More

    ಮತದಾನ ಹೆಚ್ಚಿಸಲು ಜಾಗೃತಿ ಬಾಣ

    ಬೆಳಗಾವಿ: ಕಳೆದ ವರ್ಷದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ಉತ್ತರ ಮತಕ್ಷೇತ್ರಗಳು ಮತದಾನ ದಲ್ಲಿ ಕಳಪೆ ಸಾಧನೆ ಮಾಡಿವೆ.

    ಇವೆರಡು ಮತಕ್ಷೇತ್ರಗಳ ‘ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳ’ ಮೇಲೆ ಜಿಲ್ಲಾ ಸ್ವೀಪ್ ಸಮಿತಿ ಕಣ್ಣಿಟ್ಟಿದ್ದು, ಮತದಾನ ಪ್ರಮಾಣ ಹೆಚ್ಚಿಸುವುದಕ್ಕೆ ವಿಶೇಷ ಅಭಿಯಾನ ಕೈಗೊಂಡಿದೆ. ಜಿಲ್ಲೆಯ ಒಟ್ಟು 18 ಮತಕ್ಷೇತ್ರಗಳ ಪೈಕಿ ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ ಮತಕ್ಷೇತ್ರ ಸೇರಿ 16 ಕ್ಷೇತ್ರಗಳ ಬಹಳಷ್ಟು ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಸ್ವೀಪ್ ಸಮಿತಿಯು ನಿರ್ದಿಷ್ಟ ಮತಗಟ್ಟೆಗಳಲ್ಲಿ ಮತದಾರರ ವಿಶೇಷ ಜಾಗೃತಿಗೆ ಮುಂದಾಗಿದೆ.
    ಕಡಿಮೆ ಮತದಾನ ದಾಖಲಾಗಿರುವ ಮತಗಟ್ಟೆಗಳ ಪೈಕಿ ಬೆಳಗಾವಿ ದಕ್ಷಿಣ ಕ್ಷೇತ್ರದ 105 ಮತಗಟ್ಟೆಗಳ ಪೈಕಿ 18 ಮತಗಟ್ಟೆಗಳಲ್ಲಿ ಕೇವಲ ಶೇ. 31ರಿಂದ ಶೇ. 50ರ ವರೆಗಷ್ಟೇ ಮತದಾನವಾಗಿದೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನ ದಾಖಲಾದ 74 ಮತಗಟ್ಟೆಗಳ ಪೈಕಿ 30 ಮತಗಟ್ಟೆಗಳಲ್ಲಿ ಶೇ.45ರಿಂದ ಶೇ.53 ಮತದಾನವಾಗಿದೆ. ಈ ಮತಗಟ್ಟೆಗಳನ್ನು ಗುರುತಿಸಿಕೊಂಡಿರುವ ಸ್ವೀಪ್ ಸಮಿತಿಯು ಮತದಾನ ಹೆಚ್ಚಳಕ್ಕೆ ನಿಗಾವಹಿಸಿದ್ದು, ಮತದಾನದ ಪ್ರಮಾಣ ಹೆಚ್ಚಿಸುವುದಕ್ಕೆ ಪ್ರಯತ್ನ ಮಾಡುತ್ತಿದೆ. ಜಿಲ್ಲಾ ಸ್ವೀಪ್ ಸಮಿತಿ ತಂಡದ ಸದಸ್ಯರು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ‘ನನ್ನ ಮತ ಮಾರಾಟಕ್ಕಿಲ್ಲ’ ಇತ್ಯಾದಿ ಘೋಷ್ಯವಾಕ್ಯದೊಂದಿಗೆ ಜಾಗೃತಿಗಿಳಿದಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಗಳಲ್ಲಿ 100 ಜನರ ಗುಂಪು ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಬೀದಿನಾಟಕದ ಮೂಲಕ ಕಲಾವಿದರಿಂದ ಮತದಾನ ಮಹತ್ವ ಸಾರಲಾಗುತ್ತಿದೆ. ಗ್ರಾಮಗಳ ಗ್ರಂಥಾಲಯಗಳು, ಸ್ವಾಮೀ ವಿವೇಕಾನಂದ ಸಂಘ-ಸಂಸ್ಥೆಗಳಲ್ಲಿ ಜನರನ್ನು ಸೇರಿಸಿ ಅರಿವು ಮೂಡಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಸೈಕಲ್ ಜಾಥಾ ಶುರುವಾಗಿದೆ. ಮತದಾನ ದಿನದವರೆಗೂ ಜಾಗೃತಿ ಜಾಥಾಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಡಿಮೆ ಮತದಾನವಾದ ಇತರ ಮತಗಟ್ಟೆಗಳು

    ಗೋಕಾಕ ಮತಕ್ಷೇತ್ರದ ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳ ಪೈಕಿ 25 ಮತಗಟ್ಟೆಗಳಲ್ಲಿ ಕಳೆದ ಬಾರಿ ಶೇ. 48.63ರಿಂದ ಶೇ.60.09 ಮತದಾನವಾಗಿದೆ. ನಿಪ್ಪಾಣಿ ಮತಕ್ಷೇತ್ರದ 4 ಮತಗಟ್ಟೆಗಳಲ್ಲಿ ಶೇ. 59ರಿಂದ ಶೇ. 61, ಅಥಣಿಯ 4 ಮತಗಟ್ಟೆಗಳಲ್ಲಿ ಶೇ. 51ರಿಂದ ಶೇ. 60.40, ಕುಡಚಿ ಮತಕ್ಷೇತ್ರದ 5 ಮತಗಟ್ಟೆಯಲ್ಲಿ ಶೇ. 51ರಿಂದ ಶೇ.60.64 ಮತದಾನವಾಗಿದೆ. ರಾಯಬಾಗ ಮತಕ್ಷೇತ್ರದ 13 ಮತಗಟ್ಟೆಗಳಲ್ಲಿ ಶೇ. 31ರಿಂದ ಶೇ.60.86, ಹುಕ್ಕೇರಿಯ 6 ಮತಗಟ್ಟೆಗಳಲ್ಲಿ ಶೇ. 54ರಿಂದ ಶೇ.61, ಅರಬಾವಿಯ 4 ಮತಗಟ್ಟೆಗಳಲ್ಲಿ ಶೇ. 54.77ರಿಂದ 59.84 ಮತದಾನವಾಗಿದೆ. ಬೆಳಗಾವಿ ಗ್ರಾಮೀಣದ ಕ್ಷೇತ್ರದ ಕಡಿಮೆ ಮತದಾನ ದಾಖಲಾದ 65 ಮತಗಟ್ಟೆಗಳಲ್ಲಿ ಬಹಳಷ್ಟು ಮತಗಟ್ಟೆಗಳು ಶೇ. 42ರಿಂದ ಶೇ. 53ರ ಆಸುಪಾಸಿನಲ್ಲಿವೆ. ಕಡಿಮೆ ಮತದಾನ ದಾಖಲಾದ ಈ ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಜಾಗೃತಿ ಮೂಡಿಸಲಾಗುತ್ತಿದೆ. ಖಾನಾಪುರದ 8 ಮತಗಟ್ಟೆಗಳು ಹಾಗೂ ಕಿತ್ತೂರು ಮತ್ತು ಬೈಲಹೊಂಗಲದಲ್ಲಿ ತಲಾ 1 ಮತಗಟ್ಟೆಗಳಲ್ಲಿ ಮತದಾನ ಕಡಿಮೆಯಾಗಿದ್ದು, ಅಲ್ಲಿಯೂ ಅಗತ್ಯ ಜಾಗೃತಿ ಕೈಗೊಳ್ಳಲಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕೋಡಿ-ಸದಗಲಾ ಕ್ಷೇತ್ರದಲ್ಲಿ ಒಟ್ಟಾರೆ ಶೇ. 84.78 ಫಲಿತಾಂಶ ದಾಖಲಾಗಿ, ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾಗಿರುವ ಕ್ಷೇತ್ರವೆಂದು ಹೆಗ್ಗಳಿಕೆ ಪಡೆದಿತ್ತು. ಬೆಳಗಾವಿ ದಕ್ಷಿಣದಲ್ಲಿ ಶೇ. 62.50 ಮತದಾನವಾಗಿದ್ದು, ಅತಿ ಕಡಿಮೆ ಮತದಾನವಾದ ಮತಕ್ಷೇತ್ರ ಹಣೆಪಟ್ಟಿ ಕಟ್ಟಿಕೊಂಡಿದೆ. ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದಲೇ ಮತದಾನದ ದಿನವನ್ನು ಬುಧವಾರ ನಿಗದಿಮಾಡಲಾಗಿದೆ. ವಾರಾಂತ್ಯದಲ್ಲಿ ಮತದಾನ ದಿನ ನಿಗದಿ ಮಾಡಿದರೆ, ಕಡಿಮೆ ಮತದಾನವಾಗಬಹುದು ಎಂಬ ಕಾರಣಕ್ಕೆ ಚುನಾವಣಾ ಆಯೋಗ ಈ ತಂತ್ರ ಅನುಸರಿಸಿದೆ.

    ಜಿಲ್ಲಾ ಸ್ವೀಪ್ ಸಮಿತಿಯು ಕಡಿಮೆ ಮತದಾನವಾದ ಕಡೆಗಳಲ್ಲಿ ವಿಶೇಷ ಜಾಗೃತಿ ಮೂಡಿಸುತ್ತಿದೆ. ಏ. 1ರಂದು 18 ವರ್ಷ ಪೂರೈಸುವ ನಾಲ್ಕು ಸಾವಿರ ಯುವಕರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಏ. 11ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಪ್ರಕ್ರಿಯೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಸೇರಿಸಿಕೊಳ್ಳಬೇಕು.
    | ನಿತೇಶ ಪಾಟೀಲ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts