More

    ಮನಸೂರೆಗೊಂಡ ರಾಜೇಶ ಕೃಷ್ಣನ್ ಹಾಡು

    ಹುಬ್ಬಳ್ಳಿ: ಎಸ್.ಎಸ್. ಶೆಟ್ಟರ್ ಫೌಂಡೇಷನ್ ಪ್ರಾಯೋಜಕತ್ವ ಹಾಗೂ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿ ವಾಹಿನಿಗಳ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಹುಬ್ಬಳ್ಳಿ ಯುಗಾದಿ ಉತ್ಸವಕ್ಕೆ ಖ್ಯಾತ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್ ಅವರ ಸಂಗೀತ ಸಂಜೆ ವಿಶೇಷ ರಂಗು ನೀಡಿತು.

    ರಾತ್ರಿ 8.45ರ ವೇಳೆಗೆ ಆರಂಭವಾದ ಸಂಗೀತ ಸಂಜೆಯ ವೇದಿಕೆಗೆ ರಾಜೇಶ್ ಕೃಷ್ಣನ್ ಅವರು ಆಗಮಿಸುತ್ತಿದ್ದಂತೆ ಆರ್​ಕೆ.. ಆರ್​ಕೆ… ಎಂದು ಪ್ರೇಕ್ಷಕರು ಕರತಾಡನ ಮಾಡಿದರು. ನಂತರ ನಿರಂತರ ಒಂದು ಗಂಟೆ ಕಾಲ ಸಂಗೀತ ಸುಧೆ ಹರಿಸಿದರು. ‘ಯಾರೋ… ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು…’ ಎಂಬ ಹಾಡು ಪ್ರೇಕ್ಷಕರ ಮನಸೂರೆಗೊಂಡಿತು. ‘ಉಸಿರೆ ಉಸಿರೆ… ಈ ಉಸಿರ ಕೊಲ್ಲಬೇಡ’ ಹಾಡಿಗೆ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಮೊಬೈಲ್ ಟಾರ್ಚ್ ಆನ್ ಮಾಡಿ ಕೈ ಬೀಸಿದರು.

    ಈ ಭೂಮಿ ಬಣ್ಣದ ಬುಗುರಿ… ಆ ಶಿವನೇ ಚಾಟಿ ಕಣೋ, ಶಂಕರನಾಗ ಅಭಿಮಾನಿಗಳಿಗಾಗಿ ಸಿಬಿಐ ಶಂಕರ ಚಿತ್ರದ ಗೀತಾಂಜಲಿ, ಪುಷ್ಪಾಂಜಲಿ…. ಹಾಡುಗಳು ಕೇಳುಗರನ್ನು ಮಂತ್ರಮುಗ್ಧಗೊಳಿಸಿದವು.

    ಪುನೀತ ರಾಜಕುಮಾರ ಜತೆಗಿನ ಸ್ನೇಹ ನೆನೆದ ರಾಜೇಶ ಅವರು ‘ಕಾಣದಂತೆ ಮಾಯವಾದನು… ನಮ್ಮ ಶಿವ ಕೈಲಾಸ ಸೇರಿಕೊಂಡನು…’ ಹಾಡನ್ನು ಸಹಕಲಾವಿದರೊಂದಿಗೆ ನೃತ್ಯ ಮಾಡುತ್ತ ಹಾಡಿದಾಗ ಮಹಿಳೆಯರು, ಮಕ್ಕಳು ಎನ್ನದೇ ಹಲವರು ಹೆಜ್ಜೆ ಹಾಕಿದರು.

    ತಮ್ಮ ಗುರುಗಳ ಅಚ್ಚುಮೆಚ್ಚಿನ ಹಿಂದಿ ಹಾಡು ‘ಪೆಹಲಾ ಪೆಹಲಾ ಪ್ಯಾರ್ ಹೈ ಪೆಹಲಿ ಪೆಹಲಿ ಬಾರ್ ಹೈ…’ ಹಾಡು ಹೇಳುತ್ತಿದ್ದಂತೆ ಪ್ರೇಕ್ಷಕರು ಗಾನಗಂಧರ್ವ ಎಸ್​ಪಿಬಿ ಅವರನ್ನು ಸ್ಮರಿಸುವಂತೆ ಮಾಡಿತು.

    ಹೆಮ್ಮೆಯ ಹುಬ್ಬಳ್ಳಿ: ತಮ್ಮ ಗುರುಗಳಾದ ಎಸ್.ಪಿ. ಬಾಲಸುಬ್ರಮಣ್ಯ ಅವರು 11 ವರ್ಷದ ಹಿಂದೆ ಹಾಡಿದ ಜಾಗ ಹುಬ್ಬಳ್ಳಿಯಲ್ಲಿ ನಾನು ಹಾಡು ಹೇಳುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ. ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ವಿಜಯವಾಣಿ ಹಾಗೂ ಜಗದೀಶ ಶೆಟ್ಟರ್ ಅವರಿಗೆ ಧನ್ಯವಾದ ಅರ್ಪಿಸುವೆ ಎಂದು ರಾಜೇಶ ಕೃಷ್ಣನ್ ಹೇಳಿದರು.

    ಗಣಪತಿ ನೃತ್ಯ ರೂಪಕದ ಮೂಲಕ ಸಂಗೀತ ಸಂಜೆ ಆರಂಭಿಸಲಾಯಿತು. ಹಿನ್ನೆಲೆ ಗಾಯಕಿ ಮಾನಸ ಹೊಳ್ಳ ಅವರು ‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ…’ ಹಾಡು ಪ್ರಸ್ತುತ ಪಡಿಸಿದರು. ಸಂತೋಷ ಹಾಗೂ ಮಾನಸ ಅವರು ಹಾಡಿದ ‘ಬೆಳಗಾವಿಯಾದರೇನು ಬೆಂಗಳೂರು ಆದರೇನು, ಹುಬ್ಬಳ್ಳಿಯಾದರೆ ಭದ್ರಾವತಿಯಾದರೇನು’ ಹಾಡು ಗಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts