More

    ಕೋವಿಶೀಲ್ಡ್ ಅಡ್ಡ ಪರಿಣಾಮ: ರಾಜಕಾರಣ ಸಲ್ಲದು ಎಂದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

    ಬೆಂಗಳೂರು: ಮಹಾಮಾರಿ ಕರೊನಾ ಸಾಂಕ್ರಾಮಿಕ ಸೋಂಕು ನಿರೋಧಕ ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಕುರಿತು ವಿಜ್ಞಾನಿಗಳಮಟ್ಟದಲ್ಲಿ ವಿಶ್ಲೇಷಣೆ, ವೈಜ್ಞಾನಿಕವಾಗಿ ಚರ್ಚೆಯಾಗಬೇಕೇ ಹೊರತು ರಾಜಕಾರಣಕ್ಕೆ ಎಳೆದು ತರುವುದು ಸಲ್ಲದು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಕ್ಷೇಪಿಸಿದರು.

    ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಪಿಡುಗಿಗೆ ಇಡೀ ಜಗತ್ತು ತಲ್ಲಣಿಸಿತ್ತು. ಈ ಸಂದರ್ಭದಲ್ಲಿ ಜೀವ ಹಾಗೂ ಜೀವನ ರಕ್ಷಣೆ ಮಾಡುವುದು ಅಷ್ಟೇ ಮುಖ್ಯವಾಗಿತ್ತು. ಎಲ್ಲಾ ಮೆಡಿಕಲ್ ಟೆಸ್ಟಲ್ಲಿ ಪ್ರೂವ್ ಆದ ಬಳಿಕವೇ ಕೋವಿಶೀಲ್ಡ್ ಲಸಿಕೆ ಜನರಿಗೆ ಕೊಡಲಾಗಿದೆ. ಸಾಮಾನ್ಯ ಜ್ವರಕ್ಕೆ ಬಳಸುವ  ಕ್ರೋಸಿನ್ ಮಾತ್ರೆಯಲ್ಲೂ ಕೆಲವರಿಗೆ ಅಲರ್ಜಿ ಆಗುತ್ತದೆ ಎಂದು ಸಮಜಾಯಿಷಿ ನೀಡಿದರು.

    ಲಸಿಕೆ ನೀಡಿದ್ದರಿಂದ ಎಷ್ಟು ಒಳ್ಳೆಯದಾಗಿದೆ ಅನ್ನೋದು ಮುಖ್ಯ, ಎಷ್ಡು ಜನರ ಪ್ರಾಣ ಉಳಿದಿದೆ ಅನ್ನೋದು ಮುಖ್ಯ. ಬಹಳ ಕಡಿಮೆ ಪ್ರಮಾಣದ ಸೈಡ್ ಎಫೆಕ್ಟ್ ಬಗ್ಗೆ ಉಲ್ಲೇಖ ಮಾಡುವುದಲ್ಲ. ರಾಜಕಾರಣದ ದೃಷ್ಟಿಯಿಂದಲ್ಲ, ಸಮಾಜದ ಹಿತದೃಷ್ಟಿಯಿಂದ ಚರ್ಚೆಯಾಗಬೇಕು. ಇದರಲ್ಲಿ ರಾಜಕಾರಣ ಪ್ರವೇಶ ಮಾಡಬಾರದು ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪುನರುಚ್ಚರಿಸಿದರು.

    ಬಿಜೆಪಿ ನಿಲುವು ಸ್ಪಷ್ಟ

    ಯಾವುದೇ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಅನಾಗರಿಕ ಕೃತ್ಯ, ಆಗಲೇಬಾರದು. ಯಾವುದೇ ವ್ಯಕ್ತಿ ಹೆಣ್ಣುಮಕ್ಕಳ ಅಮಾಯಕತನ ದುರುಪಯೋಗ ಪಡಿಸಿಕೊಂಡು ದೌರ್ಜನ್ಯ ಮಾಡಬಾರದು‌. ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ತಪ್ಪು ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.

    ಈ ಪ್ರಕರಣದಲ್ಲಿ ಸರ್ಕಾರ  ತಕ್ಷಣ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ಕ್ರಮ‌ ಕೈಗೊಳ್ಳಲಿಲ್ಲ. ಪ್ರಜ್ವಲ್ ರನ್ನು ಬೇರೆ ದೇಶಕ್ಕೆ ಹೋಗಲು ಬಿಟ್ಟವರೇ ಕಾಂಗ್ರೆಸ್ ನವರು. ಪ್ರಕರಣ ಹೊರಗೆ ಬರಲೆಂದು ಮೊದಲೇ ಸರ್ಕಾರ ಕ್ರಮ‌ಕೈಗೊಳ್ಳಲಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಕಾಂಗ್ರೆಸ್ ನವರಿಗೆ ಗೌರವವಿಲ್ಲ. ಇದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

    ಯಾರು ತಪ್ಪು ಮಾಡಿದರೂ ತಪ್ಪೇ. ಕಾಂಗ್ರೆಸ್ ತನ್ನ ವಿಫಲತೆಯನ್ನು ಬಿಜೆಪಿ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷ ಅಂದರೇನೆ ಕುತಂತ್ರ. ಪೆನ್ ಡ್ರೈವ್ ಹೊರ ಬಂದದ್ದು ಹೇಗೆ ? ಹಂಚಿದವರು ಯಾರು ? ತನಿಖೆಯಾಗಲಿ. ಅವರದೇ ಸರ್ಕಾರವಿದೆ, ತನಿಖೆ ನಡೆಸಲಿ, ಸತ್ಯಾಂಶ ಹೊರಗಿಡಲಿ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts