More

    ಮತ ಜಾಗೃತಿ ಚಿತ್ರಕಲಾ ಪ್ರದರ್ಶನ: ನಿರ್ಭೀತ- ನೈತಿಕ ಮತದಾನ ಮಾಡಿ

    ದಾವಣಗೆರೆ: ಮತದಾರರು ಆಸೆ-ಆಮಿಷಕ್ಕೆ ಬಲಿಯಾಗದೆ ನಿರ್ಭೀತರಾಗಿ ನೈತಿಕ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸಲಹೆ ನೀಡಿದರು.

    ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ವಕೀಲರ ಸಾಂಸ್ಕೃತಿಕ ಭವನದಲ್ಲಿ ಮತದಾರ ಜಾಗೃತ ಸಂಘ, ಮತದಾನ ಜಾಗೃತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
    ಮತದಾನದ ದಿನ ಸಾರ್ವಜನಿಕರು ಹೊರಗೆ ಹೋಗಲು ವಿನಾಕಾರಣ ರಜೆ ಹಾಕದೆ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಿದೆ. ನೈತಿಕ ಮತದಾನಕ್ಕೆ ಪ್ರೋತ್ಸಾಹಿಸಬೇಕು. ಸ್ನೇಹಿತರು, ಹಿತೈಷಿಗಳಿಗೂ ಈ ಬಗ್ಗೆ ಮಾಹಿತಿ ನೀಡಬೇಕು ಎಂದರು.
    ಶಾಲಾ-ಕಾಲೇಜುಗಳ ದಾಖಲಾತಿಯಲ್ಲಿ ಜನ್ಮ ದಿನಾಂಕ, ಮನೆಯ ವಿಳಾಸಗಳನ್ನು ಹುಡುಕಿ 18-19 ವರ್ಷದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಸ್ವಯಂಪ್ರೇರಿತರಾಗಿ ಕೆಲಸ ಮಾಡಿದ್ದರಿಂದ ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಈ ಬಾರಿ 35,454 ಯುವ ಮತದಾರರು ಇದ್ದಾರೆ ಎಂದು ಹೇಳಿದರು.
    ಮತದಾನದ ದಿನದಂದು ಮತಗಟ್ಟೆ ಅರಸಿ ಅಲೆಯುವುದನ್ನು ತಪ್ಪಿಸುವ ದೃಷ್ಟಿಯಿಂದ ಏ.30ರಂದು ಜಿಲ್ಲಾದ್ಯಂತ ನಮ್ಮ ನಡೆ ಮತಗಟ್ಟೆಯ ಕಡೆಗೆ ಜಾಗೃತಿ ಜಾಥಾ ಯೋಜಿಸಲಾಗಿದೆ. ಮತದಾರರು ತಮ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ಪಡೆಯಬೇಕಿದೆ ಎಂದರು.
    ಜಿಲ್ಲಾಡಳಿತ, ಚುನಾವಣಾ ಆಯೋಗಗಳು ಮಾತ್ರವೇ ಚುನಾವಣೆ ಕೆಲಸ ಮಾಡಬೇಕಿತ್ತು. ಈಗ ಸಂಘಟನೆಗಳು, ಜನರು ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ. ನ್ಯಾಯಾಂಗ ಇಲಾಖೆ ಮುಂದೆ ಬಂದಿರುವುದು ಬಲ ತಂದಿದೆ ಎಂದು ತಿಳಿಸಿದರು.
    ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ಪರಿಣಾಮಕಾರಿ ಮತದಾನ ಜಾಗೃತಿಗೆ ಸಂಘಗಳನ್ನು ರಚಿಸುವಂತೆ ಚುನಾವಣೆ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದ್ದು, ಹೈಕೋರ್ಟ್ ಸೂಚನೆಯಂತೆ ನ್ಯಾಯಾಂಗ ಇಲಾಖೆಯಲ್ಲಿ ಮತದಾರ ಜಾಗೃತ ಸಂಘವನ್ನು ರಚಿಸಿದ್ದೇವೆ. ಇದರ ಮತದಾನ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
    ಮತದಾರರ ಜಾಗೃತ ಸಂಘ ನಿರಂತರವಾಗಿ ಕಾರ್ಯ ನಿರ್ವಹಿಸಲಿದೆ. ಸಲಹೆ, ಸೂಚನೆಗಳನ್ನು ನೀಡಿದರೆ ಅವುಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು. ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರಿಗೆ ನೈತಿಕ ಮತದಾನ ಮಾಡಲು ಸಲಹೆ ನೀಡಿದರೆ ಮತದಾನದ ಪ್ರಮಾಣ ಹೆಚ್ಚಿಸಬಹುದು ಎಂದು ತಿಳಿಸಿದರು.
    ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ವಕೀಲರು ತಮ್ಮ ಕುಟುಂಬ ಹಾಗೂ ಆಸ್ತಿಯನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದರು. ಮತದಾನ ಜಾಗೃತಿ ಮೂಡಿಸುವ ಹೊಣೆಗಾರಿಕೆ ಈ ಸಮುದಾಯದ ಮೇಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ, ದೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದವರಲ್ಲಿ ವಕೀಲರು ಹೆಚ್ಚು ಇದ್ದಾರೆ ಎಂದು ಹೇಳಿದರು.
    ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ವಿ. ವಿಜಯಾನಂದ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ (ಪ್ರಭಾರ) ಟಿ.ಎಂ. ನಿವೇದಿತಾ, ನ್ಯಾಯಾಧೀಶರಾದ ಎನ್.ಶ್ರೀಪಾದ್, ದಶರಥ, ಅಫ್ತಾಬ್, ಸಮೀರ್ ಕೊಳ್ಳಿ, ಸಿದ್ದರಾಜು, ಚಿಕ್ಕಮಗಳೂರಿನ ಚಿತ್ರ ಕಲಾವಿದ ನಾಮದೇವ ಕಾಗದಗಾರ, ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್, ಕಾರ್ಯದರ್ಶಿ ಎಸ್. ಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts