More

    ಮಕ್ಕಳ ದಾಖಲಾತಿ ಹೆಚ್ಚಿಸಿದ ಕರೊನಾ ; ಖಾಸಗಿ ಶಾಲೆಗಳ ಶುಲ್ಕ ತಂದ ಆತಂಕ ; ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ ಪಾಲಕರು

    ಚಿಕ್ಕನಾಯಕನಹಳ್ಳಿ : ಕರೊನಾ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿದ್ದು, ಪಾಲಕರ ಚಿತ್ತವನ್ನು ಸರ್ಕಾರಿ ಶಾಲೆಗಳತ್ತ ಹರಿಸುವಂತೆ ಮಾಡಿದೆ. ಮಕ್ಕಳ ನೋಂದಣಿ ಗಣನೀಯ ಹೆಚ್ಚಾಗಿದ್ದು, ಖಾಸಗಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿಯಲ್ಲಿ ಕೊರತೆ ಉಂಟಾಗಿದೆ.

    ತಾಲೂಕಿನಲ್ಲಿರುವ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಒಟ್ಟು 26438 ವಿದ್ಯಾರ್ಥಿಗಳು 2021-22ನೇ ಸಾಲಿಗೆ ದಾಖಲಾಗಿದ್ದು, ಕಳೆದ 2020-21ನೇ ಸಾಲಿನಲ್ಲಿ ಒಟ್ಟು 26664 ಮಕ್ಕಳು ದಾಖಲಾಗಿದ್ದಾರೆ.

    ಸರ್ಕಾರಿ ಶಾಲೆಗಳಿಗೆ ಕಳದೆ ಬಾರಿ ಒಟ್ಟು 16413ವಿದ್ಯಾರ್ಥಿಗಳು ದಾಖಲಾಗಿದ್ದರೆ, ಈ ಬಾರಿ ಒಟ್ಟು 16782 ವಿದ್ಯಾರ್ಥಿಗಳು ದಾಖಲಾಗುವ ಮೂಲಕ ಶೇ. 102.25 ಹೆಚ್ಚಾಗಿದೆ. ಅನುದಾನಿತ ಶಾಲೆಗಳಲ್ಲಿ ಕಳೆದ ಬಾರಿ ಒಟ್ಟು 4714 ವಿದ್ಯಾರ್ಥಿಗಳು ದಾಖಲಾಗಿದ್ದರೆ ಈ ಬಾರಿ 4706 ವಿದ್ಯಾರ್ಥಿಗಳು ದಾಖಲಾಗುವ ಮೂಲಕ ಶೇ.9.83 ಕಡಿಮೆಯಾಗಿದೆ.

    ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಕಳೆದ 2020-21ನೇ ಸಾಲಿನಲ್ಲಿ ಒಟ್ಟು 4684 ವಿದ್ಯಾರ್ಥಿಗಳು ದಾಖಲಾಗಿದ್ದರೆ ಈ ಬಾರಿ ಒಟ್ಟು 4044 ವಿದ್ಯಾರ್ಥಿಗಳು ದಾಖಲಾಗಿದ್ದು, ಶೇ.86.34 ಕಡಿಮೆಯಾಗುವ ಮೂಲಕ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವುದರಲ್ಲಿ ಈ ವರ್ಷ ಹೆಚ್ಚಳವಾಗಿದೆ. ಇದಕ್ಕೆ ಕಾರಣ ಲಾಕ್‌ಡೌನ್ ಆಗಿ ಶಾಲೆಗಳು ನಡೆಯದಿದ್ದರೂ ಖಾಸಗಿ ಶಾಲೆಗಳಿಗೆ ಶುಲ್ಕ ಸಂದಾಯ ಮಾಡಬೇಕಾಯಿತಲ್ಲ ಎಂಬ ಭಾವನೆ ಒಂದು ಕಡೆಯಾದರೆ ಕೆಲಸವಿಲ್ಲದೆ ಅದಾಯಕ್ಕೆ ಕತ್ತರಿ ಬಿದ್ದಿದ್ದು ತಮ್ಮ ಮಕ್ಕಳ ವಿದ್ಯಾಭ್ಯಾಸದ ಮೇಲೆಯೂ ಅದರ ಪರಿಣಾಮ ಬೀರಿರುವುದು ಕಾರಣವಾಗಿದೆ.

    ನಮ್ಮ ಶಾಲೆಯಲ್ಲಿ ಈ ಹಿಂದೆ ಇದ್ದಂತಹ ಸಂಖ್ಯೆಗಿಂತ ಈ ವರ್ಷ ದಾಖಲಾತಿ ಹೆಚ್ಚಾಗಿದ್ದು ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ 40 ವಿದ್ಯಾರ್ಥಿಗಳಿದ್ದವರು ಈಗ ಒಂದನೇ ತರಗತಿಗೆ 68 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕರೊನಾ ಸರ್ಕಾರಿ ಶಾಲೆಗಳ ಬಗೆಗಿನ ಪಾಲಕರ ಅಭಿಪ್ರಾಯವನ್ನೇ ಬದಲಾಯಿಸಿತು.
    ಎಂ.ಎಸ್.ರವಿಕುಮಾರ್, ಮಾದರಿ ಹಿ.ಪ್ರಾ. ಶಾಲೆ ಎಸ್‌ಡಿಎಂಸಿ ಅಧ್ಯಕ್ಷ

    ಮಗಳನ್ನು ಎಲ್‌ಕೆಜಿಯಿಂದಲೂ ಶೆಟ್ಟಿಕೆರೆಯ ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದೆ. ಆದರೆ ಈಗ ಮೂರನೇ ತರಗತಿಗೆ ಕಲ್ಲುಬಾವಿಪಾಳ್ಯದ ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದೇನೆ. ಪಾಠ ಕೇಳದೆ ಖಾಸಗಿ ಶಾಲೆಯ ಶುಲ್ಕವನ್ನು ಪಾವತಿಸಬೇಕಾದ ಕಾರಣ ಈ ನಿರ್ಧಾರಕ್ಕೆ ಬಂದೆ.
    ಎಸ್.ಬಿ.ಮಂಜುನಾಥ್ ಹೊಸಪಾಳ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts