ್ರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ರೈತರಿಗೆ ಪರಿಹಾರ ಒದಗಿಸಲಾಗುವುದು.
    | ಮಲ್ಲಿಕಾರ್ಜುನ ಹೆಗ್ಗಣ್ಣವರ ತಹಸೀಲ್ದಾರ್ ರಾಮದುರ್ಗ

    | ಡಾ.ರೇವಣಸಿದ್ದಪ್ಪ ಕುಳ್ಳೂರ, ರಾಮದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts