More

    ಡಿಸಿಎಂ ಡಿ.ಕೆ.ಶಿವಕುಮಾರ್ ನೀಚ ಕೃತ್ಯ

    ತುಮಕೂರು: ಪೆನ್‌ಡ್ರೈವ್‌ನಲ್ಲಿ ಅಶ್ಲೀಲ ವಿಡಿಯೋ ಹಂಚುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ವರ್ಚಸ್ಸು ಕುಂದಿಸಿ, ಹೆಣ್ಣುಮಕ್ಕಳ ಮಾನ ಹರಾಜು ಹಾಕುತ್ತಿರುವ ಪ್ರಕರಣದ ಹಿಂದಿನ ರೂವಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ನಗರದ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮಂಗಳವಾರ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರಲ್ಲದೆ, ಪ್ರಕರಣದ ನೈಜ ಸತ್ಯಾಸತ್ಯತೆ ಹೊರಬರಲು ಸಿಬಿಐಗೆ ಒಪ್ಪಿಸಲು ಒತ್ತಾಯಿಸಿದರು.

    ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ , ಇಡೀ ರಾಜ್ಯದಲ್ಲಿ ಪೆನ್‌ಡ್ರೈವ್ ಹಗರಣ ಸಂಚಲನ ಸೃಷ್ಟಿಸಿದ್ದು ಅಶ್ಲೀಲ ವಿಡಿಯೋಗಳನ್ನು ಹಂಚುವ ಮೂಲಕ ಸಂತ್ರಸ್ತ ಹೆಣ್ಣುಮಕ್ಕಳು ಹಾಗೂ ಅವರ ಕುಟುಂಬದವರ ಮಾನ ಕಳೆಯುತ್ತಿರುವ ಪ್ರಕರಣದ ಹಿಂದಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.

    ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿರುವ ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹಂಚಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ವಿಡಿಯೋ ಹಂಚಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿರುವುದು ಜಗಜ್ಜಾಹೀರಾಗಿದೆ. ಈ ಸಂಬಂಧ ವಕೀಲ ದೇವರಾಜೇಗೌಡ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆಶಿ ಇಂತಹ ನೀಚ ಕೃತ್ಯ ಎಸಗಿರುವುದು ಖಂಡನೀಯ. ಹೆಣ್ಣುಮಕ್ಕಳ ರಕ್ಷಣೆ ಮಾಡದೆ, ಅವರ ಮಾನ ಹರಾಜು ಹಾಕಿರುವ ಶಿವಕುಮಾರ್‌ಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

    ಉಗ್ರ ಹೋರಾಟ: ಲೈಂಗಿಕ ಹಗರಣವನ್ನು ಜೆಡಿಎಸ್ ನಾಯಕರ ವೈಯಕ್ತಿಕ ತೇಜೋವಧೆಗೆ ಬಳಿಸಿಕೊಂಡಿರುವುದಲ್ಲದೆ, ಸಂತ್ರಸ್ತ ಹೆಣ್ಣುಮಕ್ಕಳ ಮರ್ಯಾದೆ ಕಳೆಯುವ ಕೃತ್ಯದ ಹಿಂದಿರುವ, ಈ ಹೀನ ಕೃತ್ಯವೆಸಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ಜೆಡಿಎಸ್ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಿದೆ ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಎಚ್ಚರಿಸಿದರು.

    ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಡಿ.ಕೆ.ಶಿವಕುಮಾರ್‌ರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಪೆನ್‌ಡ್ರೈವ್ ಸೃಷ್ಟಿಕರ್ತರು ಹಾಗೂ ಅದರ ಹಂಚಿಕೆದಾರರ ವಿರುದ್ಧ ಈ ನೆಲದ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಪ್ರತಿಭಟನಾನಿರತರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರಾಧ್ಯಕ್ಷ ವಿಜಯ್‌ಗೌಡ, ಮುಖಂಡರಾದ ಗುಬ್ಬಿ ನಾಗರಾಜು, ಕೊಂಡವಾಡಿ ಚಂದ್ರಶೇಖರ್, ಎಸ್.ಆರ್.ಗೌಡ, ಸೋಲಾರ್ ಕೃಷ್ಣಮೂರ್ತಿ, ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಹೆಚ್.ಡಿ.ಕೆ.ಮಂಜುನಾಥ್, ಟಿ.ಜಿ.ನರಸಿಂಹರಾಜು, ಮುದಿಮಡು ರಂಗಸ್ವಾಮಯ್ಯ, ಬೆಳಗುಂಬ ವೆಂಕಟೇಶ್, ದೊಡ್ಡೇರಿ ಬಸವರಾಜು, ಲಕ್ಷ್ಮಮ್ಮ, ಲೀಲಾವತಿ, ತಾಹಿರಾಬಾನು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಪೆನ್‌ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹಂಚಿ ಹೆಣ್ಣುಮಕ್ಕಳ ಮಾನ ಹರಾಜು ಮಾಡಿದ ಕೃತ್ಯದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ದೇವೇಗೌಡರು, ಕುಮಾರಸ್ವಾಮಿ ಕುಟುಂಬವನ್ನು ತೇಜೋವಧೆ ಮಾಡುವ ನೀಚ ಕೆಲಸಕ್ಕಿಳಿದ ಡಿ.ಕೆ.ಶಿವಕುಮಾರ್‌ರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು.
    ಕೆ.ಎಂ.ತಿಮ್ಮರಾಯಪ್ಪ
    ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts