More

    ದೇವದಾಸಿಯರ ಕುರಿತ ಸಾಕ್ಷ್ಯಚಿತ್ರಕ್ಕೆ ದಾದಾಸಾಹೇಬ್‌ ಫಾಲ್ಕೆ ವಿಶೇಷ ಪ್ರಶಸ್ತಿ: ಕನ್ನಡತಿ ಪೂರ್ಣಿಮಾ ರವಿ ನಿರ್ದೇಶಿಸಿದ ಸಾಕ್ಷ್ಯಚಿತ್ರ

    ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಸಂಶೋಧಕಿ ಪೂರ್ಣಿಮಾ ರವಿ ನಿರ್ದೇಶಿಸಿರುವ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯಚಿತ್ರಕ್ಕೆ ಪ್ರತಿಷ್ಠಿತ “14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ-2024″ರಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕಿ ಪೂರ್ಣಿಮಾ ರವಿ ಹಾಗೂ ಸಾಕ್ಷ್ಯಚಿತ್ರದ ಕಾರ್ಯಕಾರಿ ನಿರ್ಮಾಪಕ ರವಿ ನಾರಾಯಣ ಪ್ರಶಸ್ತಿ ಸ್ವೀಕರಿಸಿದರು. ಜಗತ್ತಿನೆಲ್ಲೆಡೆಯಿಂದ ಸುಮಾರು 700 ಚಲನಚಿತ್ರಗಳು ಈ ಚಿತ್ರೋತ್ಸವಕ್ಕೆ ನಾಮಕರಣಗೊಂಡಿದ್ದವು.

    “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಸಾಕ್ಷ್ಯಚಿತ್ರದಲ್ಲಿ ಕರ್ನಾಟಕದ ಸುಮಾರು 40ಕ್ಕೂ ಹೆಚ್ಚು ದೇವದಾಸಿಯರ ಬದುಕಿನ ಕಥೆ-ವ್ಯಥೆ, ಕನಸುಗಳು, ಈ ಅನಿಷ್ಟ ಪದ್ಧತಿ ತೊಲಗಿಸಲು ಆಗಬೇಕಿರುವ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ.

    ಅರ್ಮೇನಿಯಾದ ಚಲನಚಿತ್ರ ನಿರ್ದೇಶಕ ರೋಮನ್ ಮುಶೆಗ್ಯಾನ್, ಜಪಾನ್‌ನ ಚಲನಚಿತ್ರ ನಿರ್ದೇಶಕ ನವೋಕಿ ಮತ್ಸುಮುರಾ, ಸ್ಪೇನ್‌ನ ಚಲನಚಿತ್ರ ನಿರ್ದೇಶಕ ಫ್ರಾನ್ಸಿಸ್ಕೊ ಸ್ಯಾಂಚೆಜ್ ಪಲಾಝೋನ್, ವೆನೆಜುವೆಲಾದ ಚಲನಚಿತ್ರ ನಿರ್ದೇಶಕ ಮತ್ತು ವೆನೆಜುವೆಲಾದ ರಾಯಭಾರ ಕಚೇರಿಯ ಸಲಹೆಗಾರ ಆಲ್ಫ್ರೆಡೋ ಕಾಲ್ಡೆರಾ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಜಿ ಎಲ್ ಭಾರದ್ವಾಜ್, ಚೀನಾದ ನಿರ್ದೇಶಕಿ ರಾನ್ ಲಿ, ಅಮೆರಿಕಾದ ನಿರ್ದೇಶಕ ಜೇಕ್ ಬೈರ್ಡ್ ತೀರ್ಪುಗಾರರ ತಂಡದಲ್ಲಿದ್ದರು.

    Wives Men Slaves

    ಸಾಕ್ಷ್ಯಚಿತ್ರದ ನಿರ್ದೇಶಕಿ ಪೂರ್ಣಿಮಾ ರವಿ ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಾಲೇಜಿನ ಇಂಗ್ಲಿಷ್ ಸಹ ಪ್ರಾಧ್ಯಾಪಕಿ ಡಾ. ನಯನಾ ಕಶ್ಯಪ್ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಸಾಕ್ಷ್ಯಚಿತ್ರಕ್ಕೆ ನಿರ್ದೇಶಕಿ ಪೂರ್ಣಿಮಾ ರವಿ ಅವರೇ ದ್ವನಿ ಮತ್ತು ಉಪಶೀರ್ಷಿಕೆಗಳ ಜತೆ ಚಿತ್ರಕಥೆಯನ್ನು ಬರೆದಿದ್ದಾರೆ.

    ಚಂದ್ರಶೇಖರ ಹೆಗ್ಡೆ (ಸಂಗೀತ ನಿರ್ದೇಶಕ), ರಕ್ಷಿತ್ ರೈ (ಸಂಕಲನ), ನಿಹಾಲ್ ನೂಜಿಬೈಲ್ (ಡಿಒಪಿ), ಸುನೀತಾ ಪ್ರವೀಣ್ (ಗಾಯಕಿ), ಸ್ವರ್ಣಶ್ರೀ ಪಟ್ಟೆ (ಗೀತರಚನೆಕಾರ), ಪ್ರವೀಣ್ ವರ್ಣಕುಟೀರ (ಸೃಜನಾತ್ಮಕ ಸಲಹೆಗಾರ), ಅಲೋಕ್ ನೂಜಿಬೈಲು (ಸೃಜನಾತ್ಮಕ ಪಾಲುದಾರ ) ಮತ್ತು ರವಿ ನಾರಾಯಣ (ಕಾರ್ಯನಿರ್ವಾಹಕ ನಿರ್ಮಾಪಕ) ಚಿತ್ರ ತಂಡದ ಭಾಗವಾಗಿದ್ದಾರೆ.

    ಧೋನಿ ಇಷ್ಟೊಂದು ಸ್ವಾರ್ಥಿಯಾದ್ರಾ? ಅವಮಾನ ಮಾಡಬಾರದಿತ್ತು, ಮಾಹಿ ವಿರುದ್ಧ ಫ್ಯಾನ್ಸ್​ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts