More

    ಮಣ್ಣಿನಲ್ಲಿ ಪೊಟ್ಯಾಷ್ ಪ್ರಮಾಣ ಕುಸಿತ; ರಾಸಾಯನಿಕ ಬಳಕೆ ಬಗ್ಗೆ ಇರಲಿ ಜಾಗ್ರತೆ: ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ಮಣ್ಣಿನಲ್ಲಿ ಪೊಟ್ಯಾಷ್ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿದಿದೆ. ರಾಸಾಯನಿಕ ಬಳಕೆಯಲ್ಲಿ ಜಾಗ್ರತೆ ವಹಿಸುವುದು ಮುಖ್ಯ ಎಂದು ಸಿಪಿಸಿಆರ್‌ಐ ಸಸ್ಯರೋಗ ಶಾಸ್ತ್ರ ಮುಖ್ಯಸ್ಥ ಡಾ. ವಿನಾಯಕ ಹೆಗಡೆ (ಕೇಂದ್ರ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆ) ಹೇಳಿದರು.
    ಎಲೆಚುಕ್ಕೆ ರೋಗ ಅಧ್ಯಯನಕ್ಕೆ ಇಲ್ಲಿಗೆ ಆಗಮಿಸಿರುವ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಡಕೆ ಕಾರ್ಯಪಡೆ ಅಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಚರ್ಚೆ ಮಾಡಿದರು.
    ಸಾಂಬಾರ ಪದಾರ್ಥಗಳಿಗೆ ಇರುವಂತೆ ನಿರ್ದಿಷ್ಟ ಬೆಳೆಗೆ ಗುಣಮಟ್ಟದ ಕಾರ್ಯ ಯೋಜನಾ ವಿಧಾನ ರೂಪಿಸಬೇಕು. ಕೇವಲ ಒಂದು ಬಾರಿ ಸಿಂಪಡಣೆಯಿಂದ ಹೆಚ್ಚುವರಿ ಲಾಭ ಪಡೆಯುವ ಔಷಧದ ಅಗತ್ಯ ಇದೆ. 15ರಿಂದ 30 ಬಾರಿ ಔಷಧ ಸಿಂಪಡಣೆ ಮಾಡುವುದು ಅಪಾಯಕಾರಿ. ಅದರ ಬದಲು ಪರ್ಯಾಯ ಬೆಳೆಗಳ ಕಡೆಗೆ ಗಮನ ಹರಿಸಬಹುದು ಎಂದು ಅಭಿಪ್ರಾಯಪಟ್ಟರು.
    1994ರಲ್ಲಿ ಮೊದಲ ಬಾರಿ ಕಾಫಿ ಬೆಳೆಯಲ್ಲಿ ಈ ರೋಗ ಕಂಡು ಬಂದಿತ್ತು. ಯುದ್ಧೋಪಾದಿಯಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಅಲ್ಲದೆ ವಿಜ್ಞಾನಿಗಳ ಸಲಹೆಗಿಂತ ಹೆಚ್ಚಿನ ಪ್ರಮಾಣದ ಔಷಧ ಸಿಂಪಡಣೆಯೂ ನಡೆಯುತ್ತಿದೆ. ಒಂದು ಲೀಟರ್ ನೀರಿಗೆ 2 ಮಿ.ಲೀ. ಔಷಧದ ಬದಲು 20 ಮಿ.ಲೀ. ಔಷಧ ಬಳಕೆಯಾಗುತ್ತಿದೆ. ಪ್ರತಿಕೂಲ ಹವಾಮಾನ ಇನ್ನಷ್ಟು ಹಾನಿ ಮಾಡುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು.
    ಮಾಹಿತಿ ಕೊರತೆ: ದೇಶದ ಪ್ರಮುಖ ವಾಣಿಜ್ಯ ಬೆಳೆ ಅಡಕೆಗೆ ತಗುಲುವ ರೋಗಗಳ ಮಾಹಿತಿ ಕೊರತೆ ಇನ್ನೂ ಮುಂದುವರಿದಿದೆ. ತಾಲೂಕಿನಲ್ಲಿ 650 ಹೆಕ್ಟೇರ್, ರಾಜ್ಯದಲ್ಲಿ 45 ಸಾವಿರ ಹೆಕ್ಟೇರ್ ಅಡಕೆ ತೋಟಗಳಿಗೆ ಎಲೆಚುಕ್ಕೆ ರೋಗ ಬಾಧಿಸಿದೆ ಎಂದು ಅಡಕೆ ಟಾಸ್ಕ್‌ಫೋರ್ಸ್ ಅಧ್ಯಕ್ಷ, ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಮಂಗಳವಾರ ಅಡಕೆ ಎಲೆಚುಕ್ಕೆ ರೋಗ ಪೀಡಿತ ತೋಟಗಳ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರದ ವಿಜ್ಞಾನಿಗಳ ತಂಡದೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅವರು ಚರ್ಚಿಸಿದರು.
    ಎಲೆಚುಕ್ಕೆ ರೋಗದ ಮೂಲ ಕಂಡುಕೊಳ್ಳಲು ಸಂಶೋಧನೆಗೆ ಈಗಾಗಲೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಅಡಕೆ ಟಾಸ್ಕ್‌ಫೋರ್ಸ್ 3 ಕೋಟಿ ರೂ. ಮೀಸಲಿರಿಸಿದೆ.ತಾಂತ್ರಿಕ ಸಲಕರಣೆಗಳಿಗೆ ಸರ್ಕಾರದಿಂದ ವಿಶೇಷ ನಿಧಿ ಒದಗಿಸಲಾಗುವುದು. ಸಿಬ್ಬಂದಿ ಕೊರತೆ ನೀಗಿಸಲು ಹೆಚ್ಚುವರಿ ತಾತ್ಕಾಲಿಕ ಸಿಬ್ಬಂದಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts