More

    ಮಂಗಲದಲ್ಲಿ ಇಂದಿನಿಂದ ದೊಡ್ಡಬ್ಬ : 25 ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾತ್ರಾಮಹೋತ್ಸವ


    ಎಸ್.ಲಿಂಗರಾಜು ಮಂಗಲ ಹನೂರು
    ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ 25 ವರ್ಷಗಳಿಂದ ಸ್ಥಗಿತಗೊಂಡಿದ್ದ ಶ್ರೀ ಆದಿಶಕ್ತಿ ಕೋಣನಮಾರಮ್ಮ ಜಾತ್ರಾಮಹೋತ್ಸವ (ದೊಡ್ಡಬ್ಬ) ಮೇ 23 ರಿಂದ 20 ದಿನಗಳ ಕಾಲ ನಡೆಯಲಿದ್ದು, ಸುತ್ತೇಳು ಹಳ್ಳಿಗಳ ಜನರು ಭಾಗಿಯಾಗಲಿದ್ದಾರೆ.


    ಶಾಂತಿ, ಸೌಹರ್ದತೆ, ಭಾತೃತ್ವದ ಸಲುವಾಗಿ ಹಾಗೂ ಗ್ರಾಮಗಳಿಗೆ ಸಮೃದ್ಧಿ ಫಲಿಸಲಿ ಎನ್ನುವ ಉದ್ದೇಶದಿಂದ ಮಂಗಲ, ಹನೂರು, ಗುಂಡಾಪುರ, ಅಲಗುಮೂಲೆ, ಆನಾಪುರ, ಕಣ್ಣೂರು, ಕಾಮಗೆರೆ ಹಾಗೂ ಮೋಡಳ್ಳಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಮಂಗಲ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕೋಣನಮಾರಮ್ಮನಿಗೆ ಪ್ರತಿ 5 ಅಥವಾ 7 ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವ ನೆರವೇರಿಸುತ್ತಿದ್ದರು. ಆದರೆ ಕಾರಣಾಂತರದಿಂದ 1997ರ ನಂತರ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸುತ್ತೇಳು ಹಳ್ಳಿಗಳ ವಿವಿಧ ಸಮುದಾಯದ ಯಜಮಾನರು ಚರ್ಚಿಸಿ ದೊಡ್ಡಬ್ಬ ಆಚರಣೆಗೆ ನಿರ್ಧರಿಸಿದ್ದು, ಜೂನ್ 13ರವರೆಗೆ ನಡೆಯಲಿದೆ.


    ಏನೇನು ಕಾರ್ಯಕ್ರಮ? : ಮೇ 23 ರಂದು ಗ್ರಾಮಸ್ಥರು ಕೋಣನಮಾರಮ್ಮ ಮೂರ್ತಿಯೊಂದಿಗೆ ಗುಂಡಾಲ್ ಜಲಾಶಯ ಸಮೀಪವಿರುವ ಕಲ್ಲುಕಟ್ಟೆಗೆ ತೆರಳಿ 101 ಪೂಜೆ ನೆರವೇರಿಸುವುದರ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದೆ. 24 ರಂದು ಕಣ್ಣೂರು, ಆನಾಪುರ ಗ್ರಾಮದಲ್ಲಿ ದೇವಿಯ ಮೂರ್ತಿ ಹಾಗೂ ಬೀರುದೇವರ ಮೆರವಣಿಗೆ. 29 ರಂದು ದೇಗುಲದ ಮುಂಭಾಗ ಅಗ್ನಿಕಂಬ ಹಾಕುವುದು. 30 ರಂದು ಬಲಿಕಂಬ ಹಾಕುವುದು. ಜೂ.5 ರಂದು ರಾತ್ರಿ ದೊಡ್ಡಾಡುವುದು. 7 ರಂದು ದೇಗುಲಕ್ಕೆ ತಂಪುಜ್ಯೋತಿ ಅರ್ಪಣೆ. ಮಧ್ಯಾಹ್ನ ಕೋಣನ ಪೂಜೆ, ರಾತ್ರಿ ಮಾದಗ ಆಡುವುದು.


    8 ರಂದು ಸಂಜೆ ರಾಕ್ಷಸನ ಸಂಹಾರ. 9 ರಂದು ಬೆಳಗ್ಗೆ ಮೊದಲಿಗೆ ಅಲಗುಮೂಲೆಯ ಮಲ್ಲೇಶ್ವರಸ್ವಾಮಿಯ ರಥೋತ್ಸವ, ನಂತರ ಮಂಗಲದ ಕೋಣನಮಾರಮ್ಮನ ರಥೋತ್ಸವ ನಡೆಯಲಿದೆ. 10 ರಂದು ಕೊಂಡೋತ್ಸವ ಜರುಗಲಿದ್ದು, ಅಲಗುಮೂಲೆಯ ವೀರಭದ್ರೇಶ್ವರ, ಕಲ್ಲುಕಟ್ಟೆಯ ಬ್ರಹ್ಮಲಿಂಗೇಶ್ವರ, ಮೋಡಳ್ಳಿಯ ಬೀರೇಶ್ವರ ಅರ್ಚಕರು ಕೊಂಡ ಹಾಯಲಿದ್ದಾರೆ. ಮಧ್ಯಾಹ್ನ ಮಲ್ಲೇಶ್ವರ, ಕೆಂಡಗಣ್ಣೇಶ್ವರ ಸತ್ತಿಗೆ ಹಾಗೂ ಬೀರುದೇವರ ಉತ್ಸವ, ರಾತ್ರಿ ಉಯ್ಯಲೆ ಮಂಟಪದಲ್ಲಿ ದೇವಿ ಮೂರ್ತಿಯ ಉಯ್ಯಲೋತ್ಸವ ನೆರವೇರಲಿದೆ. 11 ರಂದು ಆನಾಪುರ ಹಾಗೂ ಗುಂಡಾಪುರ ಗ್ರಾಮದಲ್ಲಿ ಮೆರವಣಿಗೆ ನಂತರ ರಾತ್ರಿ ಮೂರ್ತಿಯನ್ನು ದೇಗುಲಕ್ಕೆ ಕರೆ ತರಲಾಗುವುದು. 13 ರಂದು ದೇಗುಲಕ್ಕೆ ಹೆಬ್ಬರ ಕೊಡುವುದರ ಮೂಲಕ ದೊಡ್ಡಬ್ಬ ಮುಕ್ತಾಯವಾಗಲಿದೆ.


    ಅಗತ್ಯ ಸಿದ್ಧತೆ: ಜಾತ್ರೆ ಹಿನ್ನೆಲೆಯಲ್ಲಿ ದೇಗುಲಗಳಿಗೆ ಬಣ್ಣ ಬಳಿಯಲಾಗಿದ್ದು, ಪೂಜಾ ಕೈಂಕರ್ಯ, ಮೆರವಣಿಗೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಪೂರ್ಣ ಶಿಥಿಲಗೊಂಡಿದ್ದ ಪರಿಣಾಮ ತೇರುಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಮಾಂಸಾಹಾರ ಹಾಗೂ ಒಗ್ಗರಣೆ ಹಾಕುವುದನ್ನು ನಿಷೇಧಿಸಲಾಗಿದೆ. ಪ್ರತಿ ಕುಟುಂಬದವರು ಮನೆಯನ್ನು ಬಣ್ಣದಿಂದ ಸಿಂಗರಿಸಿದ್ದು, ಹಬ್ಬದ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲ ಸಮುದಾಯದ ಜನರು ಹಬ್ಬಕ್ಕೆ ಸಾಥ್ ನೀಡಿದ್ದಾರೆ. ಈ ಹಬ್ಬವನ್ನು 25 ವರ್ಷಗಳ ನಂತರ ಅಚರಿಸುತ್ತಿರುವುದರಿಂದ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಂತಸ ಮನೆ ಮಾಡಿದ್ದು, ಲವಲವಿಕೆಯಿಂದ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts