More

    ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ತಾಯಿ!

    ನರಗುಂದ: ಕರೊನಾ ಹೆಮ್ಮಾರಿ ಹರಡಿರುವ ಸಂದರ್ಭದಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ಮಾನವೀಯತೆ ದೂರಾಗುತ್ತಿರುವುದು ಕಂಡುಬರುತ್ತಿದೆ. ಆದರೆ, ತಾಲೂಕಿನ ರಡ್ಡೇರ ನಾಗನೂರ ಗ್ರಾಮದಲ್ಲಿ ನಡೆದ ಮನಕಲುಕುವ ಘಟನೆಯೊಂದು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುವಂತಿದೆ.

    ಗ್ರಾಮದ ಕಸ್ತೂರೆವ್ವ ತನ್ನ ಮಾಂಗಲ್ಯಸರ ಅಡವಿಟ್ಟು, ಮಕ್ಕಳ ಆನ್​ಲೈನ್ ವಿದ್ಯಾಭ್ಯಾಸಕ್ಕಾಗಿ ಟಿವಿ ಖರೀದಿಸಿದ್ದಾಳೆ. ಆದರೆ, ಸರ ಅಡವಿಟ್ಟುಕೊಂಡ ವ್ಯಕ್ತಿಗೆ ವಿಷಯ ಗೊತ್ತಾಗಿ ತಕ್ಷಣವೇ ಆತ ಸರವನ್ನು ವಾಪಸ್ ನೀಡಿದ್ದಾನೆ. ಕಸ್ತೂರೆವ್ವ (42) ಅವರದು ಬಡ ಕುಟುಂಬ. ಕಸ್ತೂರೆವ್ವ, ಮುತ್ತಪ್ಪ ದಂಪತಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಸೇರಿ 4 ಮಕ್ಕಳಿದ್ದಾರೆ. ಮುತ್ತಪ್ಪ ಕೂಲಿ ಕೆಲಸ ಮಾಡುತ್ತಾರೆ. ಹೈನುಗಾರಿಕೆ ಕೂಡ ಇದೆ. ಹಿರಿಯ ಪುತ್ರಿ ಮದುವೆ ವೇಳೆ 2 ಎಕರೆ ಜಮೀನಿನ ಮೇಲೆ 1 ಲಕ್ಷ ರೂ. ಸಾಲ ಮಾಡಿದ್ದಾರೆ. ಎರಡನೇ ಮಗಳು ಪಿಯುಸಿ, 3ನೇ ಮಗಳು 9ನೇ ತರಗತಿಯಲ್ಲಿ, ಮಗ 7ನೇ ತರಗತಿಯಲ್ಲಿ ಓದುತ್ತಿದ್ದಾರೆ. ಲಾಕ್​ಡೌನ್ ಸಡಿಲಿಕೆ ನಂತರ ಆನ್​ಲೈನ್ ಪಾಠಗಳನ್ನು ಆರಂಭಿಸಲಾಗಿದೆ. ಚಂದನ ವಾಹಿನಿಯಲ್ಲಿ ನಿತ್ಯ ಪ್ರಸಾರವಾಗುವ ಪಾಠಗಳನ್ನು ವೀಕ್ಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ, ಇವರ ಮನೆಯಲ್ಲಿ ಟಿವಿ ಇಲ್ಲ. ಇದರಿಂದ ಪಾಠದ ವಿಷಯವಾಗಿ ಶಿಕ್ಷಕರು ಕರೆ ಮಾಡಿ ಕೇಳಿದ ಪ್ರಶ್ನೆಗೆ ಮಕ್ಕಳ ಬಳಿ ಉತ್ತರವಿರುತ್ತಿರಲಿಲ್ಲ. ಅದನ್ನರಿತ ತಾಯಿ ಕಸ್ತೂರೆವ್ವ ಗದಗ ನಗರದ ವ್ಯಕ್ತಿಯೊಬ್ಬರಲ್ಲಿ ಮಾಂಗಲ್ಯ ಸರ ಅಡವಿಟ್ಟು ಟಿವಿ ತಂದು ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಸರ ಅಡವಿಟ್ಟುಕೊಂಡ ವ್ಯಕ್ತಿಗೆ ಈ ವಿಷಯ ಗೊತ್ತಾಗಿ ಮರುಗಿದ್ದಾನೆ. ತಕ್ಷಣ ಸರ ವಾಪಸು ಮಾಡಿ ಮಾನವೀಯತೆ ಮೆರೆದಿದ್ದಾನೆ. ಜತೆಗೆ, 20 ಸಾವಿರ ರೂಪಾಯಿ ನೆರವು ನೀಡಿ, ಅದನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವಂತೆ ತಿಳಿಸಿದ್ದಾನೆ. ಈ ಸುದ್ದಿ ತಿಳಿದು ಸಚಿವ ಸಿ.ಸಿ. ಪಾಟೀಲ ಅವರು ತಮ್ಮ ಆಪ್ತರ ಮೂಲಕ 20 ಸಾವಿರ ರೂ. ನೆರವು ನೀಡಿದ್ದಾರೆ.

    ಮಾಜಿ ಸಚಿವ ಜಮೀರ್ ಅಹ್ಮದ್ ಸಹಾಯಹಸ್ತ

    ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾಳಿಯನ್ನೇ ಅಡವಿಟ್ಟ ಕಷ್ಟ ಅರಿತ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರು ಅವರನ್ನು ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮಕ್ಕೆ ಕಳುಹಿಸಿ ಕಸ್ತೂರೆವ್ವ ಚಲವಾದಿ ಅವರಿಗೆ ತಾಳಿ ಬಿಡಿಸಿಕೊಳ್ಳಲು 15 ಸಾವಿರ ರೂ. ಹಾಗೂ ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ 35 ಸಾವಿರ ರೂಪಾಯಿ ನೀಡಿದರು. ನಂತರ ಮಾತನಾಡಿದ ಅಲ್ತಾಫ್ ಕಿತ್ತೂರ, ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಆದೇಶದಂತೆ ಈ ಒಂದು ಮಹತ್ವದ ಕೆಲಸಕ್ಕೆ ಅವರ ಪರವಾಗಿ ಬಂದಿದ್ದೇನೆ. ಆರ್ಥಿಕವಾಗಿ ತೊಂದರೆಯಲ್ಲಿದ್ದ ಬಡವರ ಕುರಿತು ಅವರ ಗಮನಕ್ಕೆ ತಂದರೆ ಸಹಾಯ ಮಾಡುತ್ತಾರೆ ಎಂದರು. ಅನಿಲ ಎನ್. ಬೇವಿನಕಟ್ಟಿ, ರಬ್ಬಾನಿ ರಾಯಚೂರ, ಮುತ್ತಪ್ಪ ಚಲವಾದಿ, ಕಾವೇರಿ, ಸುಧಾ, ಸುರೇಖಾ ಹಾಗೂ ಅಭಿಷೇಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts