More

    ಆಕಾಶದತ್ತ ಮುಖ ಮಾಡಿದ ಅನ್ನದಾತ, ಭರಣಿ ಮಳೆ ನಿರೀಕ್ಷೆಯಲ್ಲಿ ರೈತರು: ಜಿಲ್ಲೆಯಲ್ಲಿ ಕೇಳೋರಿಲ್ಲ ಬಿತ್ತನೆ ಬೀಜ, ರಸಗೊಬ್ಬರ

    ಮಂಡ್ಯ: ಎತ್ತ ನೋಡಿದರೂ ಒಣಗಿ ನಿಂತಿರುವ ಬೆಳೆ, ಎಂತಹ ಬರದಲ್ಲಿಯೂ ಬತ್ತದ ಕೆರೆಗಳು ಕೂಡ ಒಂದು ಹನಿ ನೀರಿಗಾಗಿ ಹವಣಿಸುತ್ತಿವೆ, ಒಂದೆಡೆ ಜನ ಮತ್ತೊಂದೆಡೆ ಜಾನುವಾರು ಕುಡಿಯುವ ನೀರಿಗಾಗಿ ಹಂಬಲಿಸುವಂತಹ ಸ್ಥಿತಿ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಸಕ್ಕರೆನಾಡು ಅಕ್ಷರಶಃ ಬರಡು ಭೂಮಿಯಾಗಿ ಬದಲಾಗಿದೆ.
    ಜಿಲ್ಲೆಯ ಇತಿಹಾಸದಲ್ಲಿ ಇಂತಹದೊಂದು ಭೀಕರ ಬರಗಾಲ ಎದುರಾದ ದಿನಗಳಿಲ್ಲ. ಅಷ್ಟರಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ. ಪರಿಣಾಮ ಅನ್ನದಾತರು ಆಕಾಶದತ್ತ ಮುಖ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಚೆಲ್ಲಾಟವಾಡುತ್ತಿರುವ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಜಿಲ್ಲಾದ್ಯಂತ ವಿಶೇಷ ಪೂಜೆಗಳು ನಡೆಯಲಾರಂಭಿಸಿವೆ. ಮತ್ತೊಂದೆಡೆ ಈ ಬಾರಿಯೂ ವರುಣ ಮುನಿಸಿಕೊಂಡರೆ ಮುಂದೇನೂ ಎನ್ನುವ ಆತಂಕವೂ ಮನೆ ಮಾಡಲಾರಂಭಿಸಿದೆ.
    ಎದುರಾಗಿದೆ ಆತಂಕ: ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿಯೇ ಮಳೆ ಕೈಕೊಟ್ಟಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಪ್ರತಿ ವರ್ಷ ಏಪ್ರಿಲ್‌ನಲ್ಲಿ 46.6 ಮಿ.ಮೀ ವಾಡಿಕೆ ಮಳೆಯಾಗಬೇಕು. 2022ರಲ್ಲಿ 46.6 ಮಿ.ಮೀ ವಾಡಿಕೆ ಮಳೆಗೆ 66.6 ಮಿ.ಮೀ ವಾಸ್ತವ ಮಳೆಯಾಗಿತ್ತು. ಆದರೆ 2023ರಲ್ಲಿ 46.6 ಮಿ.ಮೀ ವಾಡಿಕೆ ಮಳೆಗೆ ಕೇವಲ 26.2 ಮಿ.ಮೀ ಮಳೆಯಾಗಿದೆ. ಇನ್ನು ಈ ವರ್ಷ ಏ.21ರವರೆಗೆ 27.3 ಮಿ.ಮೀ ಮಳೆಯಾಗಬೇಕಿತ್ತು. ಆಗಿದ್ದು ಕೇವಲ 7.4 ಮಿ.ಮೀ ಮಳೆಯಷ್ಟೇ. ಏ.13ರಿಂದ 26ರವರೆ ಅಶ್ವಿನಿ ಮಳೆಯಾಗಬೇಕಿತ್ತು. ಆದರೆ ವರುಣ ಮುನಿಸು ತೋರಿದ್ದಾನೆ. ಇನ್ನು ಈ ನಡುವೆ ಗಮನಿಸಬೇಕಾದ ಅಂಶವೆಂದರೆ ಏಪ್ರಿಲ್‌ನಲ್ಲಿ ಜಿಲ್ಲೆಯ ಕೆಲ ಗ್ರಾಮದಲ್ಲಿ ನಡೆಯುವ ದೇವರ ಹಬ್ಬದಲ್ಲಿ ಮಳೆ ಬರುತ್ತಿದ್ದ ಉದಾಹರಣೆಗಳಿವೆ. ಈ ಬಾರಿ ಅದು ಕೈಕೊಟ್ಟಿರುವುದು ರೈತರಲ್ಲಿ ದುಗುಡ ಹೆಚ್ಚಿಸಿದೆ.
    ಇನ್ನು ಏ.27ರಿಂದ ಮೇ.10ರವರೆಗೆ ಭರಣಿ ಮಳೆಯಾಗಬೇಕಿದೆ. ‘ಭರಣಿ ಸುರಿದರೆ ಧರಣಿ ಬದುಕಿತು’ ಎನ್ನುವ ಗಾಧೆ ಮಾತಿದೆ. ಅಂತೆಯೇ ಮೇ ತಿಂಗಳಲ್ಲಿ 99.9 ಮಿ.ಮೀ ವಾಡಿಕೆ ಮಳೆಯಾಗಬೇಕು. 2022ರಲ್ಲಿ ಈ ತಿಂಗಳಲ್ಲಿ ಬರೋಬರಿ 294 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷ 138.5 ಮಿ.ಮೀ ಮಳೆಯಾಗಿದೆ. ಆದ್ದರಿಂದ ಈ ವರ್ಷವೂ ಮಳೆ ಸುರಿಯುವ ಆತೀವ ನಿರೀಕ್ಷೆ ಇದೆ.

    ಆಕಾಶದತ್ತ ಮುಖ ಮಾಡಿದ ಅನ್ನದಾತ, ಭರಣಿ ಮಳೆ ನಿರೀಕ್ಷೆಯಲ್ಲಿ ರೈತರು: ಜಿಲ್ಲೆಯಲ್ಲಿ ಕೇಳೋರಿಲ್ಲ ಬಿತ್ತನೆ ಬೀಜ, ರಸಗೊಬ್ಬರ

    ಕೆರೆಗಳಲ್ಲಿ ಹನಿ ನೀರಿಲ್ಲ
    ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 174, ಹೇಮಾವತಿ ಅಚ್ಚುಕಟ್ಟೆ ವ್ಯಾಪ್ತಿಯ ಕೆರೆ 329, ಸಣ್ಣ ನೀರಾವರಿ ಇಲಾಖೆಗೆ ಸೇರಿದ 48, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 411 ಕೆರೆಗಳಿವೆ. ಇದರಲ್ಲಿ ಶೇ.85ರಷ್ಟು ಕೆರೆಗಳು ಪೂರ್ಣ ಪ್ರಮಾಣದಲ್ಲಿ ನೀರಿಲ್ಲದೆ ಖಾಲಿಯಾಗುತ್ತಿವೆ. ಇನ್ನು ಎಂತಹ ಬೇಸಿಗೆ ಕಾಲದಲ್ಲಿಯೂ ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳ ಒಣಗುತ್ತಿರಲಿಲ್ಲ. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ಹನಿ ನೀರಿಲ್ಲದೆ ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿವೆ.

    ಆಕಾಶದತ್ತ ಮುಖ ಮಾಡಿದ ಅನ್ನದಾತ, ಭರಣಿ ಮಳೆ ನಿರೀಕ್ಷೆಯಲ್ಲಿ ರೈತರು: ಜಿಲ್ಲೆಯಲ್ಲಿ ಕೇಳೋರಿಲ್ಲ ಬಿತ್ತನೆ ಬೀಜ, ರಸಗೊಬ್ಬರ

    ಬಿತ್ತನೆ ಬೀಜ ಕೇಳೋರಿಲ್ಲ
    ಮಳೆಯ ಅಭಾವದಿಂದಾಗಿ ರೈತರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಪರಿಣಾಮ ಕೃಷಿ ಇಲಾಖೆಯಿಂದ ವಿತರಿಸುವ ಬಿತ್ತನೆ ಬೀಜವನ್ನು ಕೇಳುವವರಿಲ್ಲ. ಅಶ್ವಿನಿ ಮಳೆಯಾಗದಿದ್ದರೆ ಈಗಾಗಲೇ ಜಿಲ್ಲೆಯಲ್ಲಿ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಮದ್ದೂರು, ಮಳವಳ್ಳಿ ತಾಲೂಕಿನಲ್ಲಿ ಅಲಸಂಧೆ ಹಾಗೂ ಎಳ್ಳು ಬೆಳೆ ಬಿತ್ತನೆಯಾಗಬೇಕಿತ್ತು. ಆದರೆ ಈ ಬಾರಿ ಸುಮಾರು 485 ಕ್ವಿಂಟಾಲ್‌ನಷ್ಟು ಅಲಸಂಧೆ ಬಿತ್ತನೆ ಬೀಜ ಇಲಾಖೆಯ ಉಗ್ರಾಣದಲ್ಲಿದೆ. ಇನ್ನೊಂದೆಡೆ ಸುಮಾರು 28 ಸಾವಿರ ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರದ ಸಂಗ್ರಹವಿದೆ. ಇನ್ನು ಪ್ರಸ್ತುತ ಜಿಲ್ಲೆಯಲ್ಲಿ ಕಬ್ಬು, ಭತ್ತ, ರಾಗಿ ಬೆಳೆ ಇದೆ. ಆದರೆ ಈ ಪೈಕಿ ಶೇ.40ಕ್ಕೂ ಹೆಚ್ಚು ಕಬ್ಬು ಸಂಪೂರ್ಣ ಹಾಳಾಗಿ ಹೋಗಿದೆ. ಈ ಕಾರಣಕ್ಕೆ ಸಿಕ್ಕಷ್ಟು ದರಕ್ಕೆ ಅಳಿದುಉಳಿದ ಕಬ್ಬನ್ನು ಕಟಾವು ಮಾಡಿ ತಮಿಳುನಾಡಿಗೆ ಸರಬರಾಜು ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts