More

    ಮಳವಳ್ಳಿ ತಾಲೂಕಿನಲ್ಲಿ ಕೋಡಿ ಬಿದ್ದ ಕೆರೆ-ಕಟ್ಟೆಗಳು

    ಮಳವಳ್ಳಿ: ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಿರುಗಾವಲು ಹೋಬಳಿಯ ಹಲವು ಕೆರೆ-ಕಟ್ಟೆಗಳು ಕೋಡಿ ಬಿದ್ದ ಪರಿಣಾಮ ಮಳೆ ನೀರಿನ ಪ್ರವಾಹಕ್ಕೆ ರಸ್ತೆಗಳು ಕೊಚ್ಚಿ ಹೋಗುವುದರ ಜತೆಗೆ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ.

    ಕಿರುಗಾವಲು, ರಾಮಂದೂರು, ಹೆಗ್ಗೂರು, ದೊಡ್ಡಮುಲಗೂಡು, ಮಿಕ್ಕೆರೆ ಗ್ರಾಮಗಳ ಕೆರೆಗಳು ಮಳೆ ಆರ್ಭಟಕ್ಕೆ ಕೋಡಿ ಬಿದ್ದಿವೆ. ಪರಿಣಾಮ ಎಲ್ಲ ಕೆರೆಗಳಿಂದ ಏಕಕಾಲದಲ್ಲಿ ಹೊರ ಬಂದ ಮಳೆ ನೀರು ಮಾರ್ಕಾಲು ಕೆರೆ ಸೇರಿದ್ದು, ದಿಢೀರ್ ನೀರಿನ ಪ್ರವಾಹದ ಒತ್ತಡಕ್ಕೆ ಕೆರೆಯ ಕೋಡಿ ಮತ್ತು ಮತ್ತೊಂದು ಭಾಗದಲ್ಲಿ ಏರಿ ಒಡೆದಿದೆ. ಇದರಿಂದ ಸಮೀಪದ ಜಮೀನುಗಳಿಗೆ ನೀರು ನುಗ್ಗಿ ಸುಮಾರು 500 ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಭತ್ತ, ರಾಗಿ, ಕಬ್ಬು ಸೇರಿದಂತೆ ಇತರ ಬೆಳೆಗಳು ಕೊಚ್ಚಿ ಹೋಗಿವೆ.

    ಹಿಟ್ಟನಹಳ್ಳಿ ಕೊಪ್ಪಲು ಸಮೀಪದ ಮಾರಮ್ಮನ ದೇವಸ್ಥಾನದ ಬಳಿ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬಹುಪಾಲು ಕೊಚ್ಚಿ ಹೋಗಿದೆ. ಉಪ್ಪನಹಳ್ಳಿ ಬಳಿಯ ಮೈಸೂರು ಮುಖ್ಯರಸ್ತೆಯಲ್ಲಿರುವ ಸೇತುವೆ ಮೇಲೆ ನೀರು ಹರಿದು ಎರಡು ಬದಿ ರಸ್ತೆ ಕೊರೆದು ಸೇತುವೆ ಶಿಥಲಾವಸ್ಥೆ ತಲುಪಿದೆ. ಇದರಿಂದ ಮಳವಳ್ಳಿ-ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.

    ಹಂಗ್ರಾಪುರ ಸಮೀಪದ ಪೂರಿಗಾಲಿ ಮುಖ್ಯರಸ್ತೆ ಕೊಚಿಹೋಗಿದ್ದು, ಈ ಭಾಗದ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿಯೂ ನೂರಾರು ಎಕರೆಯಷ್ಟು ಬೆಳೆ ಹಾನಿಯಾಗಿದೆ. ಮಾರೇಹಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಕೆರೆ ಏರಿಗೆ ಅಪಾಯವಾಗುವುದನ್ನು ಅರಿತ ನೀರಾವರಿ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರಗಳ ಬಳಸಿ ಕೆರೆ ಕೋಡಿಯ ತಡೆಗೋಡೆಗಳನ್ನು ಒಡೆಸಿ ನೀರಿನ ಸೆಳೆತವನ್ನು ತಗ್ಗಿಸುವ ಕಾರ್ಯ ಕೈಗೊಂಡಿದ್ದರು.

    ನೆರೆ ಪ್ರದೇಶಕ್ಕೆ ಶಾಸಕ ಭೇಟಿ: ನೆರೆಹಾನಿ ಪ್ರದೇಶಗಳಿಗೆ ಶಾಸಕ ಡಾ.ಕೆ.ಅನ್ನದಾನಿ ಅವರು ತಹಸೀಲ್ದಾರ್ ಎಂ.ವಿಜಯಣ್ಣ ಜತೆಗೆ ಭೇಟಿ ನೀಡಿ ಪರಿಶೀಲಿಸಿದರು.

    ಈ ವೇಳೆ ಮಾತನಾಡಿದ ಅವರು, ಕಳೆದ ರಾತ್ರಿ ಸುರಿದ ವರುಣನ ಅಬ್ಬರಕ್ಕೆ ತಾಲೂಕಿನಲ್ಲಿ ಮಾರ್ಕಾಲು ಕರೆ ಏರಿ ಹೊಡೆದಿದೆ. ಸಾವಿರಕ್ಕೂ ಅಧಿಕ ಎಕರೆಯಲ್ಲಿ ರೈತರು ಬೆಳೆದಿದ್ದ ವಿವಿಧ ಬೆಳೆಗಳು ಹಾನಿಯಾವೆ. ಕೆಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದು, ಪ್ರವಾಹ ಪೀಡಿತ ಸ್ಥಳಗಳಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.

    ಬೆಳೆ ಹಾನಿಗೊಳಗಾದ ರೈತರಿಗೆ ತ್ವರಿತವಾಗಿ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಅವರು, ಭೀಕರ ಮಳೆಗೆ ನೂರಾರು ಕೋಟಿ ರೂ. ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮುಂದಿನ ಎರಡು ದಿನಗಳು ಮಳೆಯಾಗುವ ಸಂಭವ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಆಫ್ ತಂಡವನ್ನು ಕಳುಹಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಕೋರಲಾಗಿದೆ ಎಂದರು.

    ಜನರ ಜಮಾವಣೆ : ಉಪ್ಪನಹಳ್ಳಿ ಸಮೀಪ ಹಾಗೂ ಹಂಗ್ರಾಪುರ ಬಳಿಯ ಹಳ್ಳದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದರೂ ರಸ್ತೆಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳನ್ನು ಜನರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ಕಂಡು ಬಂತು. ಈ ವೇಳೆ ಪೊಲೀಸರು ತೆರಳಿ ಜನರನ್ನು ಚದುರಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts