More

    ಮತ್ತಷ್ಟು ಹಾಕಿ ಆಟಗಾರರನ್ನು ನಿರೀಕ್ಷಿಸುತ್ತಿದೆ ದೇಶ

    ಗೋಣಿಕೊಪ್ಪ: ಕೊಡಗಿನ ಸಂಸ್ಕೃತಿಯಾಗಿ ಹಾಕಿ ಕ್ರೀಡೆ ಹೆಸರು ಪಡೆದುಕೊಂಡಿರುವುದರಿಂದ ಮತ್ತಷ್ಟು ಟರ್ಫ್ ಮೈದಾನ ನಿರ್ಮಾಣ ಜಿಲ್ಲೆಗೆ ಅವಶ್ಯ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿದರು.


    ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೋಣಿಕೊಪ್ಪದ ಕಾಲ್ಸ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಿಂದ ರಾಷ್ಟ್ರವನ್ನು ಪ್ರತಿನಿಧಿಸಿರುವ ಹಾಕಿ ಆಟಗಾರರಲ್ಲಿ ಅದ್ಭುತ ಪ್ರತಿಭೆಯನ್ನು ಕಂಡಿದ್ದೇವೆ. ಹೀಗಾಗಿ ಜಿಲ್ಲೆಯ ಮತ್ತಷ್ಟು ಹಾಕಿ ಆಟಗಾರರನ್ನು ದೇಶ ನಿರೀಕ್ಷಿಸುತ್ತಿದೆ. ಇಲ್ಲಿನ ಸಂಸ್ಕೃತಿಯಲ್ಲಿ ಹಾಕಿ ಅಡಗಿರುವುದರಿಂದ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಇದರ ಅನುಷ್ಠಾನಕ್ಕೆ ಹಾಕಿ ಮೈದಾನ, ಮೂಲ ಸೌಕರ್ಯ ಪಡೆದುಕೊಳ್ಳಲು ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.


    ಕೊಡಗಿನ ವಾತಾವರಣ, ಆಹಾರ ಪದ್ಧತಿ ಇಲ್ಲಿನ ಹಾಕಿ ಕಲಿಗಳ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ವಿಶೇಷವಾಗಿ ಕೊಡಗು ಹಾಕಿಯಲ್ಲಿ ಗುರುತಿಸಿಕೊಂಡಿರುವುದರಿಂದ ಸಾಂಪ್ರಾದಾಯಿಕ ಹಿನ್ನೆಲೆ ಕೂಡ ಹೊಂದಿದೆ. ಜಮೈಕಾದಿಂದ ಹೆಚ್ಚು ಓಟಗಾರರು ವಿಶ್ವಕ್ಕೆ ಸಿಗುತ್ತಿದ್ದಾರೆ. ದೇಶದ ಮಹಾರಾಷ್ಟ್ರ, ಮುಂಬೈ ಭಾಗದಿಂದ ಉತ್ತಮ ಬ್ಯಾಟರ್ ಕೂಡ ದೊರೆಯುತ್ತಿದ್ದಾರೆ. ಇದೆಲ್ಲವೂ ಸ್ಥಳೀಯವಾಗಿ ಸಾಂಪ್ರಾದಾಯಿಕವಾಗಿ ದೊರೆಯುವ ಸಂಪನ್ಮೂಲಗಳು. ಇದರ ಬೆಳವಣಿಗೆ ಪೋಷಣೆ ಅಗತ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಹಾಕಿ ಮೈದಾನ ನಿರ್ಮಾಣವಾಗಬೇಕು. ಸ್ಥಳೀಯವಾಗಿ ಸಾಂಪ್ರಾದಾಯಿಕವಾಗಿ ಬೆಳವಣಿಗೆಯಲ್ಲಿರುವ ಕ್ರೀಡೆಗೆ ಮತ್ತಷ್ಟು ಒತ್ತು ನೀಡಲು ದೇಶವನ್ನು ಗಮನ ಸೆಳೆಯುವ ಪ್ರಯತ್ನ ಕೂಡ ನಡೆಸಲಾಗುತ್ತಿದೆ ಎಂದರು.
    ಕ್ರಿಕೆಟ್ ಕ್ಷೇತ್ರಕ್ಕೆ ರಾಬಿನ್ ಉತಪ್ಪ ಅವರಂಥ ಪ್ರತಿಭೆ ದೊರೆತಿದೆ. ಆದರೆ, ಕ್ರಿಕೆಟ್ ಆಟಕ್ಕೆ ಮಾತ್ರ ಉತ್ತೇಜನ ನೀಡುವುದರಿಂದ ಪ್ರಯೋಜನವಾಗುವುದಿಲ್ಲ. ಕೇವಲ ಹಣಗಳಿಸಬೇಕೆಂಬ ಉದ್ದೇಶದಿಂದ ಕ್ರಿಕೆಟ್ ಆಟವನ್ನು ಗುರಿಯಾಗಿಸಿಕೊಳ್ಳುವುದು ಉತ್ತಮ ಬೆಳವಣಿಗೆಯಾಗದು ಎಂದು ಅಭಿಪ್ರಾಯಪಟ್ಟರು.


    ಒಂದು ಆಟ ಸಂಸ್ಕೃತಿಯಂತೆ ಬಿಂಬಿಸಿಕೊಂಡಾಗ ಅದರ ಪೋಷಣೆಗೆ ಯೋಜನೆ ರೂಪಿಸಿಕೊಳ್ಳಬೇಕಿದೆ. ಕೊಡವ ಕೌಟುಂಬಿಕ ಹಾಕಿ ಕ್ರೀಡೆ ವಿಶ್ವಕ್ಕೆ ಮಾದರಿಯಾಗಿ ದಾಖಲಾಗಿದೆ. ಇಷ್ಟೊಂದು ಪ್ರತಿಭೆ ಕುಟುಂಬದಲ್ಲಿಯೆ ದೊರೆಯುವಾಗ ಪ್ರೋತ್ಸಾಹಕ್ಕೆ ಕಾರ್ಯಕ್ರಮ ರೂಪಿಸಬೇಕಿದೆ. ದೇಶದ ಇಂಥದ್ದೇ ಭಾಗದಲ್ಲಿ ಮಾತ್ರ ಒಲಿಂಪಿಕ್ ತರಬೇತಿ ಕೇಂದ್ರಗಳನ್ನು ನಿರ್ಮಿಸುವುದಕ್ಕಿಂತ ಸ್ಥಳೀಯ ಪ್ರತಿಭೆಯನ್ನಾಧರಿಸಿ ಸೌಕರ್ಯದೊಂದಿಗೆ ತರಬೇತಿ ಕೇಂದ್ರ ಸ್ಥಾಪಿಸಲು ಗಮನ ಸೆಳೆಯಲಾಗಿದೆ. ಕ್ರೀಡಾ ಮೂಲ ಸೌಕರ್ಯಗಳು ದೇಶದಲ್ಲಿ ಮತ್ತಷ್ಟು ವಿಸ್ತಾರಗೊಳ್ಳಬೇಕಿದೆ ಎಂದರು.


    ಪ್ರತಿ ವ್ಯಕ್ತಿಗೆ ಒತ್ತಡ ನಿಭಾಯಿಸಲು ಕ್ರೀಡೆ ಸಹಕಾರಿ. ಎಂಥದ್ದೇ ಪರಿಸ್ಥಿತಿಯಲ್ಲಿ ಗೆದ್ದು ಬರಲು ಕ್ರೀಡೆ ಅಗತ್ಯ. ಈ ನಿಟ್ಟಿನಲ್ಲಿ ಪಾಲಕರು ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತಡ ಹೇರುವುದಕ್ಕಿಂತ ಕ್ರೀಡಾ ಪ್ರೋತ್ಸಾಹ, ಮೂಲ ಸೌಕರ್ಯ ಇರುವಂಥ ಶಿಕ್ಷಣ ಕೇಂದ್ರಕ್ಕೆ ಮಕ್ಕಳನ್ನು ಸೇರಿಸುವುದರಿಂದ ಒತ್ತಡ ನಿಭಾಯಿಸುವ ಸಾಮರ್ಥ್ಯ ದೊರೆಯುತ್ತದೆ ಎಂದು ಹೇಳಿದರು.


    ಕಾಲ್ಸ್ ಶಾಲೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಹೊಂದಿರುವುದು ಹೆಮ್ಮೆಯ ವಿಚಾರ. ಸ್ಫೂರ್ತಿಯಾಗಿರುವ ಅಂತಾರಾಷ್ಟ್ರೀಯ ಅಥ್ಲಿಟ್ ಅಶ್ವಿನಿ ನಾಚಪ್ಪ ದೂರದೃಷ್ಟಿಯ ಚಿಂತನೆಯಲ್ಲಿ ಕ್ರೀಡೆಗೆ ಪೂರಕ ಸೌಲಭ್ಯ ನೀಡಿ ಮಕ್ಕಳಲ್ಲಿನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ. ಸೂಕ್ತವಾದ ಮೈದಾನ, ಹಸಿರು ಪರಿಸರ, ನೈರ್ಮಲ್ಯ, ಪೋಷಕಾಂಶದ ಆಹಾರ ಪದ್ಧತಿ ಎಲ್ಲವೂ ಮಕ್ಕಳಲ್ಲಿ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿಯಾಗಿದೆ. ಆಟವನ್ನು ಶಿಕ್ಷಣದ ಮೂಲಕ ಗೋಡೆಗಳ ನಡುವೆ ಕಲಿಸಲು ಸಾಧ್ಯವಿಲ್ಲ. ಪೂರಕವಾದ ಮೈದಾನ ಅವಶ್ಯ. ಇದೆಲ್ಲವೂ ಕಾಲ್ಸ್ ಶಾಲೆಯಲ್ಲಿ ರೂಪಿಸಿವುದು, ಅವರ ಕ್ರೀಡಾಸಕ್ತಿಯ ಸಂಕೇತವಾಗಿದೆ ಎಂದರು.


    ಅಂತಾರಾಷ್ಟ್ರೀಯ ಮಾಜಿ ಅಥ್ಲೆಟ್ ಅಶ್ವಿನಿ ನಾಚಪ್ಪ, ಕಾಲ್ಸ್ ಶಾಲಾ ಮುಖ್ಯಸ್ಥ ದತ್ತ ಕರುಂಬಯ್ಯ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಖಜಾಂಚಿ ವಿ. ವಿ. ಅರುಣ್ ಕುಮಾರ್, ನಿರ್ದೇಶಕರಾದ ಚಿಮ್ಮಣಮಾಡ ದರ್ಶನ್ ದೇವಯ್ಯ, ಸಿಂಗಿ ಸತೀಶ್, ಎಂ.ಎಂ. ಚನ್ನನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts