More

    ಮರಳು ಅಕ್ರಮಕ್ಕೆ ಕಡಿವಾಣ ಹಾಕಿ

    ಶಿರಹಟ್ಟಿ: ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಕಂಡುಬಂದರೆ ಟಾಸ್ಕ್​ಫೋರ್ಸ್ ಸಮಿತಿಯು ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮಿತಿ ಸದಸ್ಯರನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಗದಗ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.

    ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಉದ್ದೇಶದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮರಳು ಟಾಸ್ಕ್​ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ‘ಸರ್ಕಾರ ಹೊಸ ಮರಳು ನೀತಿ ಜಾರಿಗೊಳಿಸಿದೆ. ಆದರೆ, ಅದರ ನಿಯಮಾವಳಿ ಇನ್ನೂ ತಿಳಿಸಿಲ್ಲ. ಹೀಗಾಗಿ ಸದ್ಯ ಹಿಂದಿನ ನಿಯಮಾವಳಿಯಂತೆ ಮರಳು ಸಂಗ್ರಹ ಮತ್ತು ಸಾಗಾಣಿಕೆ ಪ್ರಕ್ರಿಯೆ ನಡೆಯುತ್ತಿದೆ. ನದಿ ಪಾತ್ರ, ಹಳ್ಳ, ಕೆರೆಗಳಲ್ಲಿ ಕಾನೂನುಬಾಹಿರವಾಗಿ ಮರಳು ತೆಗೆದು ಸಾಗಾಟ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಅಕ್ರಮ ಚಟುವಟಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗುತ್ತಿದೆ. ಈ ಬಗ್ಗೆ ನಿಗಾವಹಿಸಬೇಕು’ ಎಂದರು.

    ಅಕ್ರಮ ಮರಳು ಸಾಗಾಟ ತಡೆಯಲು ಆಯಕಟ್ಟಿನ ಸ್ಥಳಗಳಲ್ಲಿ ಚೆಕ್​ಪೋಸ್ಟ್ ನಿರ್ವಿುಸಿ ಅಲ್ಲಿ ಹೋಮ್ಾರ್ಡ್ಸ್, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದರು.

    ಗೈರಾದವರ ವಿರುದ್ಧ ಕ್ರಮ: ಅಕ್ರಮ ಮರಳುಗಾರಿಕೆ ತಡೆಯುವ ಉದ್ದೇಶದಿಂದ ಆಯೋಜಿಸಲಾದ ಸಭೆಗೆ ಕೆಲ ಪಿಡಿಒಗಳು, ಕಂದಾಯ ನಿರೀಕ್ಷಕರು ಗೈರಾಗಿದ್ದು ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಸಿ ಹುಣಸಗಿ ತಿಳಿಸಿದ್ದಾರೆ.

    ಸಭೆಯಲ್ಲಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಪಂ. ಇಒ ಡಾ. ಎಚ್.ಎಚ್. ಓಲೇಕಾರ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂ ವಿಜ್ಞಾನಿ ಸಾವಿತ್ರಿ ಬಿ.ಪಿ., ಪಿಎಸ್​ಐ ಎಸ್.ಎಂ. ನಾಯಕ, ಪಿಡಬ್ಲ್ಯುಡಿ ಎಇಇ ರಾಮಮೂರ್ತಿ, ಶಿರಹಟ್ಟಿ ವಲಯ ಅರಣ್ಯಾಧಿಕಾರಿ ಸತೀಶ ಪೂಜಾರ ಇತರರು ಉಪಸ್ಥಿತರಿದ್ದರು.

    ಮಾಹಿತಿ ನೀಡಿ: ಮರಳು ಅಕ್ರಮಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜೂನ್ 1ರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಪರವಾನಗಿ ಪಡೆದವರು ನಿಯಮಾನುಸಾರ ಮರಳು ಸಂಗ್ರಹಿಸಿ ಮಾರಾಟ ಮಾಡಬೇಕು. ಅಳತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳು ಅಗೆಯುವುದು, ಯಂತ್ರಗಳ ಮೂಲಕ ಅಕ್ರಮವಾಗಿ ಮರಳು ಸಂಗ್ರಹಿಸುವುದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ರಾಯಪ್ಪ ಹೇಳಿದರು. ಅಕ್ರಮ ಚಟುವಟಿಕೆ ಮೇಲೆ ನಿಗಾವಹಿಸಲು ಕಂದಾಯ, ಪೊಲೀಸ್, ಪಿಡಬ್ಲ್ಯುಡಿ, ಅರಣ್ಯ ಇಲಾಖೆ ಅಧಿಕಾರಿಳ ನೇತೃತ್ವದಲ್ಲಿ ತಾಲೂಕು ಮಟ್ಟದ ಮರಳು ಟಾಸ್ಕ್​ಫೋರ್ಸ್ ಸಮಿತಿ ರಚಿಸಲಾಗಿದೆ. ಉಳಿದಂತೆ ಆಯಾ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಅಕ್ರಮ ತಡೆಯಲು ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ಮತ್ತು ಆಯಾ ಪಿಡಿಒ ಕ್ರಮ ಕೈಗೊಳ್ಳುವರು. ಕಾನೂನುಬಾಹಿರವಾಗಿ ಮರಳುಗಾರಿಕೆ ನಡೆಯುತ್ತಿರುವುದು ಕಂಡುಬಂದರೆ ಸಾರ್ವಜನಿಕರು ತಕ್ಷಣವೇ ತಾಲೂಕು ಟಾಸ್ಕ್​ಫೋರ್ಸ್ ಸಮಿತಿ ಗಮನಕ್ಕೆ ತಂದರೆ ಕ್ರಮವಹಿಸಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts