More

    ಮರಳು ದಂಧೆಗಿಲ್ಲ ಲಾಕ್​ಡೌನ್!

    ವಿಜಯವಾಣಿ ಸುದ್ದಿಜಾಲ ಶಿರಸಿ: ಬರಿದಾದ ವರದಾ ನದಿಯಲ್ಲಿ ಲಾಕ್​ಡೌನ್ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಅಕ್ರಮ ಮರಳು ಮಾಫಿಯಾ ದವರು ಇಡೀ ನದಿಯೊಡಲು ಬಗೆಯುತ್ತಿದ್ದಾರೆ. ಅಂತರ್ಜಲ ಕುಸಿತಕ್ಕೆ ಕಾರಣವಾದ ಈ ದಂಧೆ ನಿರಾತಂಕವಾಗಿ ಸಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

    ತಾಲೂಕಿನ ಪೂರ್ವ ಭಾಗದ ಜೀವನಾಡಿ ವರದಾ ನದಿ ಬೇಸಿಗೆ ಆರಂಭದಲ್ಲೇ ಬತ್ತಿದೆ. ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸುವ ಈ ನದಿ ಅಗಾಧ ಪ್ರಮಾಣದ ಮರಳನ್ನು ತನ್ನೊಡಲಲ್ಲಿ ಹುದುಗಿಸಿ ಇಟ್ಟುಕೊಳ್ಳುತ್ತದೆ. ಹೀಗಾಗಿ ನದಿಯಲ್ಲಿ ನೀರು ಆರಿದಂತೆ ನದಿ ಪಾತ್ರ ಅಕ್ರಮ ಮರಳು ದಂಧೆಯ ತಾಣವಾಗಿ ಮಾರ್ಪಡುತ್ತದೆ. ಪ್ರತೀ ವರ್ಷ ನದಿಯಾಳದಿಂದ ಮರಳು ಕದಿಯುವ ಈ ಅಕ್ರಮ ದಂಧೆಕೋರರು ಈ ಬಾರಿ ಲಾಕ್​ಡೌನ್ ಸಂದರ್ಭ ಬಳಸಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಜೆಸಿಬಿ ಮೂಲಕ ನದಿ ಪಾತ್ರದಲ್ಲಿ ಮರಳನ್ನು ಸಂಗ್ರಹಿಸಿ ಬೆಳಗಾಗುತ್ತಲೇ ಟಿಪ್ಪರ್​ಗಳ ಮೂಲಕ ಗುಪ್ತ ಸ್ಥಳಗಳಿಗೆ ರವಾನಿಸಿಸುತ್ತಿದ್ದಾರೆ. ನಿತ್ಯ ಬನವಾಸಿ, ಅಜ್ಜರಣಿ, ಭಾಶಿ, ನರೂರು, ತಿಗಣಿ, ಮೊಗಳ್ಳಿ ಸೇರಿ ಇತರ ಭಾಗದಲ್ಲಿ ನೂರಾರು ಟ್ರ್ಯಾಕ್ಟರ್, ಟಿಪ್ಪರ್​ಗಳು ರಾಜಾರೋಷವಾಗಿ ಮರಳು ಸಾಗಾಟ ಮಾಡುತ್ತಿವೆ. ಮಾಫಿಯಾದವರು ಜೀವ ಬೆದರಿಕೆ ಒಡ್ಡುವ ಕಾರಣ ಊರಿನ ನದಿಯೊಡಲು ಖಾಲಿಯಾಗುತ್ತಿರುವುದನ್ನು ಗಮನಿಸಿಯೂ ಗ್ರಾಮಸ್ಥರು ಬಾಯ್ಬಿಡದಂತಾಗಿದೆ.

    ವರದಾ ತಟದ ಮರಳು ಉತ್ತಮ ಗುಣಮಟ್ಟದ ಮರಳಲ್ಲದಿದ್ದರೂ ದುಪ್ಪಟ್ಟು ದರಕ್ಕೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಗ್ರಾಮಗಳಲ್ಲಿ ಹೆಚ್ಚಾಗಿ ಬಿಕರಿಯಾಗುವ ಈ ಮರಳಿನಿಂದ ಮನೆಗಳನ್ನು ನಿರ್ವಿುಸಲಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ಮರಳು ದಾಸ್ತಾನು ಮಾಡುವ ದಂಧೆಕೋರರು ಮರಳು ಕೊರತೆಯಾದಾಗ ತಮ್ಮ ದಾಸ್ತಾನಿನಿಂದ ಅಕ್ರಮ ಮರಳನ್ನು ಗ್ರಾಹಕರಿಗೆ ನೀಡುತ್ತಾರೆ. ಪ್ರತೀ ವರ್ಷ ಈ ದಂಧೆಕೋರರು ಸಾವಿರಾರು ಲೋಡ್ ಮರಳಿನ ಜತೆ ಜಲ್ಲಿಯನ್ನು ಕೂಡ ವರದಾ ಒಡಲಿನಿಂದ ಲೂಟಿ ಮಾಡುತ್ತಿದ್ದಾರೆ.

    ಅನುಮಾನ ಮೂಡಿಸಿದ ಇಲಾಖೆಗಳ ಮೌನ: ಲಾಕ್​ಡೌನ್ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಬಿಗುವಿನ ಕ್ರಮವಹಿಸಬೇಕು. ಆದರೆ, ಬನವಾಸಿಯಲ್ಲಿ ಮಾತ್ರ ಜನಸಾಮಾನ್ಯರಿಗೆ ಒಂದು ಕಾನೂನಾದರೆ ಈ ಮರಳು ಸಾಗಿಸುವ ವಾಹನಗಳಿಗೆ ಬೇರೊಂದು ಕಾನೂನಿದ್ದಂತಿದೆ. ನಿತ್ಯ ನೂರಾರು ಟಿಪ್ಪರ್​ಗಳು ಬನವಾಸಿ ರಸ್ತೆಯಲ್ಲಿ ಸಂಚರಿಸಿದರೂ ಪೊಲೀಸರು ಇವರನ್ನು ಕೇಳುವುದಿಲ್ಲ. ಅರಣ್ಯ ಇಲಾಖೆ ಈ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿದೆ. ಪೊಲೀಸ್ ಇಲಾಖೆ ಸಿಬ್ಬಂದಿಯೊಬ್ಬ ಮರಳು ಸಾಗಾಟದ ವಾಹನಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದಲೇ ಆರೋಪ ಕೇಳಿಬರುತ್ತಿದೆ. ಅಕ್ರಮ ಮರಳು ದಂಧೆ ವಿಚಾರವಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಅಕ್ರಮ ಮರಳು ದಂಧೆ ಅಕ್ಷಮ್ಯ ಅಪರಾಧವಾಗಿದೆ. ನದಿ ಪಾತ್ರವನ್ನು ಬರಿದು ಮಾಡುವ ಈ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳ ಪರಿಶೀಲನೆ ನಡೆಸುವ ಜತೆಗೆ ಇಲಾಖೆಯಲ್ಲಿದ್ದುಕೊಂಡು ಅವರಿಗೆ ಸಹಕರಿಸುವವರಿಗೂ ಎಚ್ಚರಿಕೆ ನೀಡಲಾಗುವುದು. | ಡಾ. ಈಶ್ವರ ಉಳ್ಳಾಗಡ್ಡಿ ಉಪವಿಭಾಗಾಧಿಕಾರಿ

    ನದಿಯೊಡಲಲ್ಲಿ ಬೇಕಾಬಿಟ್ಟಿಯಾಗಿ ಮರಳು ತೆಗೆಯುವುದರಿಂದ ನದಿ ಪಾತ್ರ ಬದಲಾಗಿದೆ; ನೀರು ಸಂಗ್ರಹವಾಗುತ್ತಿಲ್ಲ. ಹೀಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಬೇಗ ಕುಸಿದಿದೆ. ಕೆರೆಗಳಲ್ಲಿ ನೀರಿಲ್ಲದಂತಾಗಿದೆ. ನಿತ್ಯ 20ಕ್ಕೂ ಹೆಚ್ಚು ಕಡೆ ಕೊಳವೆ ಬಾವಿ ಕೊರೆಯಲಾಗುತ್ತಿದ್ದರೂ ನೀರು ಲಭಿಸುತ್ತಿಲ್ಲ. ಪ್ರಸ್ತುತ ಕೊಳವೆ ಬಾವಿ ಕೊರೆಯುವ ನಾಲ್ಕಕ್ಕೂ ಹೆಚ್ಚು ಯಂತ್ರಗಳು ಬನವಾಸಿ ಹೋಬಳಿಯಲ್ಲಿ ಬೀಡುಬಿಟ್ಟಿವೆ. ಇಂತಹ ಸಂದಿಗ್ಧ್ದೆ ಎದುರಾಗಲು ಈ ಮರಳು ದಂಧೆಯೇ ನೇರವಾಗಿ ಕಾರಣವಾಗಿದೆ. | ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts