More

    ಮತದಾನ ಮಾಡಲು ಹೊರಟೆವೂ ಭಾರತಕ್ಕಾಗಿ….

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ದೇಶಾದ್ಯಂತ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಈಗಾಗಲೇ ಒಂದಿಲ್ಲೊಂದು ಚಟುವಟಿಕೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ತನ್ನ ಹೊಸ ಪ್ರಯತ್ನ ಮುಂದುವರೆಸಿದೆ.

    ನಾ ಭಾರತ, ಭಾರತ ನನ್ನಲ್ಲಿ. ನಾ ಜಾಗೃತ, ಜಾಗೃತಿ ನನ್ನಲ್ಲಿ. ಮತದಾನ ಮಾಡಲು ಹೊರಟೆವೂ ಭಾರತಕ್ಕಾಗಿಯೇ. ನಮ್ಮ ದೇಶಕ್ಕಾಗಿಯೇ ಎಂಬ ಜಾಗೃತಿ ಗೀತೆಯೊಂದನ್ನು ವಿಡಿಯೋ ಮೂಲಕ ಹೊರತಂದಿದ್ದು, ರಾಜ್ಯದೆಲ್ಲ ಚಿತ್ರಮಂದಿರಗಳಲ್ಲೂ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.

    ಕನ್ನಡ, ಕೊಡವ, ಹವ್ಯಾಕ, ಉತ್ತರ ಕರ್ನಾಟಕ, ಮಂಡ್ಯ, ಲಂಬಾಣಿ, ಕೊಂಕಣಿ, ತುಳು, ಕುಂಡ ಕನ್ನಡ, ಚಾಮರಾಜನಗರ, ಸಿದ್ಧಿ ಒಳಗೊಂಡು ಕರ್ನಾಟಕದಲ್ಲಿ ಬಳಕೆಯಲ್ಲಿರುವ 12 ಭಾಷೆಗಳಲ್ಲಿ ಹೊರಹೊಮ್ಮಿರುವ ಈ ಹಾಡು 6 ನಿಮಿಷದ್ದಾಗಿದೆ. ಇದರೊಳಗೆ ಮತದಾನದ ಮಹತ್ವ ಏನೆಂಬುದನ್ನು ಸಾರಿ ಸಾರಿ ಹೇಳಲಾಗಿದೆ.

    ಡ್ರೋನ್ ಬಳಕೆ: ದೇಶ ಮತ್ತು ರಾಜ್ಯದ ಐತಿಹಾಸಿಕ ತಾಣ, ಜನರ ಉಡುಗೆ-ತೊಡುಗೆ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ನಡೆ-ನುಡಿ, ವೇಷಭೂಷಣ, ಕಲೆಗಳ ಅನಾವರಣ, ಜೀವನ ಶೈಲಿ ಒಳಗೊಂಡು ನಾಡಿನ ಭವ್ಯ ಪರಂಪರೆಯನ್ನು ಡ್ರೋನ್‌ಗಳನ್ನು ಬಳಸಿ ಅತ್ಯದ್ಭುತವಾಗಿ ಚಿತ್ರೀಕರಿಸಲಾಗಿದ್ದು, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನುವಂತಿದೆ.

    ಯುಟ್ಯೂಬ್ ಸೇರಿ ಸಾಮಾಜಿಕ ಜಾಲತಾಣ, ಆಯೋಗದ ಅಧಿಕೃತ ವೆಬ್‌ಸೈಟ್ ಹಾಗೂ ಸ್ವೀಪ್ ಚಟುವಟಿಕೆಗಳಲ್ಲಿ ಚುನಾವಣೆ ಮುಕ್ತಾಯದವರೆಗೂ ಸದ್ದು ಮಾಡಲಿದೆ. ಮೈ ಬೆವರ ಬಸ್ತು ಕಟ್ಟಿವಿ ಭಾರತ ದೇಶವ, ಲೋಕತಂತ್ರ ಸ್ವತಂತ್ರ ಭಾರತವ ಎಂಬ ಸಾಲು ಪ್ರಜ್ಞಾವಂತ ನಾಗರಿಕರನ್ನು, ಮತದಾರರನ್ನು ಬಡಿದೆಬ್ಬಿಸುವಂತಿದೆ.

    ಖ್ಯಾತ ನಾಮರು: ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ, ಹರೇಕಳ ಹಾಜಪ್ಪ, ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಪ್ರೇಮಾ, ಸುಧಾರಾಣಿ, ಶರಣ್, ಹರ್ಷಿಕಾ ಪುಣಚ್ಛಾ, ರಾಷ್ಟ್ರೀಯ ರೈಫಲ್ ಶೂಟರ್ ರಾಕೇಶ್ ನಾಗಪ್ಪ ನಿಡಗುಂದಿ, ರಾಷ್ಟ್ರೀಯ ಪ್ಯಾರಾ ರೈಫಲ್ ಶೂಟರ್ ಜ್ಯೋತಿ ಹನಮಂತಪ್ಪ ಸಣ್ಣಕ್ಕಿ, ಕ್ರೀಡಾಪಟುಗಳಾದ ಎಚ್.ಎನ್.ಗಿರೀಶ್, ಬಿ.ಎನ್.ಉಷಾ, ಪ್ರೇಮಾ ಚೆನ್ನಾವರ, ಹ್ಯಾರಿ ಜೋನಿಫೇಸ್ ಪ್ರಭು ಸೇರಿ ವಿವಿಧ ಕ್ಷೇತ್ರಗಳ ಖ್ಯಾತನಾಮರನ್ನು ಒಳಗೊಂಡಿದೆ.

    ಸುಷ್ಮಾ ಭಾರಧ್ವಜ್ ನಿರ್ದೇಶಿಸಿದ್ದಾರೆ. ಆರೂರ್ ರಾಕೇಶ್ ಶೆಟ್ಟಿ ನಿರ್ದೇಶನ ಮತ್ತು ಮುಖ್ಯ ಸಂಪಾದಕತ್ವ, ಸತ್ಯ ಮೂಡಿಗೆರೆ ಕ್ರಿಯೇಟಿವ್ ಹೆಡ್, ಪ್ರೊಡಕ್ಷನ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸಿದ್ದು, ಚುಕ್ಕಿ ಟಾಕೀಸ್ ತಂಡ ಅತ್ಯದ್ಭುತವಾಗಿ ಗೀತೆಯನ್ನು ಹೊರತರುವಲ್ಲಿ ಸಾಫಲ್ಯ ಕಂಡಿದೆ.

    ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ, ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ಕುಮಾರ್ ರಾ, ಆರ್.ವೆಂಕಟೇಶ್ ಕುಮಾರ್ ಸೇರಿ ಆಯೋಗದ ತಂಡ ಉತ್ತಮ ಜಾಗೃತಿ ಗೀತೆ ಹೊರತರುವಲ್ಲಿ ಶ್ರಮಿಸಿದೆ.

    ಸಂಸ್ಕೃತಿ ಮೂಲಕ ಜಾಗೃತಿ: ಯಕ್ಷಗಾನ, ವೀರಗಾಸೆ, ಭರತನಾಟ್ಯ, ಕರಡಿ ಚಮ್ಮಳ, ಅಡವಿ ನೃತ್ಯ, ಹುಲಿ ವೇಶ, ಡೊಳ್ಳು ಕುಣಿತ, ಕೊಡಗು ಸೇರಿ ರಾಜ್ಯದ ಪ್ರತಿ ಜಿಲ್ಲೆಯ ಸಂಸ್ಕೃತಿ ಪರಿಚಯಿಸುವ ಮೂಲಕ ಮತದಾನ ಜಾಗೃತಿ ಒಳಗೊಂಡಿದೆ. ಆಯೋಗದ ಚಿಹ್ನೆ ಮೂಲಕ ಮತಗಟ್ಟೆಯತ್ತ ಸೆಳೆಯಲು ಈ ಹಾಡು ಸಹಕಾರಿಯಾಗಿದೆ.

    ಯಾರೆಲ್ಲಾ ಹಾಡಿದ್ದಾರೆ: ಮತದಾನ ಜಾಗೃತಿಗಾಗಿ ಈ ಹಾಡು ಸಿದ್ಧಪಡಿಸಲಾಗಿದ್ದು, ಖ್ಯಾತ ಹಿನ್ನೆಲೆ ಗಾಯಕರು ತಮ್ಮ ಸಿರಿಕಂಠದಿಂದ ಅದ್ಭುತವಾಗಿ ಹಾಡಿದ್ದಾರೆ. ವಿ.ಮನೋಹರ್, ರಾಜೇಶ್ ಕೃಷ್ಣನ್, ಗುರುಕಿರಣ್, ಮಂಜುಳಾ ಗುರುರಾಜ್, ಪಟ್ಲ ಸತೀಶ್ ಶೆಟ್ಟಿ, ಸಂಗೀತಾ ಕಟ್ಟಿ, ಅಜಯ್ ವಾರಿಯರ್, ವಾಣಿ ಹರಿಕೃಷ್ಣ, ಎಂ.ಆರ್.ಅಭಿಷೇಕ್, ನಂದಿತಾ, ಅನನ್ಯಾ ಭಟ್, ಎಂ.ಡಿ.ಪಲ್ಲವಿ, ಎಂ.ಆರ್.ಶ್ರೀಹರ್ಷ ಗೀತೆಗೆ ಜೀವ ತುಂಬಿದ್ದಾರೆ. ಪ್ರತಿ ಗಾಯಕರು 10ರಿಂದ 20 ಸೆಕೆಂಡ್ ಹಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts